ಶಿವಮೊಗ್ಗ

ತಂಬಾಕು ನಿಷೇಧಿಸಲು ಕ್ಯಾಂಪ್ಕೋ ಆಗ್ರಹ

Published On :

ಶಿವಮೊಗ್ಗ: ರಾಜ್ಯ ಸರ್ಕಾರ ಗುಟ್ಕಾ ನಿಷೇಧಕ್ಕಿಂತ ತಂಬಾಕು ನಿಷೇಧಿಸುವ ಬಗ್ಗೆ ಚಿಂತಿಸಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷ ಕುಂಕೋಡಿ ಪದ್ಮನಾಭ ಅವರು ಹೇಳಿದ್ದು, ಅತೀ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದಿದ್ದಾರೆ.
ನಗರದಲ್ಲಿ ಅಡಕೆ ಮಾರುಕಟ್ಟೆಯ ವಿವಿಧ ಸಹಕಾರ ಸಂಸ್ಥೆಗಳ ಪ್ರಮುಖರ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು, ಗುಟ್ಕಾ ನಿಷೇಧದಿಂದ ಈ ರಾಜ್ಯದ ಸುಮಾರು 2 ಕೋಟಿ ಜನರ ಮೇಲೆ ಆಗುವ ಆರ್ಥಿಕ ದುಷ್ಪರಿಣಾಮಗಳಿಗೆ ಸೂಕ್ತ ಮಾರ್ಗೋಪಾಯಗಳನ್ನು ಸರ್ಕಾರ ಕಂಡುಕೊಳ್ಳಬೇಕು ಎಂದರು.
ಆಮದು ನಿಷೇಧಿಸಿ: ಕೇಂದ್ರ ಸರ್ಕಾರ ಬಾಂಗ್ಲಾ ಮತ್ತು ವಿವಿಧ ದೇಶಗಳಿಂದ ಆಮದು ಆಗುವ ಅಡಕೆಯನ್ನು ತಕ್ಷಣ ನಿಷೇಧಿಸಬೇಕು. ಈಗಾಗಲೇ ಆಮದಾಗಿರುವ ಅಡಕೆಯನ್ನು ಮುಟ್ಟುಗೋಲು ಹಾಕಿ ಸಿಎಫ್‌ಟಿಆರ್‌ಐನಲ್ಲಿ ಪರೀಕ್ಷಿಸಿ ಮಾರುಕಟ್ಟೆಗೆ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಅಡಕೆಯನ್ನು ಔಷಧೀಯ ಸಸ್ಯ ಎಂದು ಘೋಷಿಸಬೇಕು ಎಂದಿರುವ ಅವರು, ಹಳದಿ ಎಲೆ ಮುಂತಾದ ರೋಗಗಳ ಬಾಧೆಯಿಂದ ಸಂಕಷ್ಟಕ್ಕೆ ಈಡಾಗಿರುವ ರೈತರ ಬವಣೆಗಳಿಗೆ ಸೂಕ್ತ ಪರಿಹಾರ ಘೋಷಿಸಬೇಕು ಎಂದಿದ್ದಾರೆ.
ಕೋರ್ಟ್ ಮುಂದೆ ವಾದ: ಸುಪ್ರೀಂಕೋರ್ಟ್‌ನಲ್ಲಿ ಬೆಳೆಗಾರರ ಸಂಘಗಳು, ಸಹಕಾರ ಸಂಘಗಳು ವಾದ ಮಂಡಿಸುತ್ತಿವೆ. ರಾಜ್ಯ ಸರ್ಕಾರವೂ ಸಹ ಹಿರಿಯ ನ್ಯಾಯವಾದಿಯೊಬ್ಬರನ್ನು ನೇಮಕ ಮಾಡಿತ್ತು. ಇವರು ಬೆಳೆಗಾರರ ಪರವಾಗಿಯೂ ವಾದ ಮಂಡಿಸುತ್ತಾರೆ ಎಂದರು.
ಗುಟ್ಕಾ ನಿಷೇದವಾದರೆ ಅಡಕೆ ಬೆಲೆಯ ಮೇಲೆ ಹೆಚ್ಚು ಪರಿಣಾಮ ಆಗುವುದಿಲ್ಲ. ಒಂದಿಷ್ಟು ಏರುಪೇರು ಆಗಬಹುದಷ್ಟೇ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಿರ್ಸಿಯ ಟಿಎಸ್‌ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ, ಚನ್ನಗಿರಿ ತುಮ್‌ಕೋಸ್ ಅಧ್ಯಕ್ಷ ಶಿವಕುಮಾರ್, ಸಿರ್ಸಿ ಟಿಎಂಎಸ್ ಅಧ್ಯಕ್ಷ ಜಿ.ಎಂ. ಹೆಗಡೆ, ಮಾಜಿ ಶಾಸಕ ಆರಗ ಜ್‌ಞಾನೇಂದ್ರ, ಕ್ಯಾಂಪ್ಕೋ ನಿರ್ದೇಶಕರಾದ ಮಹಾಬಲಭಟ್ಟ, ಸುರೇಶ್‌ಚಂದ್ರ ಭಂಡಾರಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.