ಶಿವಮೊಗ್ಗ

ಮಕ್ಕಳಿಂದ ವೈಜ್ಞಾನಿಕ ವಸ್ತುಪ್ರದರ್ಶನ

Published On :

ಶಿವಮೊಗ್ಗ: ಇಲ್ಲಿನ ಸಾಂದೀಪನಿ ಶಾಲೆಯ ಅಂಗಳದಲ್ಲಿ ಶುಕ್ರವಾರ ವೈಜ್ಞಾನಿಕ ವಸ್ತುಪ್ರದರ್ಶನ, ಮಂಗಳನಿಂದ ನಳಂದದ ಅಂಗಳದವರೆಗೂ ಎಲ್ಲ ಸಂಗತಿಗಳು ಅವತರಿಸಿತ್ತು.
ಮಂಗಳಯಾನ ಏಕೆ, ಏನು ಹೇಗೆ ಎನ್ನುವ ಕೌತುಕಕ್ಕೆ ಉತ್ತರ ನೀಡುತ್ತಿದ್ದ ವಿದ್ಯಾರ್ಥಿಗಳ ಮಾತಿನ ಮೋಡಿ ಒಮ್ಮೆ ಅವರು ವಿದ್ಯಾರ್ಥಿಗಳೇ, ವಿಜ್ಞಾನಿಗಳೇ ಎಂಬ ಅನುಮಾನ ಬರುವಷ್ಟು ನಿಖರ ಮಾಹಿತಿ ಅಲ್ಲಿ ಹೊರಸೂಸುತ್ತಿತ್ತು. ಅಷ್ಟೇ ಅಲ್ಲ, ವಿದ್ಯಾರ್ಥಿಗಳು ಭಾರತದ ಮೊದಲ ವಿಶ್ವವಿದ್ಯಾನಿಲಯ ನಳಂದದ ಮರುನಿರ್ಮಾಣವನ್ನೇ ಮಾಡಿ ತೋರಿಸಿದ್ದರು. ಹೀಗೆ ಅನೇಕ ಝಲಕ್ಗಳನ್ನು ಹೊಂದಿತ್ತು ಆ ವಸ್ತುಪ್ರದರ್ಶನ.
200ಕ್ಕೂ ಹೆಚ್ಚು ಮಾದರಿ: ಸುಮಾರು 200ಕ್ಕೂ ಹೆಚ್ಚು ಮಾದರಿಗಳು, 400 ವಿದ್ಯಾರ್ಥಿಗಳು ಇಡೀ ದಿನ ತಮ್ಮ ತಮ್ಮ ತಯಾರಿಕೆಯ ಮಾದರಿ ಪ್ರಯೋಗಗಳನ್ನು ವಿವರಿಸಲು ದಣಿವರಿಯದೆ ಕಾದು ನಿಂತಿದ್ದರು.
ಪ್ರತಿ ವರ್ಷ ಮಕ್ಕಳ ದಿನಾಚರಣೆ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ಶಾಲೆ ವಿದ್ಯಾರ್ಥಿಗಳು ತಮಗೆ ನಿಗದಿಪಡಿಸಿದ ವಿಜ್ಞಾನ, ತಂತ್ರಜ್ಞಾನದ ಮಾದರಿಗಳನ್ನು ತಾವೇ ಸಿದ್ಧಪಡಿಸಿ, ಅದರ ವಿವರ ಕಲೆಹಾಕಿ, ಮಾದರಿಯ ಸಹಿತ ವಿವರಣೆ ನೀಡುತ್ತಾರೆ. ಹಾಗೆ ಸಿದ್ಧವಾದ ನೂರಾರು ಮಾದರಿಗಳಲ್ಲಿ ಅವರ ಸ್ವಂತಿಕೆಯ ಪ್ರಜ್ಞೆ ಎದ್ದು ಕಾಣುತ್ತಿತ್ತು.
ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿನ ವೈಜ್ಞಾನಿಕ ಮನೋಭಾವದ ಅನ್ವೇಷಣೆ ಈ ಮಾದರಿಯ ಪ್ರಯೋಗದ ಮೂಲಕ ವ್ಯಕ್ತವಾಯಿತು. ವೈಜ್ಞಾನಿಕ ಮೇಳ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಹಾಲನಾಯ್ಕ ಮಾತನಾಡಿ, ಏನಾದರೂ ಆಗು ಮೊದಲು ಮಾನವನಾಗು ಎಂಬ ಕವಿವಾಣಿಯ ಮೂಲಕ ವಿದ್ಯಾರ್ಥಿಗಳ ಮನ ಹೊಕ್ಕಲು ಪ್ರಯತ್ನ ಮಾಡಿದರು.
ಅಂಕಗಳಿಕೆಯೇ ವಿದ್ಯಾರ್ಥಿ ಜೀವನದ ಅಂತಿಮ ಸಾಧನೆಯಲ್ಲ ಬದಲಾಗಿ, ಮೊದಲು ಮನುಷ್ಯರಾಗುವ ಮೂಲಕ ಈ ದೇಶದ ಪ್ರಜೆಯಾಗುವತ್ತ ಗಮನ ನೀಡಬೇಕು ಎಂದು ಹೇಳಿದರು.
ನಗರಸಭೆ ಮಾಜಿ ಸದಸ್ಯ ಶ್ಯಾಮಸುಂದರ್, ಪತ್ರಕರ್ತ ಜಗದೀಶ ಸಂಪಳ್ಳಿ, ಶಾಲೆಯ ನಿರ್ದೇಶಕ ರಾಜಶೇಖರ್, ಅಧ್ಯಕ್ಷರು ಹಾಗೂ ಪ್ರಾಂಶುಪಾಲ ಎಸ್.ಟಿ. ಶ್ರೀನಿವಾಸ್ ವರ್ಮ, ಕಾರ್ಯದರ್ಶಿ ವಿ. ಲೋಕೆಶ್ ಹಾಗೂ ಶಿಕ್ಷಕ ವರ್ಗ ಹಾಜರಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.