ಶಿವಮೊಗ್ಗ

ಕಾಗೋಡು ಸ್ಪೀಕರ್: ಮಿಶ್ರ ಪ್ರತಿಕ್ರಿಯೆ

Published On :

ಕ.ಪ್ರ.ವಾರ್ತೆ, ಸಾಗರ, ಮೇ 31
ಕಾಂಗ್ರೆಸ್‌ನ ಹಿರಿಯ ಮುತ್ಸದ್ಧಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರನ್ನು ಕ್ಷೇತ್ರದ ಜನತೆ ಭಾರಿ ಮತಗಳ (41ಸಾವಿರಕ್ಕೂ ಹೆಚ್ಚು) ಅಂತರದಿಂದ ಗೆಲ್ಲಿಸಿದ್ದಕ್ಕೆ ಪಕ್ಷವು ಅವರಿಗೆ ವಿಧಾನಸಭಾಧ್ಯಕ್ಷರಂತಹ ಉನ್ನತ ಹುದ್ದೆಯನ್ನೇ ಕೊಟ್ಟಿದೆ.
ಜನಪರ ಕಾಳಜಿಯ ಕಾಗೋಡು ತಿಮ್ಮಪ್ಪನವರು ಶುಕ್ರವಾರ ವಿಧಾನಸಭೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು ಅವರ ರಾಜಕೀಯ ಅನುಭವ, ಮುತ್ಸದ್ಧಿತನ, ಪಕ್ಷನಿಷ್ಠೆಗೆ ಸಾಕ್ಷಿಯಾಗಿದೆ.
ಹುಸಿಯಾದ ನಿರೀಕ್ಷೆ: ರಾಜಕೀಯದಲ್ಲಿ, ಪಕ್ಷದಲ್ಲಿ ಹಾಗೂ ವಯಸ್ಸಿನಲ್ಲಿ ಹಿರಿಯರಾಗಿರುವ ಅವರಿಗೆ ಯಾವುದಾದರೂ ಪ್ರಭಾವಿ ಸಚಿವ ಸ್ಥಾನ ಸಿಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಮಂತ್ರಿ ಸ್ಥಾನ ನೀಡದೆ ಸ್ಪೀಕರ್ ಹುದ್ದೆ ನೀಡಿರುವ ಬಗ್ಗೆ ಕ್ಷೇತ್ರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತಮ್ಮ ನೆಚ್ಚಿನ ನಾಯಕನಿಗೆ ಮಂತ್ರಿಸ್ಥಾನ ಕೊಡದೆ ಸ್ಪೀಕರ್ ಮಾಡುತ್ತಾರೆಂಬ ವಿಷಯ ತಿಳಿದ ಕಾರ್ಯಕರ್ತರು ಹಿಂದೆಯೇ ಸಾಗರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಪಕ್ಷದ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ್ದರು.
ಕಾರ್ಯಕರ್ತರಿಗೆ ತಾಕೀತು: ಈ ಬೆಳವಣಿಗೆಯಿಂದ ಬೇಸರಗೊಂಡಿದ್ದ ಕಾಗೋಡು ತಮ್ಮ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಈ ರೀತಿ ವರ್ತಿಸದಂತೆ ತಾಕೀತು ಮಾಡಿದ್ದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾದ ತಮಗೆ ಪಕ್ಷ ವಹಿಸಿದ ಯಾವುದೇ ಜವಾಬ್ದಾರಿ ನಿರ್ವಹಿಸಲು ಸಿದ್ಧನಿದ್ದೇನೆ ಎಂದಿದ್ದರು.
ಪಕ್ಷದ ಹಿರಿಯ ಕಾರ್ಯಕರ್ತರೊಬ್ಬರು ಹೇಳುವ ಪ್ರಕಾರ,  ಕಾಗೋಡರಿಗೆ ಸ್ಪೀಕರ್ ಸ್ಥಾನ ನೀಡಿರುವುದರಿಂದ ಅವರು ಜನಸಂಪರ್ಕದಿಂದ ಸ್ವಲ್ಪ ದೂರವಾಗಬಹುದೇ ವಿನಾ ಉಳಿದಂತೆ ಕ್ಷೇತ್ರದ ಅಭಿವೃದ್ಧಿಗೆ ಕುಂದು ಬರಲು ಸಾಧ್ಯವಿಲ್ಲ.
ಪುರಸಭೆ ಮಾಜಿ ಸದಸ್ಯರೊಬ್ಬರು, ಕಾಗೋಡು ಹೋರಾಟದ ಮನೋಭಾವದ ವ್ಯಕ್ತಿ. ರಾಜಕೀಯದಲ್ಲಿ ಹೋರಾಟದಿಂದಲೇ ಮೇಲೆ ಬಂದವರು. ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳು ಆಗದಿದ್ದರೆ ಸಂಬಂಧಿಸದವರಿಗೆ ಬೈದು ಕೆಲಸ ಮಾಡಿಸುತ್ತಿದ್ದರು. ಇಂತಹವರಿಗೆ ಸ್ಪೀಕರ್ ಹುದ್ದೆ ನೀಡಿ ಒಂದು ಕಡೆ ಕಟ್ಟಿಹಾಕಿದಂತೆನಿಸುತ್ತದೆ ಎಂದು ಹೇಳಿದರು.
ಚಿಂತಕ ಅ.ರಾ.ಶ್ರೀನಿವಾಸ್, ಕಾಗೋಡು ಆಡಳಿತಕ್ಕೆ ಹೇಳಿ ಮಾಡಿಸಿದ ವ್ಯಕ್ತಿ. ಅದಕ್ಕೆ ಬೇಕಾದ ಅನುಭವ, ಶಕ್ತಿ ಎರಡೂ ಅವರಲ್ಲಿತ್ತು. ಈ ಕಾರಣದಿಂದ ಅವರಿಗೆ ಮಂತ್ರಿಸ್ಥಾನವೇ ಸಿಗಬೇಕಿತ್ತು. ಸ್ಪೀಕರ್ ಹುದ್ದೆ ನೀಡುವ ಮೂಲಕ ಪಕ್ಷ ಅವರಲ್ಲಿದ್ದ ಆಡಳಿತಾತ್ಮಕ ಶಕ್ತಿಯನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ. ಇದು ಒಂದು ರೀತಿಯಲ್ಲಿ ನಷ್ಟ ಎಂದರು.
ಸಾಮಾನ್ಯ ಕಾರ್ಯಕರ್ತರಿಗೆ, ಕ್ಷೇತ್ರದ ಬಹುತೇಕ ಜನರಿಗೆ ಮಂತ್ರಿಸ್ಥಾನವೇ ಸಿಗುತ್ತದೆ ಎಂಬ ನಿರೀಕ್ಷೆಯಿತ್ತು. ಅವರೆಲ್ಲರಿಗೆ ಸ್ಪೀಕರ್ ಹುದ್ದೆ ಬೇಡ ಎನ್ನಲು ಯಾವುದೇ ತಾತ್ವಿಕ ಕಾರಣಗಳಿಲ್ಲ. ಮಂತ್ರಿಯಾದರೆ ಕ್ಷೇತ್ರ ಹೆಚ್ಚು ಅಭಿವೃದ್ಧಿಯಾಗುತ್ತದೆ ಎನ್ನುವ ಕಲ್ಪನೆ ಮಾತ್ರ ಇದೆ.
ಚುನಾವಣೆ ಹೊತ್ತಿನಲ್ಲಿ ತಮ್ಮದು ಇದೇ ಕೊನೆಯ ಚುನಾವಣೆ, ಮುಂದೆ ಸ್ಪರ್ಧಿಸುವುದಿಲ್ಲ ಎಂದಿದ್ದ ಕಾಗೋಡು ಈ ಅವಧಿಯಲ್ಲಿ ಕ್ಷೇತ್ರದಲ್ಲಿ ಇನ್ನಿಲ್ಲದ ಅಭಿವೃದ್ಧಿ ಮಾಡಿ ಮಾದರಿಯಾಗಿ ನಿಲ್ಲುತ್ತಾರೆ ಎಂದು ಜನ ನಿರೀಕ್ಷಿಸಿದ್ದರು. ಈಗ ಸ್ಪೀಕರ್ ಹುದ್ದೆಯಲ್ಲಿದ್ದುಕೊಂಡೇ ಇದನ್ನು ಸಾಧಿಸಬೇಕಾದ ಸವಾಲು ಕಾಗೋಡು ತಿಮ್ಮಪ್ಪನವರ ಮುಂದಿದೆ.
- ರಾಜೇಶ ಭಡ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.