ಯುಪಿಎ ವಿರುದ್ಧ ಬಿಜೆಪಿ ಸಮರ
ಶಿವಮೊಗ್ಗ: ಕೇಂದ್ರದ ಯುಪಿಎ ಸರ್ಕಾರದ ಆಡಳಿತ ವೈಫಲ್ಯ ವಿರೋಧಿಸಿ ಮೇ 27ರಂದು ದೇಶಾದ್ಯಂತ ಬಿಜೆಪಿ ಜೈಲ್ ಭರೋ ಹಮ್ಮಿಕೊಂಡಿದ್ದು, ಇದರಂಗವಾಗಿ ಜಿಲ್ಲೆಯಲ್ಲೂ ಬಿಜೆಪಿಯಿಂದ ಜೈಲ್ ಭರೋ ನಡೆಸುತ್ತಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಮುಖ್ಯ ಅಂಚೆ ಕಚೇರಿ ಎದುರು ಜಿಲ್ಲಾ ಮಟ್ಟದ ಕಾರ್ಯಕ್ರಮ ನಡೆಯಲಿದ್ದು, ಪಕ್ಷದ ಪ್ರಮುಖ ಕಾರ್ಯಕರ್ತರು ಜಿಲ್ಲೆಯ ವಿವಿಧೆಡೆಯಿಂದ ಭಾಗವಹಿಸಲಿದ್ದಾರೆ. ಅಂಚೆ ಕಚೇರಿ ಎದುರು ಪಿಕೆಟಿಂಗ್ ನಡೆಸಿ ಕಾರ್ಯಕರ್ತರು ಬಂಧನಕ್ಕೆ ಒಳಗಾಗಲಿದ್ದಾರೆ ಎಂದರು.
ಸಾಮಾನ್ಯರಿಗೆ ದೊಡ್ಡ ಪೆಟ್ಟು: ಯುಪಿಎ ಸಾಧನಾ ವರದಿಯಲ್ಲಿ ರೈತರಿಗೆ ಬೆಂಬಲ ಬೆಲೆ ಹೆಚ್ಚು ನೀಡಿದ್ದು ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗಿದೆ. ಆದರೆ ಕಳೆದ 9 ವರ್ಷದಲ್ಲಿ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನ ಸಾಮಾನ್ಯರ ಜೊತೆ ಕಾಂಗ್ರೆಸ್ ಹಸ್ತ ಎಂಬ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಯುಪಿಎ ಜನ ಸಾಮಾನ್ಯರಿಗೆ ಬೆಲೆ ಏರಿಕೆ ಮೂಲಕ ದೊಡ್ಡ ಪೆಟ್ಟು ನೀಡಿದೆ ಎಂದುಟೀಕಿಸಿದರು.
ಹಗರಣಗಳಲ್ಲೇ ಮುಳುಗಿಹೋಗಿರುವ ಕೇಂದ್ರ ಯುಪಿಎ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ. ಪ್ರಧಾನಿ ಸೇರಿದಂತೆ ಹಲವು ಸಚಿವರು ಹಗರಣಗಳಲ್ಲಿ ಭಾಗಿಯಾಗಿದ್ದಾರೆ.
ಸುಪ್ರೀಂಕೋರ್ಟ್ ಮಧ್ಯಪ್ರವೇಶಿಬೇಕಾಗಿರುವುದು ಕೇಂದ್ರ ಸರ್ಕಾರದ ಲೋಪಗಳನ್ನು ಎತ್ತಿತೋರಿಸುತ್ತದೆ ಎಂದರು.
ಕಳೆದ ಅಕ್ಟೋಬರ್ ನವೆಂಬರ್ನಲ್ಲಿ ಮೊದಲ ಹಂತದ ಸದಸ್ಯತ್ವ ಅಭಿಯಾನ ನಡೆಸಲಾಗಿತ್ತು. 2ನೇ ಹಂತದ ಅಭಿಯಾನ ಮೇ 26ರವರೆಗೆ ಎಲ್ಲಾ ಮಂಡಲ ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲಿ ಆರಂಭಿಸಲಾಗಿದೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಪಕ್ಷದ ಪ್ರಮುಖರಾದ ಗಿರೀಶ್ ಪಟೇಲ್ ಸೇರಿದಂತೆ ಮೊದಲಾದವರಿದ್ದರು.
ಬಿಜೆಪಿ ಯು ಟರ್ನ್
ಶಿವಮೊಗ್ಗ: ಜಿಲ್ಲೆಯಲ್ಲಿ ಸಂಪೂರ್ಣ ಅಧಿಕಾರ ಕಳೆದುಕೊಂಡಿರುವ ಬಿಜೆಪಿ ಹೇಗಾದರೂ ಮಾಡಿ ಜಿಲ್ಲಾ ಪಂಚಾಯಿತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.
ಬಿಜೆಪಿ ವಿರುದ್ಧದ ಬಂಡೆದ್ದು ತಮ್ಮದೇ ಆದ ಪ್ರತ್ಯೇಕ ವೇದಿಕೆ ರಚಿಸಿಕೊಂಡು ಕೆಜೆಪಿಯೊಂದಿಗೆ ಗುರುತಿಸಿಕೊಂಡಿರುವ ಜಿಲ್ಲಾ ಪಂಚಾಯಿತಿಯ 11 ಸದಸ್ಯರ ವಿರುದ್ಧ ಮುನಿಸಿಕೊಂಡು ಅವರ ಸದಸ್ಯತ್ವ ರದ್ದುಗೊಳಿಸುವಂತೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದ ಬಿಜೆಪಿ ಇದೀಗ ಯು ಟರ್ನ್ ಹೊಡೆದಿದ್ದು, ಆ ಸದಸ್ಯರ ಬಗ್ಗೆ ಮೃದು ಧೋರಣೆ ತಳೆದಂತಿದೆ.
ಮರಳಿ ಸ್ವಾಗತ: ಪ್ರತ್ಯೇಕ ವೇದಿಕೆ ರಚಿಸಿಕೊಂಡು ಪಕ್ಷ ತೊರೆದಿರುವ 11 ಸದಸ್ಯರು ಮರಳಿ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ. ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅವರು, ಪ್ರತ್ಯೇಕ ಬಣದೊಂದಿಗೆ ಗುರುತಿಸಿಕೊಂಡಿದ್ದ ಪಕ್ಷದ ಸದಸ್ಯ ಅಶೋಕ್ ನಾಯ್ಕ ಅವರು ಈಗಾಗಲೇ ಮರಳಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅವರಂತೆ ಇನ್ನೂ ಕೆಲ ಬಂಡಾಯ ಸದಸ್ಯರು ಪಕ್ಷಕ್ಕೆ ಬರುವ ಸಾಧ್ಯತೆಯಿದೆ ಎಂದು ಹೇಳಿದರು.
ಬಂಡಾಯ ಸದಸ್ಯರ ನೇತೃತ್ವ ವಹಿಸಿರುವ ಜಿ.ಪಂ. ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ ಹಾಗೂ ಉಪಾಧ್ಯಕ್ಷೆ ಹೇಮಾ ಪಾವನಿಯ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. 11 ಸದಸ್ಯರ ಸದಸ್ಯತ್ವ ರದ್ದುಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಪಕ್ಷದ ವತಿಯಿಂದ ನೀಡಲಾಗಿರುವ ದೂರಿನ ವಿಚಾರಣೆ ಮುಂದಿನ ತಿಂಗಳು ನಡೆಯಲಿದೆ ಎಂದು ತಿಳಿಸಿದರು. ಅತಂತ್ರ ಸ್ಥಿತಿ ನಿರ್ಮಾಣವಾಗಿರುವ ಶಿವಮೊಗ್ಗ ನಗರಸಭೆಯಲ್ಲಿ ಪಕ್ಷದ ಮುಂದಿನ ತೀರ್ಮಾನದ ಏನೆಂಬುವುದರ ಕುರಿತಂತೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾದ ನಂತರ ಕೈಗೊಳ್ಳುತ್ತೇವೆ. ಸದಸ್ಯಕ್ಕೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಹೇಳಿದರು.ವ್ಯಕ್ತಿಗಿಂತ ಪಕ್ಷ ದೊಡ್ಡದು. ಪಕ್ಷಕ್ಕಿಂತ ದೇಶ ದೊಡ್ಡದು ಎಂಬ ನಿಲುವು ನಮ್ಮದು. ಇದನ್ನು ಒಪ್ಪಿಕೊಂಡು ಯಾರು ಬಂದರೂ ಸೇರಿಸಿಕೊಳ್ಳುತ್ತೇವೆ. ಇದು ಸಂಸದ ರಾಘವೇಂದ್ರ, ಯಡಿಯೂರಪ್ಪ ಅವರಿಗೂ ಅನ್ವಯಿಸುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

