ಬಹುವರ್ಷಗಳ ವಿವಾದಕ್ಕೆ ಅಂತ್ಯ
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 29
ಇತಿಹಾಸಪ್ರಸಿದ್ಧ ಮಂಡ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯಕ್ಕೆ ಸಂಬಂಧಿಸಿದಂತೆ ಬಹುವರ್ಷಗಳಿಂದ ಬಾಕಿ ಇದ್ದ ವಿವಾದವೊಂದು ಬುಧವಾರ ಬಗೆಹರಿದಿದೆ. ದೇವಾಲಯಕ್ಕೆ ಸಂಬಂಧಿಸಿದಂತೆ ಮಂಡ್ಲಿ ಗ್ರಾಮಸ್ಥರೇ ಸೇರಿ ರಚಿಸಿಕೊಂಡಿರುವ ಶ್ರೀ ವೀರಭದ್ರೇಶ್ವರ ಸಮಿತಿ ಹಾಗೂ ಶಿವಮೊಗ್ಗದ ಭಕ್ತರು ರಚಿಸಿಕೊಂಡಿದ್ದ ಶ್ರೀ ವೀರಭದ್ರೇಶ್ವರ ಭಕ್ತಮಂಡಳಿ ಅಸ್ತಿತ್ವದಲ್ಲಿದ್ದವು.
ಕಳೆದ 18 ವರ್ಷದಲ್ಲಿ ದೇವಸ್ಥಾನದ ಬಳಿ ಜಾತ್ರಾ ಮಹೋತ್ಸವವನ್ನು ಭಕ್ತಮಂಡಳಿ ಸ್ವತಂತ್ರ್ಯವಾಗಿ ಆಚರಿಸಿಕೊಂಡು ಬರುತ್ತಿತ್ತು. ಹಿಂದಿದ್ದ ಸಮಿತಿಯು ದೇವಸ್ಥಾನದ ನಿರ್ವಹಣೆ ಮಾಡುತ್ತಿತ್ತು. ಎರಡೂ ಸಮಿತಿಗಳ ನಡುವೆ ಸಮನ್ವಯ ಕೊರತೆಯ ಕಾರಣ ದೇವಾಲಯದ ದೇವಾಲಯ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿ ಕಾರ್ಯ ನಡೆದಿರಲಿಲ್ಲ.
ಜಾತ್ರೆ ಹಿನ್ನಲೆಯಲ್ಲಿ ಬುಧವಾರ ದೇವಾಲಯ ಆವರಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಭಕ್ತಮಂಡಳಿ ಅಧ್ಯಕ್ಷ ಕೋರಿ ಪ್ರಭುಲಿಂಗಪ್ಪ ಹಾಗೂ ವೀರಭದ್ರೇಶ್ವರ ಸಮಿತಿ ಅಧ್ಯಕ್ಷ ಮೇಘರಾಜ್ ಅವರು ಪರಸ್ಪರ ಚರ್ಚಿಸಿ, ಎರಡು ಸಮಿತಿಗಳ ಬದಲು ಒಂದೇ ಸಮಿತಿ ರಚಿಸಲಾಗುವುದು. ದೇವಾಲಯದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಜಂಟಿಯಾಗಿ ಘೋಷಿಸಿದರು.
ಒತ್ತುವರಿ: ದೇವಾಲಯ ಸುತ್ತಮುತ್ತಲಿನ ಸಾಕಷ್ಟು ಜಾಗ ಒತ್ತುವರಿಯಾಗಿದ್ದು, ಅಲ್ಲಿ ವಾಸದ ಮನೆಗಳು ನಿರ್ಮಾಣವಾಗಿವೆ. ಅವರ ಮನಮೊಲಿಸಲಾಗಿದ್ದು, ಜಾಗವನ್ನು ತೆರವು ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಅದಕ್ಕೆ ಪ್ರತಿಯಾಗಿ ಅವರಿಗೆ ಬೇರೆಡೆ ಜಾಗ ಕೊಡಬೇಕಾಗಿದೆ.
ಮಂಡ್ಲಿಯ ಇನ್ನೊಂದು ಸ್ಥಳದಲ್ಲಿ ದೇವಾಲಯಕ್ಕೆ ಸೇರಿದ 3 ಎಕರೆ 30 ಗುಂಟೆ ಸ್ಥಳವಿದೆ. ಇಲ್ಲಿ ಇವರಿಗೆ ಪರ್ಯಾಯ ಜಾಗ ನೀಡಬೇಕೇ, ಅಥವಾ ಬೇರೆಡೆ ನೀಡಬೇಕೇ ಎಂಬುದಕ್ಕೆ ಎರಡೂ ಸಮಿತಿಗಳ ನಡುವೆ ಬೇರೆಬೇರೆ ಅಭಿಪ್ರಾಯಗಳಿವೆ.
ಪತ್ರಿಕಾಗೋಷ್ಠಿಯಲ್ಲಿ ಇದನ್ನು ಪ್ರಸ್ತಾಪಿಸಿದ ಇಬ್ಬರು ಅಧ್ಯಕ್ಷರು, ಹೊಸ ಸಮಿತಿ ರಚನೆಯಾದ ನಂತರ ಈ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದರು.
ದೇಗುಲ ಹಿನ್ನಲೆ: ಒಂದು ಕಾಲದಲ್ಲಿ ರಾಜಧಾನಿಯಾಗಿ ಮೆರೆದಿದ್ದ ಮಂಡಳಿ- ಮಂಡ್ಲಿ ಈಗ ಪುಟ್ಟ ಹಳ್ಳಿ. ಶಿವಮೊಗ್ಗ ನಗರಸಭೆ ವ್ಯಾಪ್ತಿಗೆ ಸೇರಿದೆ. ಬಿದನೂರು ಅರಸ ವೀರಭದ್ರನಾಯ್ಕರು 1646ರ ವರೆಗೆ ಇಲ್ಲಿ ಆಡಳಿತ ನಡೆಸಿದ ದಾಖಲೆಗಳಿವೆ. ಕೆಳದಿ ಅರಸರು ಇಲ್ಲಿ ಶ್ರೀ ವೀರಭದ್ರಸ್ವಾಮಿ ದೇವಾಲಯ ಸ್ಥಾಪಿಸಿದರು.
1722ರ ಇಮ್ಮಡಿ ಸೋಮಶೇಖರ ನಾಯಕರ ಕಾಲದಲ್ಲಿ ಮಂಡ್ಲಿಯಲ್ಲಿ ವಿರಕ್ತಮಠ ಮರುಳಯ್ಯನ ಮಠವಾಗಿತ್ತು. ಇಮ್ಮಡಿ ಸೋಮಶೇಖರ ನಾಯ್ಕ ಹಾಗೂ ಅವರ ರಾಣಿಯ ಗದ್ದುಗೆಯು ಹಳೇ ತೀರ್ಥಹಳ್ಳಿ ರಸ್ತೆ- ಹೊಸ ತೀರ್ಥಹಳ್ಳಿ ರಸ್ತೆ ಕೂಡು ಸ್ಥಳದಲ್ಲಿದೆ.
ಜಾತ್ರೆ ಆರಂಭ: ಕಾಲಾನಂತರದಲ್ಲಿ ಮಂಡ್ಲಿ ಗ್ರಾಮವು ತನ್ನ ಮೊದಲಿನ ವೈಭವದ ಮೆರಗು ಕಳೆದುಕೊಂಡ ನಂತರ ನಿರ್ಲಕ್ಷಿತ ಗ್ರಾಮವಾಯಿತು. ಪುರಾತನ ದೇವಾಲಯದ ಬಗ್ಗೆ ಯಾರ ಗಮನವೂ ಇರಲಿಲ್ಲ. 1995ರಲ್ಲಿ ಭಕ್ತರು ಸೇರಿ ಗುಗ್ಗುಳ, ಜಾತ್ರೆ ಮಹೋತ್ಸವವನ್ನು ಆರಂಭಿಸಿದರು. ಇದೇ ಮೇ 31ರಂದು 18ನೇ ವರ್ಷದ ಜಾತ್ರಾ ಮಹೋತ್ಸವವು ನಡೆಯುವುದು.
ಹೊನ್ನಾಳಿ ಹಿರೇಕಲ್ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ರಾಂಪುರದ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಅವರ ಸಾನ್ನಿದ್ಯದಲ್ಲಿ ಮಂಡ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಹಾಗೂ ಭದ್ರಕಾಳಮ್ಮನವರಿಗೆ ಕ್ಷೀರಾಭಿಷೇಕ, ರುದ್ರಾಭಿಷೇಕ, ಧರ್ಮಸಭೆ ಕಾರ್ಯಕ್ರಮಗಳು ನಡೆಯುವವು ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು.
ಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ಮಹೇಶ್ವರಪ್ಪ, ಬಸವರಾಜ್, ಎಸ್.ವಿ.ಸಿ. ಪ್ರಕಾಶ್, ಎ. ಸಿದ್ದವೀರಪ್ಪ, ರೇಣುಕಪ್ಪ, ಎಸ್. ಮನೋಹರ್, ಗಂಗಾಧರ್ ಎನ್.ಬಿ.ಆರ್., ಎಸ್.ಜಿ. ಗುರುಮೂರ್ತಿ ಸೇರಿದಂತೆ ಹಲವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

