ಜಾನಪದ ಸಾಹಿತ್ಯದ ತಾಯಿಬೇರು: ಎನ್. ಹುಚ್ಚಪ್ಪ ಮಾಸ್ತರ ಅಭಿಮತ
ಕ.ಪ್ರ.ವಾರ್ತೆ, ಸಾಗರ, ಮೇ 28 ಜಾನಪದ ಎಲ್ಲ ಸಾಹಿತ್ಯದ ತಾಯಿಬೇರಾಗಿದ್ದು, ಹೊಸಬಗೆಯ ಸಾಹಿತ್ಯ ಪರಂಪರೆಯು ಈ ನೆಲದ ಜಾನಪದ ಸಂಸ್ಕೃತಿಯ ಅಂತಃಸತ್ವ ಹೀರಿಕೊಂಡು ಬೆಳೆಯಬೇಕು ಎಂದು ಜಾನಪದ ವಿದ್ವಾಂಸ ಎನ್. ಹುಚ್ಚಪ್ಪ ಮಾಸ್ತರ ಹೇಳಿದರು.
ತಾಲೂಕು ಕಸಾಪ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ 3ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಶೋಧನೆ, ಪದವಿಗಳ ನೆಪದಲ್ಲಿ ಹಳ್ಳಿಗಳನ್ನು, ಅಲ್ಲಿನ ಬದುಕನ್ನು ನೋಡುವ ಶೈಕ್ಷಣಿಕ ವಲಯದ ಮನಃಸ್ಥಿತಿ ಮೊದಲು ಬದಲಾಗಬೇಕು. ಪದವೀಧರರು ನಗರಗಳ ಮೇಲಿನ ವ್ಯಾಮೋಹ ಬಿಟ್ಟು ಹಳ್ಳಿಗಳನ್ನು ತಮ್ಮ ಕಾರ್ಯಕ್ಷೇತ್ರವಾಗಿ ಮಾಡಿಕೊಳ್ಳಬೇಕು. ಸಾಹಿತ್ಯ ಪರಿಷತ್ತು ತನ್ನ ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಬರಬೇಕು ಎಂದು ಪ್ರತಿಪಾದಿಸಿದರು.
ಸಾಹಿತ್ಯ ಎಂಬುದೇ ಆಸ್ತಿ: ಒಂದು ಊರಿನ ಆಸ್ತಿ ಯಾವುದು ಎಂಬ ಪ್ರಶ್ನೆಗೆ ಹತ್ತಾರು ಉತ್ತರ ಸಿಗಬಹುದು. ಪ್ರಮುಖವಾಗಿ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಒಂದು ಪ್ರಬುದ್ಧ ಊರಿನ ಆಸ್ತಿಯಾಗಿದೆ. ವ್ಯವಹಾರಿಕವಾಗಿ ಬೆಳೆಯುವ ವಾಣಿಜ್ಯ ಕೇಂದ್ರಗಳಿಂದ ಶುಷ್ಕ ನಗರಗಳಷ್ಟೇ ಬೆಳೆಯುತ್ತವೆ. ಆದರೆ ಇದು ಮನುಷ್ಯನ ಶ್ರೇಷ್ಠತೆಯನ್ನು ಪ್ರತಿಪಾದಿಸುವುದಿಲ್ಲ. ದೇಹಕ್ಕೆ ಆತ್ಮವಿದ್ದಂತೆ ಊರಿಗೂ ಒಂದು ಆತ್ಮವಿರುತ್ತದೆ. ಸಾಹಿತ್ಯ, ಸಂಸ್ಕೃತಿ, ಕಲೆಗಳೇ ಊರಿನ ಆತ್ಮ ಎಂದು ಹೇಳಿದರು.
ಜಾತಿ, ಹಣಬಲ:ಪ್ರಸ್ತುತ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಮೌಲ್ಯವನ್ನು ಕಳೆದುಕೊಳ್ಳುತ್ತಿವೆ. ಜಾತಿಬಲ, ಹಣ ಬಲವೇ ಚುನಾವಣೆಯಲ್ಲಿ ವಿಜೃಂಭಿಸುತ್ತಿದ್ದು, ಗಣಿಹಣದಿಂದ ರಾಜ್ಯ, ರಾಷ್ಟ್ರ ರಾಜಕಾರಣವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ದುಸ್ಸಾಹಸ ನಡೆಯುತ್ತಿದೆ. ಹಣವಿರುವವರು ಪ್ರಜಾಪ್ರಭುತ್ವವನ್ನು ಕೊಂಡುಕೊಳ್ಳುವ ಹುನ್ನಾರ ನಡೆಸುತ್ತಿದ್ದು ಇದಕ್ಕೆ ಕೊನೆ ಹಾಡಬೇಕಿದೆ ಎಂದರು.
ಸಜ್ಜನ, ಪ್ರಾಮಾಣಿಕ ವ್ಯಕ್ತಿ ಈ ವ್ಯವಸ್ಥೆಯಲ್ಲಿ ಬದುಕು ಕಟ್ಟಿಕೊಳ್ಳಲು, ಸೂರು ಹೊಂದಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆಸ್ತಿಮಿತಿ ಕಾಯ್ದೆ ಜಾರಿಗೆ ಬರಬೇಕು. ನಾಡಿನ ಹಿತಕ್ಕಾಗಿ ಊರು ಬಿಟ್ಟ ಈ ಪ್ರಾಂತ್ಯದ ಮುಳುಗಡೆ ಸಂತ್ರಸ್ತರನ್ನು ಇಂಡೀಕರಣದ ಹೆಸರಿನಲ್ಲಿ ಪುನಃ ಒಕ್ಕಲೆಬ್ಬಿಸುವ ಪ್ರಕ್ರಿಯೆ ನಡೆಯುತ್ತದೆ. ಇದು ನಿಲ್ಲಬೇಕು. ನಾಡಿಗೆ ಬೆಳಕು ನೀಡಲು ಸರ್ವಸ್ವವನ್ನು ತ್ಯಾಗ ಮಾಡಿದ ಹಿನ್ನೀರಿನ ಜನರು ಇಂದಿಗೂ ಆತಂಕದಿಂದ ಬದುಕು ನಡೆಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಕುಂ. ವೀರಭದ್ರಪ್ಪ, ಶಾಸಕ ಕಾಗೋಡು ತಿಮ್ಮಪ್ಪ, ಇತಿಹಾಸ ಸಂಶೋಧಕ ಗುಂಡಾ ಜೋಯಿಸ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

