ತುಂಗಾ-ಭದ್ರಾ ಮರಳು ದಂಧೆ ಸಂಗಮ!
ಶಿವಮೊಗ್ಗ: ಶುಕ್ರವಾರ ಜಿಲ್ಲೆಯ ಅಧಿಕಾರಿ ವರ್ಗ ರಜೆಯ ಗುಂಗಿನಲ್ಲಿದ್ದರೆ, ಅತ್ತ ತುಂಗ ಹಾಗೂ ಭದ್ರಾ ನದಿ ಪಾತ್ರದಲ್ಲಿ ಮರಳುಗಳ್ಳರ ಅಟಾಟೋಪ ಮಿತಿಮೀರಿತ್ತು.
ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ನಿಷೇಧ ಇರುವ ಹಿನ್ನೆಲೆಯಲ್ಲಿ ಕನ್ನಡಪ್ರಭ ಶುಕ್ರವಾರ ನಡೆಸಿದ ರಿಯಾಲಿಟಿ ಚೆಕ್ನಲ್ಲಿ ಕಂಡುಬಂದ ದೃಶ್ಯವಿದು. ನಗರದ ಡಿಎಆರ್ ಮೈದಾನದಲ್ಲಿ ರಾಜ್ಯೋತ್ಸವ ಸಂಭ್ರಮ ನಡೆದಿತ್ತು. ನಾಡು ನುಡಿಯ ಗುಣಗಾನ, ಸಂಪತ್ತಿನ ವರ್ಣನೆ ನಡೆದಿತ್ತು. ಇತ್ತ ತುಂಗಭದ್ರಾ ನದಿಯ ಇಕ್ಕೆಲಗಳಲ್ಲೂ ಸಂಭ್ರಮವಿತ್ತು, ಕೇಕೆ ಮೇರೆ ಮೀರಿತ್ತು. ಅಧಿಕಾರಿಗಳಾರೂ ಇತ್ತ ಸುಳಿಯರೆಂಬ ಖಚಿತತೆ ಮೇರೆಗೆ ರಾಜಾರೋಷವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆದೇ ಇತ್ತು. ನೂರಾರು ಲೋಡ್ ಮರಳು ಟ್ರ್ಯಾಕ್ಟರ್ ನದಿ ಪಾತ್ರದಿಂದ ಮರಳನ್ನು ತಲುಪಿಸಬೇಕಾದ ಸ್ಥಳಕ್ಕೆ ತಲುಪಿದವು.
ಸುಪ್ರಿಂ ಹಸಿರು ಪೀಠದ ಆದೇಶದ ಅನ್ವಯ ಪರಿಸರ ವಿಮೋಚನಾ ಪತ್ರ ಪಡೆಯದೆ ಮರಳು ಗಣಿಗಾರಿಕೆ ನಡೆಸಬಾರದೆಂಬ ಸೂಚನೆಯಂತೆ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ನಿಷೇಧಿಸಲಾಗಿದೆ. ಇದರಿಂದ ಮರಳಿನ ದಾಹ ಹೆಚ್ಚಾಗಿದ್ದು, ಇದನ್ನು ಉಪಯೋಗಿಸಿಕೊಂಡ ಮರಳು ಕಳ್ಳರು, ಪ್ರಮುಖ ನದಿಗಳ ಪಾತ್ರದಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಸಿದ್ದಾರೆ.
ಜಿಲ್ಲಾಧಿಕಾರಿಯವರು ಅಕ್ರಮ ಮರಳು ಗಣಿಗಾರಿಕೆಗೆ ನಿಯಂತ್ರಿಸುತ್ತೇವೆಂದು ಹೇಳಿದ್ದಾರೆ ಹೊರತು, ಅಧಿಕಾರಿ ವರ್ಗ ಮಾತ್ರ ನಿಯಂತ್ರಣಕ್ಕೆ ಆಸಕ್ತಿ ತೋರಿಸಿಲ್ಲ ಎಂಬುದಕ್ಕೆ ಸ್ಪಷ್ಟ ಉದಾಹರಣೆಗಳು ಸಿಕ್ಕವು.
ರಿಯಾಲಿಟಿ ಚೆಕ್: ತುಂಗ- ಭದ್ರಾ ನದಿ ಸಂಗಮ ಕ್ಷೇತ್ರವಾದ ಕೂಡ್ಲಿಯ ಆಸುಪಾಸಿನಲ್ಲೇ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂಬ ಕನ್ನಡಪ್ರಭ ಓದುಗರೊಬ್ಬರ ಅವರ ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ಕೊಟ್ಟಾಗ, ಎಲ್ಲವೂ ಗುಪ್ತ ಗುಪ್ತ್ ಆಗಿ ಕಂಡುಬಂದಿತು. ಸಂಗಮದ ಬಳಿಯೇ ಇದ್ದ ವ್ಯಕ್ತಿಯೊಬ್ಬರ ಬಳಿ ಒಳ್ಳೆ ಮರಳು ಬೇಕಿತ್ತು ಎಲ್ಲಿ ಸಿಗುತ್ತದೆ ಎಂದು ಕೇಳಿದಾಗ ಅವರು ಇಡೀ ಚಿತ್ರಣದ ಒಂದು ಭಾಗವನ್ನು ಬಿಡಿಸಿಟ್ಟರು.
ಅವರ ಮಾಹಿತಿ ಅರಸಿ ಹೊರಟಾಗ ತುಂಗ- ಭದ್ರಾ ಸಂಗಮದಿಂದ ಕೆಲವೇ ಮೀಟರ್ಗಳ ಅಂತರದಲ್ಲಿ ದೊಡ್ಡದಾದ ಮರಳಿನ ರಾಶಿ ಕಂಡುಬಂತು. ಅಲ್ಲಿಂದ ತುಂಗಾ ನದಿ ಪಾತ್ರದಲ್ಲಿ ಹುಡುಕಿದರೆ ಅಲ್ಲಿ ಒಂದಷ್ಟು ಮಂದಿ ಮರಳು ಒಟ್ಟು ಮಾಡುವ ಕಾಯಕದಲ್ಲಿದ್ದರು. ಅಲ್ಲಿ ದೊಡ್ಡ ದೊಡ್ಡ ಮರಳು ರಾಶಿಗಳು ಕಂಡುಬಂದು, ಟ್ರ್ಯಾಕ್ಟರ್ಗಾಗಿ ಕಾದಿದ್ದವು.
ಅಲ್ಲಿಂದ ಭದ್ರಾ ನದಿಯ ಪಾತ್ರಕ್ಕೆ ಬಂದರೆ, ಅಲ್ಲಿ ತುಂಗಾ ಪಾತ್ರದಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ಮೀರಿಸುವಷ್ಟು ಚಟುವಟಿಕೆ ನಡೆದಿತ್ತು. ಟ್ರ್ಯಾಕ್ಟರ್ ಒಂದಕ್ಕೆ ಮರಳು ತುಂಬುತ್ತಿದ್ದ ಫೋಟೋ ತೆಗೆಯಲು ಕ್ಯಾಮೆರಾ ತೆಗೆದು ನದಿ ಪಾತ್ರಕ್ಕೆ ತೆರಳುತ್ತಿದ್ದಂತೆ, ಅಲ್ಲೇ ಇದ್ದ ಮರಳ್ಗಳ್ಳರ ಮಾಹಿತಿ ದಾರ ಕೊಟ್ಟ ಸೂಚನೆ ಮೇರೆಗೆ ಅನೇಕರು ಒಟ್ಟಾಗಿ ಬಂದುಬಿಟ್ಟಿದ್ದರು.
ಹೇಳೋರಿಲ್ಲ ಕೇಳೋರಿಲ್ಲ: ಸರ್ಕಾರಕ್ಕೆ ನಯಾಪೈಸೆ ಆದಾಯವಿಲ್ಲದೆ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ದಂಧೆಯನ್ನು ಕಂಡೂ ಕಾಣದಂತೆ ಅಧಿಕಾರಿಗಳು ತೆಪ್ಪಗೆ ಕುಳಿತಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ. ಯಾಂತ್ರೀಕೃತ ದೋಣಿ, ಜೆಸಿಬಿಯನ್ನೂ ಬಳಸಿ ನದಿ ಪಾತ್ರದಿಂದ ಮರಳು ತೆಗೆಯಲಾಗುತ್ತಿದೆ. ಸಂಜೆಯಾಗುತ್ತಿದ್ದಂತೆ ಮರಳು ಸಂಗ್ರಹ ಕಾರ್ಯ ನಡೆದು, ಬೆಳಗಿನ ಜಾವದಲ್ಲಿ ಮರಳು ನಗರದೊಳಗೆ ಸರಬರಾಜಾಗುತ್ತಿದೆ.
ಕೂಡ್ಲಿ ಸೇರಿದಂತೆ ತುಂಗಭದ್ರಾ ನದಿ ಹರಿಯುವ ಸನ್ಯಾಸಿ ಕೊಡಮಗ್ಗೆ, ಹೊಳಲೂರು, ಗೋಂಧಿ ಚಟ್ನಳ್ಳಿ, ಹೊಳೆಹಟ್ಟಿ, ಬುಳ್ಳಾಪುರ, ಸೂಗೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ತುಂಗಾ ಹಾಗೂ ತುಂಗಾಭದ್ರಾ ನದಿಗಳಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದ್ದು, ನಿತ್ಯವೂ ನೂರಾರು ಲೋಡ್ ಮರಳು ಇಲ್ಲಿಂದ ಸರಬರಾಜಾಗುತ್ತಿದೆ.
ಇದೊಂದು ದೊಡ್ಡ ಮಾಫಿಯಾವಾಗಿ ಬೆಳೆದು ನಿಂತಿದ್ದು, ಇದರ ವಿರುದ್ದ ಧ್ವನಿ ಎತ್ತುವವರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಹೊಳಲೂರಿನ ಗ್ರಾಮಸ್ಥರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.
ಡಿಸಿಯವರೇ ಏಕೆ ಈ ನಿರ್ಲಕ್ಷ್ಯ?
ಅಕ್ರಮ ಮರಳು ಗಣಿಗಾರಿಕೆ ನಿಲ್ಲಿಸಲು ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳಿಗೆ ಅವಕಾಶವಿದೆ, ಹೊಣೆಗಾರಿಕೆ ಇದೆ. ಆದರೆ, ಅಧಿಕಾರಿಗಳು ಮಾತ್ರ ಇದರ ಬಗ್ಗೆ ಸೊಲ್ಲೆತ್ತುತ್ತಿಲ್ಲ. ರಾಜ್ಯ ಸರ್ಕಾರ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿದೆ. ಈ ಸಮಿತಿಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ಜಿಪಂ ಸಿಇಒ, ಎಸ್ಪಿ, ಲೋಕೋಪಯೋಗಿ ಅಭಿಯಂತರ, ಡಿಎಫ್ಓ, ಆರ್ಟಿಓ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕರು ಮತ್ತು ಸಂಬಂಧಪಟ್ಟ ತಹಸೀಲ್ದಾರ್ ಇರುತ್ತಾರೆ. ಈ ಅಧಿಕಾರಿಗಳು ತಮ್ಮ ಅಧೀನ ಅಧಿಕಾರಿಯ ಮೂಲಕ ಅಕ್ರಮ ಗಣಿಗಾರಿಕೆ ತಡೆಯುವ ಅವಕಾಶವನ್ನು ಮರಳು ನೀತಿಯ ರೂಲ್ ನಂಬರ್ 31 ಆರ್ (12)ರ ಕಲ್ಪಿಸಿದೆ. ಅಲ್ಲದೆ, ಅದೇ ರೀತಿ ಕೆಎಂಎಂಆರ್ಸಿ ಸಿಆರ್ 43(3) ನಿಯಮದಂತೆ ಸಬ್ ಇನ್ಸ್ಪೆಕ್ಟರ್, ಆರ್ಐಗಳೂ ಮರಳು ಲಾರಿಗಳನ್ನು ನಿಲ್ಲಿಸಿ ಪರಿಶೀಲಿಸಲು ಅಧಿಕಾರ ನೀಡಲಾಗಿದೆ. ಇಷ್ಟೊಂದು ಶಕ್ತಿ ಇದ್ದರೂ ಬಳಕೆ ಮಾತ್ರ ಆಗುತ್ತಿಲ್ಲ ಎಂಬ ಮಾತಿದೆ.
ಶ್ರೀಕಾಂತ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

