ಶಿವಮೊಗ್ಗ

ಶೌಚಾಲಯಕ್ಕೂ ಪ್ರಾಮುಖ್ಯ ಕೊಡಿ: ಕಾಗೋಡು

Published On :

ಕ.ಪ್ರ.ವಾರ್ತೆ, ಸಾಗರ, ನ.17
ಉಳುವವನೇ ಹೊಲದೊಡೆಯ ಹಾಗೂ ಬಗರ್ಹುಕುಂ ಸಾಗುವಳಿ ಯೋಜನೆಗಳ ಮೂಲಕ ಪಡೆದ ಭೂಮಿಯನ್ನು ರೈತರು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡು, ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಕರೆ ನೀಡಿದರು.
ಸಾಗರ ತಾಲೂಕಿನ ಕೊರ್ಲಿಕೊಪ್ಪ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡ ಕೃಷಿ ವಿಚಾರ ಸಂಕಿರಣದಲ್ಲಿ ಅವರು, ರೈತರಿಗೆ ಧರ್ಮಸ್ಥಳ ಸಂಘದ ಮುಖಾಂತರ ಕಡಿಮೆ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡುವಂತಾಗಬೇಕು. ಸರ್ಕಾರ ಈಗಾಗಲೇ ಬಡ್ಡಿರಹಿತ ಸಾಲ ನೀಡುತ್ತಿದ್ದು, ಕೃಷಿ ಅಧಿಕಾರಿಗಳು ಉತ್ತಮ ತಳಿಯ ಬೆಳೆಗಳನ್ನು ರೈತರಿಗೆ ಪರಿಚಯಿಸಿ ವೈಜ್ಞಾನಿಕ ಪದ್ಧತಿಯಲ್ಲಿ ಅಧಿಕ ಲಾಭ ಪಡೆಯುವ ಬಗ್ಗೆ ಮಾಹಿತಿ ನೀಡಬೇಕು. ಅಲ್ಲದೆ, ಭ್ರಷ್ಟ ಅಧಿಕಾರಿಗಳನ್ನು ಸಂದರ್ಭಕ್ಕೆ ತಕ್ಕಂತೆ ಶಿಕ್ಷಿಸಬೇಕು ಎಂದು ತಿಳಿಸಿದರು.
ಆಸಕ್ತಿ ವಹಿಸಿ: ಗ್ರಾಮೀಣ ಪ್ರದೇಶದಲ್ಲಿ ರೈತರು ತರಕಾರಿ, ಹಸು, ಕುರಿ, ಕೋಳಿ ಸಾಕಾಣಿಗೆ ಮುಂತಾದ ಉಪ ಕಸುಬುಗಳೊಂದಿಗೆ ಆದಾಯ ಹೆಚ್ಚಿಸಿಕೊಂಡು ಇರುವ ಭೂಮಿಯಲ್ಲಿ ಹೆಚ್ಚಿನ ಆದಾಯ ಪಡೆದುಕೊಳ್ಳಬೇಕು. ಗ್ರಾಮಗಳಲ್ಲಿ ದೇವಸ್ಥಾನಗಳಿಗೆ ನೀಡುವ ಪ್ರಾಮುಖ್ಯತೆಯಂತೆಯೇ ಶೌಚಾಲಯ ನಿರ್ಮಾಣದಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು. ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ಹತ್ತು ಸಾವಿರ ರುಪಾಯಿ ಸಹಾಯಧನ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಂಡು ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಸಮಿತಿ ರಚನೆಯಾಗಿಲ್ಲ: ಸಾಗರ ಹಾಗೂ ಹೊಸನಗರ ಹೊರತುಪಡಿಸಿ ರಾಜ್ಯದಲ್ಲಿ ಎಲ್ಲೂ ಬಗರ್ಹುಕುಂ ಸಮಿತಿ ರಚನೆಯಾಗಿಲ್ಲ. ಆದರೆ, ಹೊಸನಗರ ತಾಲೂಕಿನಲ್ಲಿ ಈಗಾಗಲೇ ಹಕ್ಕುಪತ್ರ ನೀಡಲಾಗಿದೆ. ಭೂಮಿಗಾಗಿ ಮಾಡಿದ ಹೋರಾಟದ ಫಲವನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ಹಳ್ಳಿಗಳಲ್ಲಿ ಹಲವು ಉದ್ಯೋಗಗಳಿಗೆ ಅವಕಾಶ ಇರುವುದಿಲ್ಲ.
ನಮ್ಮ ಸುತ್ತಲಿನ ವ್ಯವಸ್ಥೆಯಲ್ಲಿಯೇ ಸುಂದರ ಬದುಕನ್ನು ಕಂಡುಕೊಳ್ಳಬೇಕು. ಸಾವಯವ ಕೃಷಿಯಲ್ಲಿ ಹೈನುಗಾರಿಕೆಗೆ ಪ್ರಾಮುಖ್ಯ ನೀಡಿ ಕೃಷಿಯಿಂದ ಹೆಚ್ಚಿನ ಲಾಭ ಪಡೆಯಲು ಈ ವಿಚಾರ ಸಂಕಿರಣ ಸಹಕಾರಿಯಾಗಿ ಯುವಕರು ವಿದ್ಯಾವಂತರಾದರೂ ಕೃಷಿಯಿಂದ ವಿಮುಖರಾಗದಂತೆ ಕಾರ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಜಿಪಂ ಸದಸ್ಯೆ ಸುಮಂಗಲಾ, ಕೃಷಿಯೊಂದಿಗೆ ಕೃಷಿಯೇತರ ಉಪ ಕಸುಬುಗಳನ್ನು ಅಳವಡಿಸಿಕೊಂಡು ಸದೃಢ ಸ್ವಾವಲಂಬಿಗಳಾಗಬೇಕೆಂದು ಕರೆ ನೀಡಿದರು. ಧರ್ಮಸ್ಥಳ ಸಂಘದ ತಾಲೂಕು ಯೋಜನಾ ಅಧಿಕಾರಿ ಸುನಿತಾ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬರೂರು ಗ್ರಾಪಂ ಅಧ್ಯಕ್ಷ ಕೆ.ವಿ. ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ್ ಲಾವಿಗ್ಗೇರೆ, ಎಚ್.ಡಿ. ಮಂಜಪ್ಪ, ವೀರೇಶ ಗೌಡ ಉಪಸ್ಥಿತರಿದ್ದರು. ಪಿಸಿ ಕೆ.ಬಿ. ಗಣಪತಿ ಸ್ವಾಗತಿಸಿದರು. ಸುಧಾ ಪ್ರಾರ್ಥಿಸಿದರು. ನಾಗರಾಜ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.