ಶಿವಮೊಗ್ಗ

ಆನಂದಪುರಂ ಆಸ್ಪತ್ರೆಗೆ ಕಾಯಂ ವೈದ್ಯರ ನೇಮಕಕ್ಕೆ ಆಗ್ರಹ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ,  ನ.4
ಸಾಗರ ತಾಲೂಕಿನ ಆನಂದಪುರಂನ ಸರ್ಕಾರಿ ಆಸ್ಪತ್ರೆಗೆ ಕಾಯಂ ವೈದ್ಯರನ್ನು ನೇಮಕ ಮಾಡುವಂತೆ ಆಗ್ರಹಿಸಿ ದಸಂಸ, ಕೊಡಚಾದ್ರಿ ಪ್ರವಾಸಿ ವಾಹನ ಚಾಲಕರು ಹಾಗೂ ಮಾಲೀಕರ ಸಂಘದ ಸಂಯುಕ್ತಾಶ್ರಯದಲ್ಲಿ ಆನಂದಪುರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಇಲ್ಲಿನ ಕನಕಮ್ಮಾಳ್ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಸೋಮವಾರ  ನಡೆದ ಪ್ರತಿಭಟನಾ ಧರಣಿಯನ್ನುದ್ದೇಶಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಂ. ಗುರುಮೂರ್ತಿ, ಕನಕಮ್ಮಾಳ್ ಸಂಯುಕ್ತ ಆಸ್ಪತ್ರೆಯನ್ನು 30 ಹಾಸಿಗೆಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಸರ್ಕಾರ 2001ರಲ್ಲಿಯೇ ಆದೇಶ ಮಾಡಿದೆ. ಈ ಆಸ್ಪತ್ರೆಯಲ್ಲಿ ಇಲಾಖೆಯ ನಿಯಮಾನುಸಾರ 5 ಜನ ವೈದ್ಯರಿರಬೇಕು. ಆದರೆ ಒಬ್ಬ ವೈದ್ಯರನ್ನಾದರೂ ಸರ್ಕಾರ ನೇಮಕ ಮಾಡದೇ ಇರುವುದು ಅತ್ಯಂತ ಖಂಡನೀಯ ಎಂದರು.
ಸರ್ಕಾರ ವೈದ್ಯರನ್ನು ನೇಮಕ ಮಾಡುವಾಗ 1 ವರ್ಷ ಕಡ್ಡಾಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಮಾಡಬೇಕು ಎಂದು ನಿಯಮ ರೂಪಿಸಿದೆ. ಒಂದು ವೇಳೆ ಈ ನಿಯಮಕ್ಕೆ ವಿರುದ್ಧವಾಗಿ ನಡೆದರೆ 1 ಲಕ್ಷ ದಂಡ ವಿಧಿಸಲಾಗುತ್ತದೆ.
ಈ ನಿಯಮ ರೂಪಿಸಿದ್ದರೂ ವೈದ್ಯರು ಇದುವರೆವಿಗೂ ಗ್ರಾಮೀಣ ಪ್ರದೇಶದಲ್ಲಿ ಸೇವೆ ಮಾಡಲು ಮುಂದೆ ಬರುತ್ತಿಲ್ಲ. ಗ್ರಾಮೀಣ ಪ್ರದೇಶಕ್ಕೆ ಬಾರದೆ ಒಂದೊಂದು ಲಕ್ಷ ರು. ಹಣವನ್ನು ಸರ್ಕಾರಕ್ಕೆ ದಂಡದ ರೂಪದಲ್ಲಿ ಕಟ್ಟಿದ್ದಾರೆ. ಒಂದು ಅಂದಾಜಿನ ಪ್ರಕಾರ ಈ ದಂಡದ ಹಣವೇ ಸುಮಾರು 10 ಕೋಟಿಗಳಾಗಿದೆ ಎಂದು ಗುರುಮೂರ್ತಿಯವರು ಹೇಳಿದರು.
ಸೌಲಭ್ಯವಿಲ್ಲದಿದ್ದರೆ ಆಸ್ಪತ್ರೆ ಮುಚ್ಚಿ: ಒಂದು ವಾರದೊಳಗೆ ಸರ್ಕಾರಿ ಆಸ್ಪತ್ರೆಗೆ ವೈದ್ಯರನ್ನು ನೇಮಕ ಮಾಡಬೇಕು. ಪೂರ್ಣ ಪ್ರಮಾಣದ ಸಿಬ್ಬಂದಿ ನೇಮಿಸಬೇಕು. ಹೊಸ ಕ್ಷ-ಕಿರಣವನ್ನು ಒದಗಿಸಬೇಕು.
ಆಸ್ಪತ್ರೆಯಲ್ಲಿ ಕುಡಿಯುವ ನೀರು ಹಾಗೂ ವಸತಿ ಗೃಹಗಳನ್ನು ಮತ್ತು ಮೂಲ ಸೌಕರ್ಯಗಳನ್ನು ಒದಗಿಸಬೇಕು. ಒಂದು ವೇಳೆ ವೈದ್ಯರನ್ನು ನೇಮಕ ಮಾಡದೇ ಇದ್ದರೆ ಸರ್ಕಾರಿ ಆಸ್ಪತ್ರೆಯನ್ನು ಮುಚ್ಚಬೇಕು ಎಂದು ಗುರುಮೂರ್ತಿ ಸರ್ಕಾರವನ್ನು ಆಗ್ರಹಿಸಿದರು.
ಈ ಎಲ್ಲಾ ಬೇಡಿಕೆಗಳು ಈಡೇರದಿದ್ದರೆ, ಜನಪ್ರತಿನಿಧಿಗಳಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಸಮಿತಿಯು ಹಮ್ಮಿಕೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಈ ಸಭೆಯನ್ನುದ್ದೇಶಿಸಿ ಸಮಿತಿ ಜಿಲ್ಲಾ ಸಂಚಾಲಕ ಟಿ.ಎಚ್. ಹಾಲೇಶಪ್ಪ, ರೇವಪ್ಪ ಹೊಸಕೊಪ್ಪ, ಶೇಖರ್ ಬಾಳಗೋಡ, ಕಿರಣಕುಮಾರ, ಪ್ರೇಮ್ ಮೊದಲಾದವರು ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಂದಾಸುರ ಭರ್ಮಪ್ಪನವರು ಮನವಿ ಪತ್ರವನ್ನು ಓದಿ ಉಪತಹಸೀಲ್ದಾರ್ ಅವರಿಗೆ ಸಲ್ಲಿಸಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.