ಸಮಿತಿಗಳಿಲ್ಲ, ಆದರೂ ಬಗರ್ಹುಕುಂ ರಾಜಕಾರಣ
ಕ.ಪ್ರ.ವಾರ್ತೆ, ಶಿವಮೊಗ್ಗ, ನ.10
ಕಾಗೋಡು ಚಳವಳಿಯ ನೆಲೆವೀಡಾದ ಶಿವಮೊಗ್ಗ ಜಿಲ್ಲೆಯಲ್ಲಿ ಬಗರ್ಹುಕುಂ ಸಮಸ್ಯೆ ಯಾವತ್ತಿಗೂ ರಾಜಕಾರಣಿಗಳಿಗೆ ಅತ್ಯಂತ ಪ್ರಿಯವಾದ ಸಮಸ್ಯೆ. ಈ ಸಮಸ್ಯೆ ಎಷ್ಟೋ ಪಕ್ಷಗಳನ್ನು ಗೆಲ್ಲಿಸಿದೆ, ಇನ್ನೆಷ್ಟೋ ಅಭ್ಯರ್ಥಿಗಳನ್ನು ಸೋಲಿಸಿದೆ.
ಚುನಾವಣೆಗೆ ಮುಂಚೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮೇಲುಗೈ ಪಡೆಯಲು ಈ ಸಮಸ್ಯೆಯೇ ನೆರವಾಗಿತ್ತು. ಜಾತ್ಯತೀತ ಜನತಾದಳವೂ ಸಹ ಇದರ ಆಸರೆ ಪಡೆದಿತ್ತು.
ಈಗ ಕಾಂಗ್ರೆಸ್ ಪಕ್ಷವು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕುಂಸಿಯಲ್ಲಿ ಬಗರ್ಹುಕುಂ ರೈತರ ಸಮಾವೇಶ ಆಯೋಜಿಸಿದೆ. ಈ ಸಮಾವೇಶವು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜೆಡಿಎಸ್ ಪಕ್ಷದ ಶಾರದಾ ಪೂರ್ಯಾನಾಯ್ಕ್ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಮೂವರು ಸಚಿವರು ಸಮಾವೇಶಕ್ಕೆಂದು ಜಿಲ್ಲೆಗೆ ಬರುತ್ತಿರುವುದು ವಿಶೇಷ.
ಮುತುವರ್ಜಿ ವಹಿಸದ ಅಧಿಕಾರಿಗಳು: ವಾಸ್ತವವೇನೆಂದರೆ ಬಗರ್ ಹುಕುಂ ರೈತರ ಅರ್ಜಿ ವಿಲೇವಾರಿ ಮಾಡಲು ಬೇಕಾದ ಬಗರ್ಹುಕುಂ ಸಕ್ರಮೀಕರಣ ಸಮಿತಿಗಳು ಇಡೀ ರಾಜ್ಯದಲ್ಲಿ ರಚನೆಯಾಗಿರುವುದು ಕಾಗೋಡು ತಿಮ್ಮಪ್ಪ ಅವರು ಪ್ರತಿನಿಧಿಸುತ್ತಿರುವ ಸಾಗರ ಮತ್ತು ಹೊಸನಗರ ತಾಲೂಕುಗಳಲ್ಲಿ ಮಾತ್ರ. ಇನ್ನೆಲ್ಲೂ ರಚನೆಯಾಗಿಲ್ಲ. ಅಲ್ಲದೇ ಅರಣ್ಯ ಹಕ್ಕು ಕಾಯ್ದೆ ಅಡಿ ಗ್ರಾಮ ಅರಣ್ಯ ಸಮಿತಿಗಳ ರಚನೆ ಈಗ ತಾನೇ ಆರಂಭವಾಗಿದೆ. ವೈಯಕ್ತಿಕ ಫಲಾನುಭವಿಗಳು ಪರಿತಪಿಸುತ್ತಿದ್ದಾರೆ. ಇನ್ನೊಂದೆಡೆ ಸಮುದಾಯದ ಹಕ್ಕುಗಳನ್ನು ಪಡೆಯಬೇಕಾದ ಕೆಲಸವನ್ನು ಜಿಲ್ಲೆಯ ಇಲಾಖೆ ಅಧಿಕಾರಿಗಳೇ ಮುತವರ್ಜಿಯಿಂದ ಮಾಡುತ್ತಿಲ್ಲ.
ಹೋರಾಟಗಾರರು: ಬಗರ್ಹುಕುಂ ಸಮಸ್ಯೆ ಎಂದಾಕ್ಷಣ ಜಿಲ್ಲೆಯ ಮೂವರು ಪ್ರಮುಖ ರಾಜಕಾರಣಿಗಳು ನೆನಪಾಗುತ್ತಾರೆ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಈಗ ಇಲ್ಲ. ಸಾಗರ ಶಾಸಕ ಕಾಗೋಡು ತಿಮ್ಮಪ್ಪ ಅವರು ಹಾಲಿ ವಿಧಾನಪರಿಷತ್ತಿನ ಸಭಾಧ್ಯಕ್ಷರು. ಇನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು. ಇವರು ಬಗರ್ಹುಕುಂ ರೈತರ ಸಮಸ್ಯೆಯನ್ನು ಮುಂದಿಟ್ಟು ನಡೆಸಿದ ಹೋರಾಟಗಳು, ಸಾರ್ವಜನಿಕ ಸಭೆಗಳಿಗೆ ಲೆಕ್ಕವೇ ಇಲ್ಲ.
ಭೂಸುಧಾರಣಾ ಕಾಯ್ದೆ ಅಡಿ 'ಉಳುವವನೇ ಹೊಲದೊಡೆಯ' ಎಂಬ ತತ್ವಕ್ಕೆ ಅನುಸಾರವಾಗಿ ತಿದ್ದುಪಡಿಯಾದಾಗ ಕಾಗೋಡು ತಿಮ್ಮಪ್ಪ ಅವರು ಸಾಗರ ಕ್ಷೇತ್ರದ ಹಳ್ಳಿಹಳ್ಳಿಗಳಿಗೆ ಭೇಟಿ ನೀಡಿ ಜನರಿಂದ ಅರ್ಜಿ ಹಾಕಿಸಿದರು. ಅಂದು ಬಿ.ಆರ್. ಜಯಂತ್ ಇವರ ಕೈಜೋಡಿಸಿದ್ದರು. ಸೊರಬ ಕ್ಷೇತ್ರದಲ್ಲಿ ಎಸ್. ಬಂಗಾರಪ್ಪ ಇದೇ ಕೆಲಸ ಮಾಡಿದ್ದರು.
ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ರೈತರ ಈ ಸಮಸ್ಯೆಯನ್ನೇ ಮುಂದಿಟ್ಟು ಪ್ರತಿಭಟನೆ, ಪಾದಯಾತ್ರೆ ನಡೆಸಿದ್ದರು. ಇತ್ತೀಚಿನ ದಿನಗಳಲ್ಲಿ ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಅವರು ಇದೇ ವಿಷಯವನ್ನು ಮುಂದಿಟ್ಟುಕೊಂಡು ಸೊರಬದ ಕೆರೆಹಳ್ಳಿಯಿಂದ ಶಿವಮೊಗ್ಗದ ವರೆಗೆ ಪಾತ್ರ ನಡೆಸಿದ್ದರು.
ಅರಣ್ಯ ಹಕ್ಕು: ಅರಣ್ಯ ಹಕ್ಕು ಕಾಯ್ದೆಯ ಬಗ್ಗೆ ಜಿಲ್ಲೆಯ ಜನರಲ್ಲಿ ಜಾಗೃತಿ ಮೂಡಲು ಕಾರಣವಾದವರು ಕಾಗೋಡು ತಿಮ್ಮಪ್ಪ. ಪದೇ ಪದೇ ಈ ವಿಷಯವನ್ನು ವೇದಿಕೆಗಳಲ್ಲಿ ಪ್ರಸ್ತಾಪಿಸಿ, ಜಿಲ್ಲಾಡಳಿತಕ್ಕೆ ಮನವಿ ನೀಡಿದರು. ಜಿಲ್ಲಾಡಳಿತ ಕಾನೂನು ಅನುಷ್ಠಾನದಲ್ಲಿ ಲೋಪವೆಸಗಿದಾಗ ತರಾಟೆಗೆ ತೆಗೆದುಕೊಂಡರು. ಈಗ ಬಗರ್ಹುಕುಂ ರೈತರ ಸಮಾವೇಶ ನಡೆಯುತ್ತಿದೆ. ಜತೆಗೆ ಇಂಡೀಕರಣ, ವಿವಿಧ ಯೋಜನೆಗಳಿಗೆ ಭೂಮಿ ನೀಡುವ ವಿಷಯಗಳೂ ಚರ್ಚೆಗೆ ಬರಲಿವೆ. ಸ್ವತ- ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಅವರು ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಜಿಲ್ಲೆಗೆ ಬರಲಿದ್ದು, ಅವರ ಹೇಳಿಕೆಗೆ ಕಾಯುವಂತಾಗಿದೆ.
ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಜೆಡಿಎಸ್ ಶಾಸಕರಿಗೆ ಅಧ್ಯಕ್ಷಸ್ಥಾನ ಬೇಕಂತೆ
ಶಿಷ್ಟಾಚಾರದ ಮಾತನಾಡಿದ ಶಾಸಕಿ ಶಾರದಾ ಪೂರ್ಯಾನಾಯ್ಕ
ಶಿವಮೊಗ್ಗ: ಆಯನೂರಿನ ಸರ್ಕಾರಿ ಯೋಜನೆ ಅನುಷ್ಠಾನ ವಿಚಾರದಲ್ಲಿ ಹಾಸ್ಯಾಸ್ಪದ ಹೇಳಿಕೆ ನೀಡಿದ್ದ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ ಮತ್ತೊಮ್ಮೆ ಮುಖಭಂಗ ಅನುಭವಿಸಿದ್ದಾರೆ.
ಇದೇ ನ.11ರಂದು ಸರ್ಕಾರವು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಗರ್ಹುಕುಂ ಸಾಗುವಳಿದಾರರ ಹಾಗೂ ಕೃಷಿ ಕಾರ್ಮಿಕರ ಸಮಾವೇಶ ಆಯೋಜಿಸಲಾಗಿದ್ದು, ಇಲ್ಲಿ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ್ ಶನಿವಾರ ಆರೋಪಿಸಿದ್ದರು. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೊಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಸಮಿತಿಯು, ಈ ಸಮಾವೇಶವನ್ನು ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದು ಎಂಬುದನ್ನು ಶಾಸಕರು ಅರ್ಥಮಾಡಿಕೊಂಡು ಮಾತನಾಡಲಿ ವ್ಯಂಗ್ಯವಾಡಿದ್ದಾರೆ.
ಸರ್ಕಾರಿ ಕಾರ್ಯಕ್ರಮವಲ್ಲ: ಪತ್ರಿಕಾ ಹೇಳಿಕೆ ನೀಡಿರುವ ಹೊಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ. ಮಲ್ಲಯ್ಯ, ನವೆಂಬರ್ 11ರಂದು ಕುಂಸಿಯಲ್ಲಿ ನಡೆಯುವ ಬಗರ್ಹುಕುಂ ಸಾಗುವಳಿದಾರರ ಮತ್ತು ಕೃಷಿ ಕಾರ್ಮಿಕರ ಸಮಾವೇಶವನ್ನು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷವು ಆಯೋಜಿಸಿದೆ. ಈ ಸಮಾವೇಶವು ಯಾವುದೇ ಸರ್ಕಾರಿ ಕಾರ್ಯಕ್ರಮವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದು ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷವು ಆಯೋಜನೆ ಮಾಡಿರುವ ಕಾರ್ಯಕ್ರಮ. ಇಲ್ಲಿ ಯಾವುದೇ ಶಿಷ್ಟಾಚಾರದ ಉಲ್ಲಂಘನೆಯಾಗಿರುವುದಿಲ್ಲ. ಇದು ಪರಿಪೂರ್ಣ ಬಗರ್ಹುಕುಂ ಸಾಗುವಳಿದಾರರ- ಕೃಷಿ ಕಾರ್ಮಿಕರ ಸಮಾವೇಶ. ಶಿಷ್ಟಾಚಾರದ ಪರಿಜ್ಞಾನವಿಲ್ಲದ ಶಾಸಕರು ಆಯೋಜಕರ ಮೇಲೆ ಹೆಣ್ಣು ಮಗಳೆಂದು ಕಡೆಗಣಿಸಿದ್ದಾರೆಂದು ವೃಥಾ ಆಪಾದಿಸಿ ಹೇಳಿರುವುದು ಹಾಸ್ಯಾಸ್ಪದ ಮತ್ತು ದುರದೃಷ್ಟಕರ ಎಂದು ಹನುಮಂತಪ್ಪ ತಿಳಿಸಿದ್ದಾರೆ.
ಶಾಸಕರು ಇಂತಹ ಕ್ಷುಲ್ಲಕ ಹೇಳಿಕೆ ಕೊಡುವುದನ್ನು ಬಿಟ್ಟು ಕ್ಷೇತ್ರದಲ್ಲಿ ಸಮಸ್ಯೆಗಳಿಗೆ ಸ್ಪಂದಿಸಲಿ. ಜನರ ಕಷ್ಟಗಳನ್ನು ನಿವಾರಿಸಲಿ, ನಾವು ಸಹಕರಿಸುತ್ತೇವೆಂದು ಹೇಳಿದ್ದಾರೆ.
ಶಾಸಕರು ಹೇಳಿದ್ದೇನು? ಶನಿವಾರ ಸುದ್ದಿಗೋಷ್ಠಿ ನಡೆಸಿದ್ದ ಶಾಸಕಿ ಶಾರದಾ ಪೂರ್ಯಾನಾಯ್ಕ, ವಾಸ್ತವವಾಗಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ತಮ್ಮನ್ನು ಕಾರ್ಯಕ್ರಮದ ಅಧ್ಯಕ್ಷರನ್ನಾಗಿ ಮಾಡಬೇಕಿತ್ತು. ಆದರೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿ ಮಾಡಲಾಗುತ್ತಿದೆ. ಈ ಬಗ್ಗೆ ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡನೆ ಮಾಡುತ್ತೇನೆ ಎಂದು ಎಚ್ಚರಿಸಿದ್ದರು.
ಸಂವಿಧಾನಾತ್ಮಕವಾಗಿ ಅರಣ್ಯ ಹಾಗೂ ಕಂದಾಯ ಇಲಾಖೆ ನೇತೃತ್ವದಲ್ಲಿ ಮಾತ್ರ ಬಗರ್ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬಹುದು. ಆದರೆ ಕಾಂಗ್ರೆಸ್ ಪಕ್ಷ ಆಡಳಿತಾತ್ಮಕ ವಿಷಯದಲ್ಲಿ ಮೂಗು ತೂರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕುಂಸಿಯಲ್ಲಿ ಆಯೋಜಿಸಿರುವ ಸರ್ಕಾರಿ ಕಾರ್ಯಕ್ರಮಕ್ಕೆ ತಾವು ಹೆಣ್ಣು ಎಂಬ ಕಾರಣಕ್ಕೆ ಆಮಂತ್ರಣವನ್ನು ಸರ್ಕಾರ ನೀಡದಿದ್ದರೆ ಹೆಣ್ಣಿನ ಧ್ವನಿಯ ಶಕ್ತಿಯನ್ನು ತೋರಿಸುತ್ತೇನೆ ಎಂದು ಅವರು ಸವಾಲೆಸೆದಿದ್ದರು.
- ಹೊನ್ನಾಳಿ ಚಂದ್ರಶೇಖರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

