ರಂಗೇರಿತು 'ಮಹಾಸಭಾ' ಚುನಾವಣೆ
ಕ.ಪ್ರ. ವಾರ್ತೆ, ಶಿವಮೊಗ್ಗ, ನ.10
ಜಿಲ್ಲಾ ಬ್ರಾಹ್ಮಣ ಮಹಾಸಭಾ ಚುನಾವಣೆ ರಂಗೇರಿದೆ. ಶಿವಮೊಗ್ಗ ನಗರ ಶಾಸಕರೇ ನೇರವಾಗಿ ಕಣಕ್ಕಿಳಿದಿದ್ದು, ಚುನಾವಣಾ ಕಣ ರಂಗುಪಡೆದುಕೊಂಡಿದೆ.
ನವೆಂಬರ್ 17ರಂದು ಮತದಾನ ನಡೆಯಲಿದ್ದು, ಹಿಂದೆಂಗಿಂತಲೂ ಹೆಚ್ಚಿನ ಚಟುವಟಿಕೆ ನಡೆದಿದೆ. ಒಟ್ಟು 21 ಸ್ಥಾನಗಳಿಗೆ 61 ನಾಮಪತ್ರ ಸಲ್ಲಿಕೆಯಾಗಿದೆ. ಈ ಪೈಕಿ ಶಿಕಾರಿಪುರ ಕ್ಷೇತ್ರದಿಂದ ವಸಂತಮಾಧವ ಅವಿರೋಧ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ನಗರ ಕ್ಷೇತ್ರಕ್ಕೆ 11 ಸ್ಥಾನ ಮೀಸಲಿದ್ದು, ಇಷ್ಟು ಸ್ಥಾನಗಳಿಗೆ ಬರೋಬ್ಬರಿ 45 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ನಿಟಕಪೂರ್ವ ಅಧ್ಯಕ್ಷ ಡಾ. ವೆಂಕಟರಾವ್ ಸೇರಿದಂತೆ ಶಾಸಕ ಕೆ.ಬಿ. ಪ್ರಸನ್ನಕುಮಾರ್, ನಟರಾಜ್ ಭಾಗವತ್, ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಸಂಘಟನಾ ಕಾರ್ಯದರ್ಶಿ ಮ.ಸ. ನಂಜುಂಡಸ್ವಾಮಿ, ವಿಶ್ವೇಶ್ವರಯ್ಯ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಶೇಷಪ್ಪ ಸ್ಪರ್ಧೆಗಿಳಿದಿರುವ ಪ್ರಮುಖರು.
ಯುವಕರೇ ಕಣಕ್ಕೆ: ಈ ಹಿಂದಿನ ಕಾರ್ಯಕಾರಿ ಮಂಡಳಿಗೆ ಸವಾಲೆನಿಸುವಂತೆ ಯುವಕರ ತಂಡವೇ ಕಣಕ್ಕಿಳಿದು ಅಚ್ಚರಿ ಮೂಡಿಸಿದೆ. ಅವಿರೋಧ ಆಯ್ಕೆಯ ಕನಸು ಕಟ್ಟಿದ್ದವರಿಗೆ ತಳಮಳ ಆರಂಭವಾಗಿದೆ. ಈ ನಡುವೆಯೇ ಬಲಾಬಲದ ಚರ್ಚೆ ಆರಂಭವಾಗಿದ್ದು, ಯಾರ ಬಳಿ ಎಷ್ಟು ಮತಗಳಿವೆ ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ.
ಬಿರುಸಿನ ಚಟುವಟಿಕೆಯ ನಡುವೆಯೇ ತಮ್ಮದೇ ಸಿಂಡಿಕೇಟ್ ರಚಿಸಿಕೊಂಡು ಕಣಕ್ಕಿಳಿಯುವ ಪ್ರಯತ್ನವೂ ಸಾಗಿದೆ. ತಮ್ಮ ತಂಡದಲ್ಲಿ ಯಾರಿರಬೇಕು, ಯಾರಿರಬಾರದು ಎಂಬ ಲೆಕ್ಕಾಚಾರ ಹಾಕಿದ್ದು ವ್ಯಕ್ತಿಯ ಪ್ರಭಾವದ ಆಧಾರದ ಮೇಲೆ ತಂಡ ರಚನೆಯಾಗುತ್ತಿದೆ.
ಈ ನಡುವೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಬ್ರಾಹ್ಮಣ ಮಹಾಸಭಾ ಸಾಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಮ.ಸ. ನಂಜುಂಡಸ್ವಾಮಿ, ಹಾಲಿ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನಾನು ಕಾರ್ಯ ನಿರ್ವಹಿಸುತ್ತಿದ್ದೇನೆ. ಈ ಹಿನ್ನೆಲೆಯಲ್ಲಿಯೇ ತಾಲೂಕು ಸಂಘ, ಜಿಲ್ಲಾ ಸಂಘ ಹಾಗೂ ಕೇಂದ್ರ ಸಂಘದ ಕೊಂಡಿಯಾಗಿ ಕೆಲಸ ಮಾಡುವ ಸಲುವಾಗಿ ಚುನಾವಣಾ ಕಣದಲ್ಲಿದ್ದೇನೆ ಎಂದು ಹೇಳಿದ್ದಾರೆ.
ಈ ಕರ್ತವ್ಯವನ್ನು ಪ್ರಾಮಾಣಿಕವಾಗಿ ಬೇರೆ ಯಾರಾದರೂ ನಿರ್ವಹಿಸಲು ಬಯಸಿದಲ್ಲಿ, ನಾನು ಚುನಾವಣಾ ಕಣದಿಂದ ಸ್ವಇಚ್ಛೆಯಿಂದ ನಿವೃತ್ತಿಯಾಗಲೂ ಸಿದ್ಧನಿದ್ದೇನೆಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆಯೇ ಸಂಘಟನೆಯನ್ನು ಕಟ್ಟಿ ಬೆಳೆಸಿ ಸಮಾಜಕ್ಕಾಗಿ ಅನೇಕ ಕೆಲಸ ಕಾರ್ಯಗಳನ್ನು ಮಾಡಿದ ಕೆಲವು ಹಿರಿಯ ಸದಸ್ಯರು ಇತ್ತೀಚಿನ ಬೆಳವಣಿಗೆ ಕಂಡು ನಾಮಪತ್ರ ಹಿಂದೆ ಪಡೆಯಲೂ ಸಹ ಯೋಚಿಸಿದ್ದಾರೆ ಎನ್ನಲಾಗಿದೆ.
ಎಲ್ಲಿಂದ ಎಷ್ಟು ನಾಮಪತ್ರ: ಶಿವಮೊಗ್ಗ ನಗರ ಕ್ಷೇತ್ರ- 45, ಶಿವಮೊಗ್ಗ ಗ್ರಾಮಾಂತರ- 2, ಭದ್ರಾವತಿ-2, ಸಾಗರ- 3, ಸೊರಬ- 4, ಶಿಕಾರಿಪುರ-1, ತೀರ್ಥಹಳ್ಳಿ- 2 (ಒಂದು ನಾಮಪತ್ರ ತಿರಸ್ಕೃತ ಹೊರತುಪಡಿಸಿ), ಹೊಸನಗರ-2.
ಒಟ್ಟಾರೆ 21 ಸ್ಥಾನಕ್ಕೆ 61 ನಾಮಪತ್ರ ಸಲ್ಲಿಕೆಯಾಗಿದ್ದು, ಪ್ರಭಾವಿಗಳು ನಾಮಪತ್ರ ಹಿಂದೆ ತೆಗೆಸಲು ಇನ್ನಿಲ್ಲದ ಪ್ರಯತ್ನ ನಡೆಸಿರುವ ಸಂಗತಿ ಗುಟ್ಟಾಗಿ ಉಳಿದಿಲ್ಲ. ನವೆಂಬರ್ 11 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ನ.17ರಂದು ಬೆಳಿಗ್ಗೆ 10.30ರಿಂದ 2.30ರವರೆಗೆ ಮತದಾನ ನಡೆಯಲಿದ್ದು, ಮತದಾನ ಮುಗಿದ ನಂತರ ಮತ ಎಣಿಕೆ ಕಾರ್ಯ ನಡೆಯುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

