ಎಚ್ಚರಿಕೆ ಜಲಾವೃತವಾಗಲಿದೆ ತೀರ್ಥಹಳ್ಳಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 29
ಒಂದು ಕಾಲದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದ ಆಗುಂಬೆಯಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಬುಧವಾರ ಬೆಳಿಗ್ಗೆ 8 ಗಂಟೆಯ ವರೆಗೆ ಬಿದ್ದಿರುವ ಮಳೆ 150.5 ಮಿ.ಮೀ. ಇದು ಇಡೀ ರಾಜ್ಯದಲ್ಲಿ ಬುಧವಾರದ ದಾಖಲೆ. ಮಳೆಗಾಲ ತೀವ್ರತೆ ಪಡೆಯುವುತ್ತಿರುವುದಕ್ಕೆ ಇದು ಮಾನದಂಡ.
ಇದರ ಜತೆಗೆ ಆಗುಂಬೆ ಇರುವ ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ, ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಅವರು ಮೊದಲ ವಿಧಾನಸಭೆ ಅಧಿವೇಶನ ಮುಗಿಸಿ ಹೊರಬರುತ್ತಿದ್ದಂತೆ ಅವರ ಊರಿನಲ್ಲೇ ಅವರಿಗೊಂದು ಕೆಲಸ ಇದೆ.
ಚರಂಡಿಯೇ ಇಲ್ಲ: ಪ್ರಮುಖ ರಸ್ತೆಗಳ ವಿಸ್ತರಣೆ ಕಾರ್ಯ ನಡೆದ ನಂತರ ಡಾಂಬರೀಕರಣ ಇತ್ಯಾದಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಇದಲ್ಲದದೇ, ಜನವರಿ ತಿಂಗಳಲ್ಲಿ ನಡೆದ ಇತಿಹಾಸ ಪ್ರಸಿದ್ಧ ಎಳ್ಳಮವಾಸ್ಯೆ ಜಾತ್ರೆ ಸಂದರ್ಭದಲ್ಲಿ ತೀರ್ಥಹಳ್ಳಿ ಪಟ್ಟಣದ ಪ್ರಮುಖ ರಸ್ತೆಗಳ ಚರಂಡಿಗಳನ್ನು ಮುಚ್ಚಲಾಗಿತ್ತು. ಬರುವ ಭಕ್ತಾಧಿಗಳು ವಾಹನ ನಿಲ್ಲಿಸಲು ಅನುಕೂಲವಾಗಲಿ ಎಂಬುದು ಅವರ ಉದ್ದೇಶ.
ಅದು ಒಳ್ಳೆಯದೇ. ಆದರೆ ಮಳೆಗಾಲ ಆರಂಭವಾಗುವ ವರೆಗೂ ಚರಂಡಿಗಳನ್ನು ಮತ್ತೆ ತೆರೆಯಬೇಕೆಂಬ ಯೋಚನೆ ಸ್ಥಳೀಯ ಪಟ್ಟಣ ಪಂಚಾಯ್ತಿಗೆ ಬರಲೇ ಇಲ್ಲ. ಪರಿಸ್ಥಿತಿ ಹೇಗಿದೆ ಎಂದರೆ ಬಾಳೆಬೈಲು ಎಪಿಎಂಸಿಯಿಂದ ಹಿಡಿದು ಕುಶಾವತಿ ವರೆಗೆ ರಸ್ತೆಯಲ್ಲಿ ಚರಂಡಿಯೇ ಇಲ್ಲ.
ಗಮನ ಹರಿಸಬೇಕಿದೆ: ಈಗ ಮಳೆ ಬಂದರೆ ಅತಿ ಹೆಚ್ಚು ಮಳೆ ಬೀಳುವ ತೀರ್ಥಹಳ್ಳಿ ತಾಲೂಕಿನ ತೀರ್ಥಹಳ್ಳಿ ಪಟ್ಟಣವೇ ನೀರಿನಿಂದ ಆವೃತವಾಗುತ್ತದೆ. ಕೊಪ್ಪ ಸರ್ಕಲ್ ದಾಟಲು ದೋಣಿಯೇ ಬೇಕಾಗಬಹುದು. ಮಳೆಗಾಲ ಆರಂಭವಾಗಿಯೇ ಬಿಟ್ಟಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮೊಟ್ಟಮೊದಲು ತಮ್ಮೂರಿನ ಪಟ್ಟಣದ ಕಡೆಯೇ ಗಮನ ಹರಿಸಬೇಕಿದೆ.
ಇದರ ಜತೆಗೆ ಪರಿಹಾರವೇ ಕಾಣದ, ಪರಿಹಾರ ಅಸಾಧ್ಯವಾದ ಮಳೆಗಾಲದ ಹಲವು ಸಮಸ್ಯೆಗಳು ಈ ತಾಲೂಕಿನಲ್ಲಿವೆ. ತುಂಗಾ ನದಿಯಲ್ಲಿ ಪ್ರವಾಹ ಹೆಚ್ಚಾದರೆ ಮಂಡಗದ್ದೆ ಬಳಿ ರಸ್ತೆ ಜಲಾವೃತವಾಗುತ್ತದೆ. ಮೇಗರವಳ್ಳಿ ಬಳಿ ರಸ್ತೆಯಲ್ಲಿ ವರದಾ ನದಿ ಹರಿಯುತ್ತದೆ. ನಾಬಳ ಸೇತುವೆ ಮೇಲೆ ನೀರು ನಿಲ್ಲುತ್ತದೆ. ಇವೇನು ಸದ್ಯಕ್ಕೆ ಬಗೆಹರಿಯುವ ಸಮಸ್ಯೆಗಳಲ್ಲ. ಅದಕ್ಕೆ ಬೃಹತ್ ಯೋಜನೆಗಳೇ ಬೇಕು.
ಬೀಸನಗದ್ದೆಯ ಬೀಸು: ರಾಜ್ಯಕ್ಕೆ ಬೆಳಕು ನೀಡುತ್ತಿರುವ ತಾಲೂಕು ಸಾಗರ. ಈ ತಾಲೂಕಿನ ಬೀಸನಗದ್ದೆ ಗ್ರಾಮ ಪ್ರತಿ ಮಳೆಗಾಲದಲ್ಲಿ ಸುದ್ದಿಯಾಗುತ್ತದೆ.
ಇದು ವರದಾ, ಮಾವಿನಹೊಳೆ, ಕನ್ನಹೊಳೆ ಸಂಪರ್ಕಿಸುವ ಜಾಗ. ಈ ನದಿಗಳು ಉಕ್ಕಿ ಹರಿಯುತ್ತಿದ್ದಂತೆ ಈ ಗ್ರಾಮ ಸಂಪೂರ್ಣ ಜಲಾವೃತವಾಗುತ್ತದೆ. ಗ್ರಾಮದ ಸುತ್ತ ಇರುವ ಜಮೀನಿನಲ್ಲಿ ನೀರು ನಿಲ್ಲುತ್ತದೆ. ಹೊರಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಳ್ಳುತ್ತದೆ. ದೋಣಿಯೊಂದೇ ಆಗ ಹೊರಜಗತ್ತಿನ ಸಂಪರ್ಕ ಸಾಧನ.
ಬೀಸನಗದ್ದೆ ಗ್ರಾಮದಲ್ಲಿ 10-12 ಕುಟುಂಬಗಳಿವೆ. ಇವರ ಮನವೊಲಿಸಿ ಪುನರ್ವಸತಿ ಕಲ್ಪಿಸುವ ಪ್ರಯತ್ನ ಫಲ ನೀಡಿಲ್ಲ. ಇವರಿಗೆ ಅನುಕೂಲ ಮಾಡಿಕೊಡಲೇಬೇಕೆಂದರೆ ಸೇತುವೆ ನಿರ್ಮಿಸಬೇಕಷ್ಟೇ. ಅದು ಆಡಳಿತಗಾರರಿಗೆ ಸಿಂಧು ಎನಿಸುತ್ತಿಲ್ಲ. ಹಾಗಾಗಿ ಹಲವು ವರ್ಷಗಳಿಂದ ಬೀಸನಗದ್ದೆಯ ಸಮಸ್ಯೆ ಪರಿಹಾರ ಕಾಣದ ಸಮಸ್ಯೆಯಾಗಿಯೇ ಉಳಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

