'ಸಾಹಿತ್ಯ ಸಮ್ಮೇಳನವನ್ನು ಲಘುವಾಗಿ ಪರಿಗಣಿಸಬೇಡಿ'
ಕ.ಪ್ರ.ವಾರ್ತೆ, ಸಾಗರ, ಮೇ 29
ಸಾಹಿತ್ಯ ಸಮ್ಮೇಳನವನ್ನು ಆಳುವವರು ಲಘುವಾಗಿ ಪರಿಗಣಿಸದೆ ಇಲ್ಲಿ ತೆಗೆದುಕೊಳ್ಳುವ ನಿರ್ಣಯಗಳ ಅನುಷ್ಠಾನಕ್ಕೆ ಗಂಭೀರ ಪ್ರಯತ್ನ ನಡೆಸಬೇಕು ಎಂದು ಸಾಹಿತಿ ಡಾ.ನಾ. ಡಿಸೋಜ ಹೇಳಿದರು.
ಮಂಗಳವಾರ ಸಂಜೆ ಮುಕ್ತಾಯವಾದ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪದ ಮಾತುಗಳನ್ನಾಡಿ, ಕನ್ನಡಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆಯಲು, 8 ಜ್ಞಾನಪೀಠ ಪ್ರಶಸ್ತಿಗಳು ಬರಲು ಇಂತಹ ಸಾಹಿತ್ಯ ಸಮ್ಮೇಳನಗಳೇ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಭಾಷೆ ಉಳಿಯಬೇಕು: ಭಾಷೆ ಉಳಿದರೆ ನಾವು ಉಳಿಯುತ್ತೇವೆ. ಮೊದಲು ಭಾಷೆಗೆ ಗೌರವ ಕೊಡುವುದನ್ನು ನಾವು ಕಲಿಯಬೇಕು ಎಂದು ಹೇಳಿದ ಡಿಸೋಜ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ವ್ಯಕ್ತಿಯಲ್ಲಿ ಮಾನವೀಯ ಮೌಲ್ಯ ಬೆಳೆಸುತ್ತದೆ, ಸಚ್ಚಾರಿತ್ರ್ಯನನ್ನಾಗಿ ಮಾಡುತ್ತದೆ ಎಂದು ಹೇಳಿದರು.
ಪ್ರಸ್ತುತ ನಾವು ಪರಿಸರದಿಂದ, ಪರಿಸರ ನಮ್ಮಿಂದ ದೂರವಾಗುತ್ತಿರುವ ಸಂದಿಗ್ಧ ಕಾಲಘಟ್ಟದಲ್ಲಿ ಇದ್ದೇವೆ. ನಮ್ಮ ಮಣ್ಣಿನಮಗ ಇರುವ ಭೂಮಿಯನ್ನು ಕೊಟ್ಟು ಕಾರ್ಖಾನೆಗಳಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದಾನೆ. ಒಂದು ಕಾಲದಲ್ಲಿ ಬದುಕಿಗೆ ಭರವಸೆಯಾಗಿದ್ದ ಭೂಮಿ ಇಂದು ಬವಣೆಯಾಗಿದೆ. ಇಂತಹ ಸಮ್ಮೇಳನಗಳಲ್ಲಿ ಕೈಗೊಂಡ ನಿರ್ಣಯಗಳು, ಭೂಮಿ ಬಗ್ಗೆ ನಡೆದ ಪರಿಣಾಮಕಾರಿ ಚರ್ಚೆಗಳು ಕೃಷಿಯಿಂದ ವಿಮುಖನಾಗುತ್ತಿರುವ ಮಣ್ಣಿನಮಕ್ಕಳ ಬದುಕಿಗೆ ನೆಲೆಯೊದಗಿಸುವ ಆಶಾಕಿರಣವಾಗಬಹುದು ಎಂದು ಹೇಳಿದರು.
ಸಾಹಿತಿಗಳು ವಿಫಲ: ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬೆಂಗಳೂರು ಜೋಷಿ ಫೌಂಡೇಶನ್ ಮುಖ್ಯಸ್ಥ ದಿನೇಶಕುಮಾರ ಜೋಷಿ, ಸಾಹಿತ್ಯ ಕ್ಷೇತ್ರ ವಿಶಾಲವಾಗಿದ್ದು ಕೆಲವು ಸಾಹಿತಿಗಳು ವಿಧಾನಪರಿಷತ್ ಸದಸ್ಯರಾಗಿಯೂ ನೇಮಕವಾಗಿದ್ದಾರೆ. ಆದರೆ ವಿಧಾನ ಪರಿಷತ್ತಿನಲ್ಲಿ ಅವರು ನೆಲಜಲ, ಭಾಷೆ ಸಂರಕ್ಷಣೆ ಕುರಿತು ಗಂಭೀರವಾದ ಚರ್ಚೆ ನಡೆಸುತ್ತಿಲ್ಲ. ಸಮಾಜದ ದೃಷ್ಟಿಕೋನದಲ್ಲಿ ಸಾಹಿತಿಗಳು ರಾಜಕೀಯ ಕ್ಷೇತ್ರದಲ್ಲಿ ವಿಫಲರಾಗುತ್ತಿದ್ದಾರೆ ಎಂದು ವಿಷಾದಿಸಿದರು.
ತಾಲೂಕು ಕಸಾಪ ಅಧ್ಯಕ್ಷ ವಿ.ಟಿ. ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಪ ವಿಭಾಗಾಧಿಕಾರಿ ಡಾ. ಉದಯ ಕುಮಾರ ಶೆಟ್ಟಿ, ತಹಸೀಲ್ದಾರ್ ಆರ್. ರಾಜಣ್ಣ, ಪೌರಾಯುಕ್ತ ಕೆ. ನರಸಿಂಹಮೂತರ್, ನಗರಸಭೆ ಸದಸ್ಯ ಡಿಶ್ ಗುರು ಇದ್ದರು.
ಬಿ.ಎಸ್. ಪ್ರಭಾಕರ್ ಸ್ವಾಗತಿಸಿದರು. ರಾಜೇಂದ್ರ ಆವಿನಹಳ್ಳಿ ವಂದಿಸಿದರು. ಜಿ. ನಾಗೇಶ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

