ವಿದ್ಯಾವಂತರೇ ಅಭದ್ರತೆಗೆ ಕಾರಣ
ಭದ್ರಾವತಿ: ಭಾರತದ ಭವ್ಯ ಸಂಸ್ಕೃತಿ ಕಟ್ಟಡದೊಳಗಿರಲು ಸಾಧ್ಯವಿಲ್ಲ. ಅದು ನಮ್ಮ ಆಚಾರ ವಿಚಾರಗಳಲ್ಲಿ ಹಾಸುಹೊಕ್ಕಾಗಿರಬೇಕೆಂದು ಕರ್ನಾಟಕದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದರು.
ಅದಿಚುಂಚನಗಿರಿ ಮಹಾಸಂಸ್ಥಾನದ 72ನೇ ಪೀಠಾಧೀಶ್ವರ ನಿರ್ಮಲಾನಂದನಾಥ ಸ್ವಾಮಿ ಭದ್ರಾವತಿ ತಾಲೂಕಿನ ಕಾರೇಹಳ್ಳಿಗೆ ಪುರಪ್ರವೇಶ ಮಾಡಿದ ಸಂದರ್ಭದಲ್ಲಿ ಅಲ್ಲಿನ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನೂತನವಾಗಿ ಸ್ಥಾಪಿಸಿದ ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಉದ್ಘಾಟನೆಯಲ್ಲಿ ಮಾತನಾಡಿ, ಶಿಕ್ಷಣ ಇಲಾಖೆ ಮತ್ತು ಶಿಕ್ಷಣ ಸಂಸ್ಥೆಗಳು ದೇಶದ ಆಸ್ತಿ ಎಂದರು.
ಅರಾಜಕತೆ ಹೆಚ್ಚಿದೆ: ಇಂದು ಶಿಕ್ಷಣ ಮತ್ತು ಶೈಕ್ಷಣಿಕ ಮಟ್ಟ ಹೆಚ್ಚಾಗಿದೆಯಾದರೂ ಪ್ರಾಮಾಣಿಕತೆ ಮತ್ತು ನೈತಿಕತೆ ಕುಸಿದಿದೆ. ನಲವತ್ತು ವರ್ಷಗಳ ಹಿಂದೆ ಇದ್ದ ಪರಿಸ್ಥಿತಿ ಇಂದು ತಿರುವುಮುರುವಾಗಿದೆ. ಅಡಳಿತ ವ್ಯವಸ್ಥೆ ಸುಧಾರಿಸಿದೆಯಾದರೂ ಅರಾಜಕತೆ ಹೆಚ್ಚಿದೆ. ವಿದ್ಯಾವಂತರೇ ಅಭದ್ರತೆಗೆ ಕಾರಣರಾಗುತ್ತಿದ್ದಾರೆ. ಆಚಾರ-ವಿಚಾರಕ್ಕೂ ವೇದಿಕೆ ಭಾಷಣಕ್ಕೂ ಸಂಬಂಧವೇ ಇಲ್ಲದಂತಾಗಿದೆ. ಅನಕ್ಷರಸ್ತರಿಂದ, ಬಡವರಿಂದ ದೇಶ ಹಾಳಾಗುತ್ತಿಲ್ಲ. ಎಲ್ಲರೂ ಸಂಘಟಿತರಾಗಿ ಸನ್ನಿವೇಶ ಬದಲಾವಣೆ ಮಾಡುವ ಅಗತ್ಯವಿದೆ ಮತ್ತು ಈ ಬಗ್ಗೆ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ ಎಂದರು.
ವಿಶೇಷ ಆಸಕ್ತಿ: ಪುರಪ್ರವೇಶ ಮಾಡಿ ಗುರುವಂದನೆ ಮತ್ತು ಪಾದಪೂಜೆ ಸ್ವೀಕರಿಸಿ ಆಶೀರ್ವಚನ ನೀಡಿದ ನಿರ್ಮಲಾನಂದನಾಥ ಸ್ವಾಮಿ ಭೈರವೈಕ್ಯರಾದ ಬಾಲಗಂಗಾಧರನಾಥ ಸ್ವಾಮಿಯವರಿಗೆ ಭದ್ರಾವತಿ ಜನರ ಬಗ್ಗೆ ವಿಶೇಷ ಮಮಕಾರವಿತ್ತೆಂದು ತಿಳಿಸಿದರು. ಮಹಾಸಂಸ್ಥಾನ ಮಠದ ನಿವೇಶನ ಖರೀದಿಸುವ ಸಮಯದಲ್ಲಿ ಅಗತ್ಯವಿದ್ದ ಹಣವನ್ನು ಸಂಗ್ರಹಿಸಿ ನೀಡಿದ ಭದ್ರಾವತಿ ಭಕ್ತರ ಬಗ್ಗೆ ಬಾಲಗಂಗಾಧರನಾಥ ಶ್ರೀಗಳು ವಿಶೇಷ ಆಸಕ್ತಿ ಹೊಂದಿದ್ದರು. ಹಾಗಾಗಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಪ್ರಥಮ ಶಾಲೆ ಭದ್ರಾವತಿಯಲ್ಲೇ ಪ್ರಾರಂಭವಾಯಿತೆಂದು ತಿಳಿಸಿದರು.
ತರೀಕೆರೆ ಶಾಸಕ ಶ್ರೀನಿವಾಸ್, ಬಿಜಿಎಸ್ ಶಾಲೆಗಳು ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿಯನ್ನುಂಟುಮಾಡಿವೆ ಎಂದರು. ಎಸ್ಎವಿ ಶಿಕ್ಷಣ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮನಾಥ ಸ್ವಾಮೀಜಿ ಮಾತನಾಡಿದರು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಪ್ರಾಸ್ತಾವಿಕ ಭಾಷಣ ಮಾಡಿದರು. ತುಮಕೂರು ಶಾಖಾಮಠದ ಶಿವಕುಮಾರಸ್ವಾಮಿ, ಚಿತ್ರದುರ್ಗ ಕಬೀರಾನಂದಾಶ್ರಮದ ಶಿವಲಿಂಗಾನಂದನಾಥ ಸ್ವಾಮೀಜಿ, ಗೋಸಾಯಿ ಮಠದ ಸುರೇಶಾನಂದ ಭಾರತಿ ಸ್ವಾಮೀಜಿ, ಚಿಕ್ಕಮಗಳೂರಿನ ಶೃಂಗೇರಿಯ ಗುಣಾನಾಥ ಸ್ವಾಮೀಜಿ, ಶ್ರಿಕ್ಷೇತ್ರದ ಭೈರವನಾಥ ಸ್ವಾಮೀಜಿ, ಎಂ. ಶ್ರೀನಿವಾಸ್, ಎಚ್. ನರಸಿಂಹಯ್ಯ, ಕೆ.ಬಿ. ಗೌಡ, ಕಾಳಪ್ಪ, ಬಿ.ಜೆ. ಮರಿಯಪ್ಪ, ಡಿ.ಕೆ. ಗುಂಡೇಗೌಡ, ರಾಮೇಗೌಡ, ಡಿ.ವಿ. ರಮೇಶ್, ಎ.ಬಿ. ನಂಜಪ್ಪ, ಎಸ್.ಕೆ. ಚನ್ನೇಗೌಡ, ಎಸ್.ಸಿ. ಜಯರಾಂ, ಕುಮಾರ್, ಟಿ.ಎನ್. ಸೋಮಶೇಖರಯ್ಯ, ಅಶ್ವತ್ಥ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

