ಶಿವಮೊಗ್ಗ

ಲೈಂಗಿಕ ವೃತ್ತಿನಿರತರನ್ನು ಅಪರಾಧಿಗಳೆಂದು ನೋಡದಿರಿ

Published On :

ಶಿವಮೊಗ್ಗ: ನ್ಯಾಯದಾನ ನೀಡುವ ಸಂದರ್ಭದಲ್ಲಿ ಲೈಂಗಿಕ ವೃತ್ತಿನಿರತರನ್ನು ಅಪರಾಧಿಗಳೆಂದು (ಅಕ್ಯೂಸ್ಡ್) ನೋಡುವ  ದೃಷ್ಟಿಕೋನ ಬದಲಾಗಬೇಕು. ಅವರು ಅಪರಾಧಕ್ಕೆ ಒಳಪಟ್ಟವರು (ವಿಕ್ಟಿಮ್ಸ್) ಎಂಬ ಭಾವನೆಯಿಂದ ನೋಡಿ ಎಂದು ರಾಜ್ಯ ಹೈಕೋರ್ಟ್ ನ್ಯಾಯಾಧೀಶ, ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷ ನ್ಯಾಯಮೂರ್ತಿ ಎನ್. ಕುಮಾರ್ ನುಡಿದರು.
ಅವರು ನಗರದಲ್ಲಿ ಶನಿವಾರ ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನ, ಸಂವೇದನಾ, ಏಡ್ಸ್ ಪ್ರಿನೆನ್ಷನ್ ಸೊಸೈಟಿ, ಕರ್ನಾಟಕ ನ್ಯಾಯಾಂಗ ಅಕಾಡೆಮಿ ಹಾಗೂ ವಿವಿಧ ಸಂಸ್ಥೆಗಳು ಹಮ್ಮಿಕೊಂಡಿದ್ದ -ಜಿಲ್ಲಾ ನ್ಯಾಯಾಧೀಶರ ಸಂವೇದನಾ ಕಾರ್ಯಕ್ರಮ- ಉದ್ಘಾಟಿಸಿ ಮಾತನಾಡಿದರು.
ವೈಯಕ್ತಿಕ ಕಾರಣ: ಲೈಂಗಿಕ ವೃತ್ತಿಗೆ ಬರುವವರು ಯಾರೂ ತಾವಾಗಿಯೇ ಬರುವುದಿಲ್ಲ. ಶೇ.95 ಮಹಿಳೆಯರು ಯಾವ್ಯಾವುದೋ ವೈಯಕ್ತಿಕ ಕಾರಣದಿಂದ ಬಂದಿರುತ್ತಾರೆ. ಹತ್ತಾರು ವರ್ಷಗಳ ಹಿಂದೆ ಲೈಂಗಿಕ ಕಾರ್ಯಕರ್ತೆಯರ ಬಳಿ ಕಾಂಡೋಮ್ ಇದ್ದ ಮಾತ್ರಕ್ಕೆ ಅವರನ್ನು ಬಂಧಿಸಿ, ಇದೇ ಕಾಂಡೋಮನ್ನು ಸಾಕ್ಷಿಯಾಗಿ ಪರಿಗಣಿಸಲಾಗುತ್ತಿತ್ತು.
ಮಾಧ್ಯಮಗಳಲ್ಲಿ ವೈಭವೀಕೃತ ವರದಿ ಬರುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಮೊದಲ ಹಂತದಲ್ಲಿ ಮಾಧ್ಯಮ, ನಂತರ ಪೊಲೀಸರೊಂದಿಗೆ ನಿರಂತರ ಚರ್ಚೆ ನಡೆಸಿದ ನಂತರ ದೃಷ್ಟಿಕೋನ ಬದಲಾಗಿದೆ ಎಂದರು.
ಆದರೆ ಮಹಿಳಾ ನ್ಯಾಯಾಧೀಶರು ಇವರನ್ನು ಬೇರೆ ರೀತಿಯಲ್ಲಿಯೇ ನೋಡುತ್ತಿದ್ದಾರೆ. ಅವರು ಲೈಂಗಿಕ ವೃತ್ತಿ ಬಿಡಬೇಕೆಂದು ಅವರನ್ನು ರಿಮ್ಯಾಂಡ್ ಹೋಂಗೆ ಕಳುಹಿಸುತ್ತಾರೆ. ಆಲ್ಲಿಯೂ ನರಕಯಾತನೆ ಅನುಭವಿಸುತ್ತಿರುವುದು ಸತ್ಯ ಎಂದರು.
ಮಡಿವಂತಿಕೆ ಬಿಡಿ: ವಕೀಲರು ಮಡಿವಂತಿಕೆ ಬಿಡಬೇಕು. ಕೊಲೆಗಾರರು, ಭ್ರಷ್ಟಾಚಾರಿಗಳ ಪರ ವಕಾಲತ್ತು ಹಾಕುವ ತಾವು ಲೈಂಗಿಕ ವೃತ್ತಿನಿರತರ ಪರ ವಕಾಲತ್ತು ಹಾಕಲು ಹಿಂಜರಿಯಬಾರದು ಎಂದು ನ್ಯಾಯಮೂರ್ತಿ ಎನ್. ಕುಮಾರ್ ಸೂಚಸಿದರು.
ಈ ವಿಚಾರದಲ್ಲಿ ರಾಜಕೀಯ ವ್ಯಕ್ತಿಗಳಿಂದ ಬದಲಾವಣೆ ಅಸಾಧ್ಯ. ಕಾರ್ಯಾಂಗ, ನ್ಯಾಯಾಂಗ, ಆಡಳಿತ ವ್ಯವಸೆ ಒಂದಾದರೆ ಲೈಂಗಿಕ ಕಾರ್ಯಕರ್ತೆಯರೂ ಸಹ ಗೌರವಯುತ ಜೀವನ ನಡೆಸಬಹುದು ಎಂದರು. ಅವರಿಗೆ ನೆಮ್ಮದಿಯ ಬದುಕು ಕಟ್ಟಿಕೊಡುವುದು ಸಾಧ್ಯವಿಲ್ಲವಾದರೆ ನಾವು ನಮ್ಮ ಕರ್ತವ್ಯದಲ್ಲಿ ವಿಫಲರಾದೆವೆಂದೇ ತಿಳಿಯಬೇಕಾಗುತ್ತದೆ ಎಂದವರು ಹೇಳಿದರು.
ಪ್ರತಿಷ್ಠಾನದ ನಿರ್ದೇಶಕ ಎಚ್.ಎಸ್. ಅಶೋಕಾನಂದ್ ಸ್ವಾಗತಿಸಿದರು. ನ್ಯಾಯಾಂಗ ಅಕಾಡೆಮಿಯ ಪ್ರಭಾರಿ ನಿರ್ದೇಶಕ ಎಚ್.ಆರ್. ರಾಧಾ ವಂದಿಸಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಎಂ. ಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಜಿಪಂ ಸಿಇಒ ಸಸಿಕಾಂತ್ ಸೆಂಥಿಲ್ ಹಾಗೂ ವಕೀಲರ ಸಂಘದ ಅಧ್ಯಕ್ಷ ಅಶೋಕ್ ಭಟ್ ಆಗಮಿಸಿದ್ದರು.
ನಂತರ ಇಡೀ ದಿನ ಉಪನ್ಯಾಸ, ಸಂವಾದ ಸೇರಿದಂತೆ ಹಲವು ಕಾರ್ಯಕ್ರಮ ನಡೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.