ಸರ್ಕಾರಿ ವೈದ್ಯರ ಖಾಸಗಿ ಸೇವೆ ಮೇಲೆ ಹದ್ದಿನ ಕಣ್ಣು
ಕ.ಪ್ರ.ವಾರ್ತೆ, ಶಿವಮೊಗ್ಗ, ನ. 5
ಸರ್ಕಾರಿ ವೈದ್ಯಕೀಯ ಸ್ವಾಯತ್ತ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಕೆಲವು ವೈದ್ಯರು ಕರ್ತವ್ಯದ ಸಮಯದಲ್ಲಿ ವೈದ್ಯ ವೃತ್ತಿ ನಡೆಸುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಸಾಕಷ್ಟು ಅನನುಕೂಲತೆಗಳಾಗುತ್ತಿರುವ ಬಗ್ಗೆ ಸರ್ಕಾರಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ವೈದ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲು ವೈದ್ಯಕೀಯ ಶಿಕ್ಷಣ ಸಚಿವರು ವೈದ್ಯ ವಿಜ್ಞಾನಗಳ ಸಂಸ್ಥೆಗಳಿಗೆ ಆದೇಶಿಸಿದ್ದಾರೆ.
ಈಗಾಗಲೇ ಹಾಲಿ ಇರುವ ಆದೇಶ ಕ್ರೋಢೀಕರಿಸಿ ಹಲವು ಸೂಚನೆ ನೀಡಿದ್ದು, ಅದರಂತೆ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸುತ್ತೋಲೆ ಹೊರಡಿಸಿದ್ದು, ಸರ್ಕಾರದ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸುವಂತೆಯೂ, ನಿಯಮ ಉಲ್ಲಂಘನೆ ಸಂಬಂಧ ದೂರು ಬಂದಲ್ಲಿ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಹಾಲಿ ಅನೇಕ ವೈದ್ಯರು ಮಾಸಿಕ ರು. 17,000 ದಿಂದ ರು. 8,000ದವರೆಗೆ ವಿವಿಧ ಹಂತಗಳಲ್ಲಿ ಭತ್ಯೆ ಪಡೆಯುತ್ತಿದ್ದಾರೆ. ಆದರೆ, ಖಾಸಗಿ ವೃತ್ತಿಯನ್ನು ಮುಂದುವರಿಸಿದ್ದಾರೆ. ಹಾಗೆಯೇ ಭತ್ಯೆ ಪಡೆಯದ ಕೆಲವು ವೈದ್ಯರು ಸರ್ಕಾರಿ ಆಸ್ಪತ್ರೆ ಕರ್ತವ್ಯದ ವೇಳೆಯಲ್ಲೇ ಖಾಸಗಿಯಾಗಿ ಪ್ರಾಕ್ಟಿಸ್ ಮಾಡುತ್ತಿರುವ ಬೆಳವಣಿಗೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
ಸರ್ಕಾರ ಹೊರಡಿಸಿದ ಆದೇಶದ ಪ್ರಮುಖಾಂಶ
ಖಾಸಗಿಯಾಗಿ ಪ್ರಾಕ್ಟಿಸ್ ಮಾಡದ ವೈದ್ಯರಿಗೆಂದು ಸರ್ಕಾರ ನೀಡುವ ಎನ್ಪಿಎ (ಭತ್ಯೆ)ಪಡೆಯುತ್ತಿರುವ ವೈದ್ಯರು ಖಾಸಗಿಯಾಗಿ ಯಾವುದೇ ವೈದ್ಯ ವೃತ್ತಿ ನಡೆಸುವಂತಿಲ್ಲ. ನಿಯಮ ಉಲ್ಲಂಘಿಸಿದ್ದು ಕಂಡುಬಂದರೆ ನಿಯಮಾನುಸಾರ ಕ್ರಮ ತೆಗೆದುಕೊಳ್ಳುವುದರ ಜೊತೆಗೆ ಇದುವರೆಗೆ ಪಡೆದಿರುವ ಭತ್ಯೆಯನ್ನು ವಾಪಸ್ ಪಡೆಯಲಾಗುತ್ತದೆ.
ಭತ್ಯೆ ಪಡೆಯದ ವೈದ್ಯರು ಖಾಸಗಿ ವೃತ್ತಿಯನ್ನು ಆಸ್ಪತ್ರೆಯ ಕರ್ತವ್ಯದ ಸಮಯದ ನಂತರ ನಡೆಸಬಹುದಾಗಿರುತ್ತದೆ. ಭೋಜನ ವಿರಾಮವನ್ನು ಕರ್ತವ್ಯದ ಸಮಯವೆಂದು ಪರಿಗಣಿಸುವುದರಿಂದ ಈ ಸಮಯದಲ್ಲಿ ಖಾಸಗಿ ವೃತ್ತಿ ನಡೆಸುವುದು ನಿಷೇಧಿಸಲಾಗಿದೆ.
ಆಸ್ಪತ್ರೆಯ ಸಮಯ ಬೆಳಗ್ಗೆ 9ರಿಂದ ಸಂಜೆ 4.30ರವರೆಗಿರುತ್ತದೆ. ಹೊರ ರೋಗಿಗಳ ವಿಭಾಗ ಸಂಜೆ 4 ಗಂಟೆವರೆಗೆ ಇರುತ್ತದೆ. ಉಳಿದ ಸಮಯ ಶೈಕ್ಷಣಿಕ ಕಾರ್ಯಗಳಿಗೆ ಹಾಗೂ ಒಳರೋಗಿಗಳ ಪರೀಕ್ಷೆಗಾಗಿ ಮೀಸಲಾಗಿರುತ್ತದೆ.
ರಜೆ ಹಾಕಿ ಖಾಸಗಿ ವೃತ್ತಿಯನ್ನು ನಡೆಸುವಂತಿಲ್ಲ. ಖಾಸಗಿ ವೃತ್ತಿ ನಡೆಸುವ ಕಾರಣಕ್ಕೆ ಯಾವುದೇ ರೀತಿ ಮಂಜೂರು ಮಾಡುವುದಿಲ್ಲ.
ಪೋಸ್ಟ್ ಡ್ಯೂಟಿ ಆಫ್ ಅಥವಾ ರಾತ್ರಿ ಪಾಳಿಯ ಕರ್ತವ್ಯದ ನಂತರ ಸಿಗುವ ರಜೆಯಲ್ಲಿ ಖಾಸಗಿ ವೃತ್ತಿ ನಡೆಸುವಂತಿಲ್ಲ. ಏಕೆಂದರೆ ಆ ರಜೆಯಲ್ಲಿ ವಿಶ್ರಾಂತಿ ಪಡೆಯಬೇಕಾಗಿರುತ್ತದೆ.
ಯಾವ ವೈದ್ಯರೂ ಖಾಸಗಿ ಕ್ಲಿನಿಕ್, ಆಸ್ಪತ್ರೆಯ ಒಡೆತನ ಹೊಂದುವಂತಿಲ್ಲ.
ಎನ್ಪಿಎ ಭತ್ಯೆ ಪಡೆಯದಿರುವ ಪೈದ್ಯರು ತಮ್ಮ ಮನೆಯಲ್ಲಿ ಅಥವಾ ಒಂದು ಕ್ಲಿನಿಕ್ನಲ್ಲಿ ಹೊರ ರೋಗಿಗಳನ್ನು ನೋಡಬಹುದು. ಒಂದು ಆಸ್ಪತ್ರೆಗೆ ಭೇಟಿ ನೀಡಬಹುದು. ರೋಗಿಗಳ ಮನೆಗಳಿಗೂ ಭೇಟಿ ನೀಡಬಹುದು.
ತಾವು ಖಾಸಗಿ ವೃತ್ತಿ ನಡೆಸುವ ಕ್ಲಿನಿಕ್ ಮತ್ತು ಭೇಟಿ ನೀಡುವ ಆಸ್ಪತ್ರೆ ಬಗ್ಗೆ ಸಂಸ್ಥೆಗೆ ಮೊದಲೇ ತಿಳಿಸಿ ಲಿಖಿತ ಅನುಮತಿ ಪಡೆದಿರಬೇಕು.
ಆಸ್ಪತ್ರೆಯ ಕರ್ತವ್ಯದ ವೇಳೆಯಲ್ಲಿ ಅನಿವಾರ್ಯ ಕಾರಣಗಳಿಂದ ಹೊರಗೆ ಹೋಗುವ ಸಂದರ್ಭ ಎದುರಾದರೆ ತಮ್ಮ ವಿಭಾಗದಲ್ಲಿರುವ ಚಲನವಲನ ಪುಸ್ತಕದಲ್ಲಿ ಸಮಯ ನಮೂದಿಸಿ ವಿಭಾಗದ ಮುಖ್ಯಸ್ಥರ ಅನುಮತಿ ಪಡೆದು ಹೋಗುವುದು.
ಕರ್ತವ್ಯದ ಸಮಯದಲ್ಲಿ ಆಸ್ಪತ್ರೆಯಲ್ಲಿ ಅಥವಾ ವೈದ್ಯಕೀಯ ಸಂಸ್ಥೆಯಲ್ಲಿರುವುದು ಕಡ್ಡಾಯವಾಗಿರುವುದರಿಂದ ಬಯೋವುಟ್ರಿಕ್ಸ್ನಲ್ಲಿ ಸರಿಯಾದ ಸಮಯಕ್ಕೆ ಹಾಜರಾತಿ ನಮೂದಿಸಿ ಕೆಸಿಎಸ್ಆರ್ ನಿಯಮ ಪಾಲಿಸಲು ಸೂಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

