ಇತಿಹಾಸ ಪ್ರಸಿದ್ಧ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವ
ಕ.ಪ್ರ. ವಾರ್ತೆ ಭದ್ರಾವತಿ, ಮೇ 25
ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಶನಿವಾರ ಬೆಳಗ್ಗೆ ಅಬಿಜಿನ್ ಮುಹೂರ್ತದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಗಳಿಂದ ನೆರವೇರಿತು.
ಬೆಳಗ್ಗಿನಿಂದಲೇ ಪ್ರಧಾನ ಅರ್ಚಕರಾದ ರಂಗನಾಥ ಶರ್ಮ ಆಚಾರ್ಯತ್ವದಲ್ಲಿ ಧಾರ್ಮಿಕ ಕಾರ್ಯಗಳು ಪ್ರಾರಂಭವಾದವು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆಯಲು ಸುಡುಬಿಸಿಲನ್ನೂ ಲೆಕ್ಕಿಸದೆ ಸರತಿಯಲ್ಲಿ ನಿಂತಿದ್ದರು.
ಬೆಳಗ್ಗೆ 11.35ಕ್ಕೆ ಬ್ರಹ್ಮರಥೋತ್ಸವ ಪ್ರಾರಂಭವಾಯಿತು. ಶ್ರೀಲಕ್ಷ್ಮಿನರಸಿಂಹಸ್ವಾಮಿಯ ಬಿರುದಾವಳಿಗಳನ್ನು ಕೂಗುತ್ತಾ ಭಕ್ತರು ರಥವನ್ನು ಎಳೆಯುತ್ತಿದ್ದರು. ಕೆಲವರು ರಥದ ಮೇಲೆ ಬಾಳೆಹಣ್ಣು ಮತ್ತು ಉತ್ತತ್ತಿಯನ್ನು ಎಸೆಯುತ್ತಿದ್ದರು.
ಬೆಂಗಳೂರಿನ ಎನ್.ಆರ್. ಪುರ ಸರಾಫ್ ಕುಟುಂಬದ ಟ್ರಸ್ಟ್ ಬ್ರಹ್ಮ ರಥೋತ್ಸವದ ಪ್ರಸಾದ ಸೇವೆ ಏರ್ಪಾಡು ಮಾಡಿದ್ದರು. ಅನ್ನದಾನದ ಸೇವೆಯನ್ನು ಬೆಂಗಳೂರಿನ ಸತ್ಯಮ್ಮ ಕೃಷ್ಣ ದೀಕ್ಷಿತ್ ಚಾರಿಟಬಲ್ ಮೆಮೋರಿಯಲ್ ಟ್ರಸ್ಟಿನವರು ಹಾಗೂ ಮತ್ತೂರು ಚಂದ್ರಮೋಹನ್ ಕುಟುಂಬದವರು ಏರ್ಪಾಡು ಮಾಡಿದ್ದರು. ಭದ್ರಾವತಿಯ ಪಾರ್ವತಮ್ಮ ನೀರಗುಂಟೆ ಕೆಂಟಪ್ಪ ಮತ್ತು ಮಕ್ಕಳು ಬ್ರಹ್ಮರಥದ ಅಲಂಕಾರದ ಜವಾಬ್ದಾರಿ ಹೊತ್ತಿದ್ದರು. ಹೊಸಮನೆಯ ಜಯಲಕ್ಷ್ಮಿ ಮತ್ತು ಬಿ.ಎನ್. ಕೃಷ್ಣಪ್ಪ ಸಂಜೆಯ ಪ್ರಸಾದದ ವ್ಯವಸ್ಥೆಯನ್ನು ಮಾಡಿದ್ದರು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ಡಾ. ರಕ್ಷಾ ಕಾರ್ತಿಕ್ ನಟನಂ ಇನಿಸಿಟ್ಯೂಟ್ ಆಫ್ ಡಾನ್ಸ್ ಇವರಿಂದ ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ಬ್ರಹ್ಮರಥೋತ್ಸವದ ಅಂಗವಾಗಿ ಶುಕ್ರವಾರ ಬೆಳಗ್ಗೆ ನರಸಿಂಹ ಜಯಂತಿ ಉತ್ಸವ ಹಾಗೂ ಸಂಜೆ ಕಲ್ಯಾಣೋತ್ಸವವನ್ನು ಏರ್ಪಡಿಸಲಾಗಿತ್ತು. ಭಾನುವಾರ ಬೆಳಗ್ಗೆ ಅಷ್ಟಾವಧಾನ ಸೇವೆ ಮತ್ತು ಮಹಾಮಂಗಳಾರತಿ ನಡೆಯುವುದು. ಸಂಜೆ ಶೇಷವಾಹನೋತ್ಸವ, ಅಷ್ಟಾವಧಾನ ಮತ್ತು ಮಹಾಮಂಗಳಾರತಿ ನಡೆಯುವುದು.
ಸೋಮವಾರ ಬೆಳಗ್ಗೆ ಸಂಧಾನಸೇವೆ, ಅವಭೃತ ಸ್ನಾನ ಹಾಗೂ ಸಂಜೆ ಹನುಮಂತೋತ್ಸವ, ಪೂರ್ಣಾಹುತಿ ಮತ್ತು ಧ್ವಜಾವತರಣ ಏರ್ಪಾಡು ಮಾಡಲಾಗಿದೆ.
ನಂತರ ದೇವತಾ ಸಂಪ್ರೋಕ್ಷಣೆ, ಅಷ್ಟಾವಧಾನ ಮತ್ತು ಮಹಾಮಂಗಳಾರತಿ ನಡೆಯುವುದು. ಮಂಗಳವಾರ ಬೆಳಗ್ಗೆ ಮಹಾಭಿಷೇಕ, ಅಷ್ಟಾವಧಾನ ಮತ್ತು ಮಹಾಮಂಗಳಾರತಿ ಹಾಗೂ ಸಂಜೆ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಮತ್ತು ಮಹಾಮಂಗಳಾರತಿ ನಡೆಯುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

