ನಕಲಿ ದಾಖಲೆ ಸೃಷ್ಟಿಸಿ ಆಶ್ರಯ ನಿವೇಶನ ಮಾರಾಟ: ಆರೋಪ
ಕ.ಪ್ರ. ವಾರ್ತೆ, ಸಾಗರ, ನ.15
ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ಆಶ್ರಯ ನಿವೇಶನ ಹಂಚಿಕೆ ನಂತರ ವಾರಸುದಾರರಿಲ್ಲದ ಖಾಲಿ ನಿವೇಶನಗಳನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿರುವ ಹಾಗೂ ಸ್ವಾಧೀನದಲ್ಲಿರಿಸಿಕೊಂಡಿರುವ ಕಾಂಗ್ರೆಸ್ ನಗರಸಭೆ ಸದಸ್ಯರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಹಾಗೂ ಹಗರಣ ಕುರಿತು ಪೂರ್ಣ ತನಿಖೆ ನಡೆಸಬೇಕು ಎಂದು ಬಿಜೆಪಿ ನಗರ ಘಟಕ ಒತ್ತಾಯಿಸಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಹಾಗೂ ನಗರಸಭೆ ಸದಸ್ಯ ಸಂತೋಷ್ ಶೇಟ್, 1992ರಲ್ಲಿ ಅಂದಿನ ಪುರಸಭೆ ವತಿಯಿಂದ ವಿವಿಧ ಬಡಾವಣೆಗಳಲ್ಲಿ ನಿವೇಶನ ರಹಿತರಿಗೆ ಆಶ್ರಯ ನಿವೇಶನವನ್ನು ಹಂಚಿಕೆ ಮಾಡಿದೆ. ಆ ಸಂದರ್ಭದಲ್ಲಿ ಹಂಚಿಕೆ ಮಾಡಿದ ಅನೇಕ ನಿವೇಶನಗಳನ್ನು ಫಲಾನುಭವಿಗಳು ಆರ್ಥಿಕ ಮುಗ್ಗಟ್ಟು, ಬೇರೆ ಬೇರೆ ಕಾರಣಗಳಿಂದ ತಮ್ಮ ಸ್ವಾಧೀನಕ್ಕೆ ಪಡೆದುಕೊಂಡಿಲ್ಲ. ಇಂತಹ ವಾರಸುದಾರರಿಲ್ಲದ, ಮನೆ ನಿರ್ಮಾಣ ಮಾಡದ ಖಾಲಿ ನಿವೇಶನಗಳನ್ನು ಗುರುತಿಸಿ, ಅಂತಹ ನಿವೇಶನಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಅದನ್ನು ಬೇರೆಯವರಿಗೆ ಮಾರಾಟ ಮಾಡುವ ಆಶ್ರಯ ರಿಯಲ್ ಎಸ್ಟೇಟ್ ಮಾಫಿಯಾ ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿದೆ ಎಂದು ದೂರಿದರು.
ಖಾತೆ ಮಾಡಿಸಿಕೊಳ್ಳುವ ಪ್ರಯತ್ನ: ಭೀಮನೇರಿ ಗ್ರಾಮದ ಸರ್ವೆ ನಂ. 27ರ ಆಶ್ರಯ ಬಡಾವಣೆಯ 68, 69, 107, 207, 208, 35, 541 ಸಂಖ್ಯೆಯ ನಿವೇಶನವನ್ನು ನಗರಸಭೆಯ ಕಾಂಗ್ರೆಸ್ ಸದಸ್ಯರಾದ ಗಾಂಧಿನಗರ ಭಾಗದ ಎನ್.ಶ್ರೀನಾಥ್ ಹಾಗೂ ಶಿವಪ್ಪನಾಯಕ ನಗರ ಭಾಗದ ಗಣಾಧೀಶ್ ಇನ್ನಿತರರು ಅಕ್ರಮ ಖಾತೆ ಮಾಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.
ಈ ಎಲ್ಲ ನಿವೇಶನಗಳಿಗೆ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ನಿವೇಶನ ಮಂಜೂರಾಗಿರುವ ಹೆಸರನ್ನೇ ಹೊಂದಿರುವವರನ್ನು ಕರೆತಂದು ಇವರೇ ನಿವೇಶನದ ಮೂಲ ಫಲಾನುಭವಿಗಳು ಎಂದು ಅಧಿಕಾರಿಗಳ ಮುಂದೆ ನಿಲ್ಲಿಸಿ, ತಮ್ಮ ಸ್ಥಾನದ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ತಕರಾರು ಮಾಡುವ ಅಧಿಕಾರಿಗಳು ಹಾಗೂ ನೌಕರರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಹಲವಾರು ಅನುಮಾನ: ಈ ನಿವೇಶನವನ್ನು ಯಾವುದೇ ಕಾರಣಕ್ಕೂ ಖಾತೆ ಮಾಡಿಕೊಡಬಾರದು ಎಂದು ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷ ತಾರಾಮೂರ್ತಿ ಎಂಬುವವರು ಆಗಸ್ಟ್ 7 ರಂದು ಕಾಂಗ್ರೆಸ್ ಪಕ್ಷದ ಶಿರೋನಾಮೆಯಡಿ ಮಾಡಿಕೊಂಡಿರುವ ತಮ್ಮ ಲೆಟರ್ ಹೆಡ್ನಲ್ಲಿ ನಗರಸಭೆಗೆ ತಕರಾರು ಸಲ್ಲಿಸಿದ್ದಾರೆ. ಅವರೇ ಅ.31ರಂದು ಖಾತೆ ಮಾಡಿಕೊಡಲು ತಮ್ಮದೇನು ತಕರಾರು ಇಲ್ಲ ಎಂದು ಮರು ಅರ್ಜಿ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ತಿಳಿಸಿದರು.
ವ್ಯಂಗ್ಯ: ಕ್ಷೇತ್ರದ ಶಾಸಕರು ಹಾಗೂ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರ ಜೊತೆ ಸದಾ ತಿರುಗಾಡುವ ನಗರಸಭಾ ಸದಸ್ಯರೇ ಇಂತಹ ಹಗರಣಗಳಲ್ಲಿ ಭಾಗಿಯಾಗಿರುವುದು ಕಾಂಗ್ರೆಸ್ ಬಡವರ ಬಗ್ಗೆ ಹೊಂದಿರುವ ಕಾಳಜಿಗೆ ಸಾಕ್ಷಿಯಾಗಿದೆ. ಶಾಸಕರು ಇಂತಹವರ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು. ಹಗರಣದಲ್ಲಿ ಭಾಗಿಯಾಗಿರುವ ನಗರಸಭೆ ಸದಸ್ಯರಾದ ಜಿ.ಕೆ. ಭೈರಪ್ಪ, ಎನ್. ಶ್ರೀನಾಥ್ ಹಾಗೂ ಗಣಾಧೀಶ್ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಬೇಕು. ಇಲ್ಲವಾದರೆ ಬಿಜೆಪಿ ಕಾನೂನಾತ್ಮಕ ಹಾಗೂ ಜನಾಂದೋಲನ ರೂಪಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಚೇತನರಾಜ್, ನಗರ ಘಟಕದ ಅಧ್ಯಕ್ಷ ಸತೀಶಬಾಬು, ಪ್ರಧಾನ ಕಾರ್ಯದರ್ಶಿ ರವೀಶ್, ಪ್ರಮುಖರಾದ ರಾಜು ಬಿ. ಮಡಿವಾಳ, ಕಸ್ತೂರಿ ನಾಗರಾಜ್, ಸುನೀಲ್ ಫರ್ನಾಂಡಿಸ್, ಶ್ರೀನಿವಾಸ್, ಅರವಿಂದ್, ನಾಗರತ್ನ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

