ಇಂದಿನಿಂದ ರಂಗಾಯಣ ನಾಟಕೋತ್ಸವ
ಕ.ಪ್ರ.ವಾರ್ತೆ, ಶಿವಮೊಗ್ಗ, ನ. 24
ಮೈಸೂರಿನ ರಂಗಾಯಣ ನವೆಂಬರ್ 25ರಿಂದ 28ರ ವರೆಗೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ರಂಗಾಯಣ ನಾಟಕೋತ್ಸವ ಹಮ್ಮಿಕೊಂಡಿದೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮೈಸೂರು ರಂಗಾಯಣ ನಿರ್ದೇಶಕ ಎಚ್. ಜನಾರ್ದನ (ಜನ್ನಿ), ಒಂದೆಡೆ ಕೇಂದ್ರಿಕೃತವಾಗಿರುವ ರಂಗಾಯಣವನ್ನು ವಿಕೇಂದ್ರಿಕರಣಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ನಾಟಕೋತ್ಸವಗಳನ್ನು ಏರ್ಪಡಿಸಿದ್ದು, ನಾಲ್ಕು ದಿನಗಳು ವಿವಿಧ ಕಾದಂಬರಿಗಳಿಂದ ಆಯ್ದ ನಾಟಕಗಳನ್ನು ಪ್ರದರ್ಶಿಸಲಾಗುವುದು ಎಂದರು.
ನ.25ರಂದು ಸಂಜೆ 6.30ಕ್ಕೆ ಮೊದಲ ದಿನದ ನಾಟಕೋತ್ಸವವನ್ನು ರೈತ ಮುಖಂಡ ಕಡಿದಾಳ್ ಶಾಮಣ್ಣ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ. ಶ್ರೀಕಂಠ ಕೂಡಿಗೆ, 26ರಂದು ಮುಖ್ಯಅತಿಥಿಗಳಾಗಿ ಹಿರಿಯ ರಂಗಕರ್ಮಿ ಕಾಂತೇಶ್ ಕದರಮಂಡಲಗಿ, ಶಂಕರಮೂರ್ತಿ ಹಾಗೂ 27ರಂದು ಹಿರಿಯ ರಂಗಕರ್ಮಿ ದೇವೇಂದ್ರ ಬೆಳೆಯೂರು, ಹವ್ಯಾಸಿ ರಂಗತಂಡಗಳ ಒಕ್ಕೂಟದ ಅಧ್ಯಕ್ಷ ಪ್ರೊ. ಸಿ.ಎಸ್. ಗೌರಿಶಂಕರ್ ಪಾಲ್ಗೊಳ್ಳಲಿದ್ದು, 28ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ನಾಟಕಕಾರ ಹಾಗೂ ರಂಗನಿರ್ದೇಶಕ ಪ್ರಸನ್ನ, ಕುವೆಂಪು ವಿಶ್ವವಿದ್ಯಾನಿಲಯದ ಕುಲಸಚಿವೆ ಪ್ರೊ. ಮಲ್ಲಿಕಾ ಘಂಟಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ನಾಟಕಗಳು: ನ.25ರಂದು ವೈ.ಎಂ. ಪುಟ್ಟಣ್ಣಯ್ಯ ನಿರ್ದೇಶನದ ಬೆಳ್ಳಾವೆ ನರಹರಿಶಾಸ್ತ್ರಿ ವಿರಚಿತ ಸದಾರಮಾ ನಾಟಕಂ, ನ.26ರಂದು ಪ್ರಮೀಳ ಬೇಂಗ್ರೆ ನಿರ್ದೇಶನದ ಮರಾಠಿ ಮೂಲದ ಚಿರೇಬಂದೀವಾಡೆ, ನ.27ರಂದು ಸಿ. ಬಸವಲಿಂಗಯ್ಯ ನಿರ್ದೇಶನದ ರಾಷ್ಟ್ರಕವಿ ಕುವೆಂಪು ಅವರ ಶೂದ್ರತಪಸ್ವಿ ಹಾಗೂ ನ.28ರಂದು ಆರ್. ನಾಗೇಶ್ ನಿರ್ದೇಶನದ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಕೃಷ್ಣೇಗೌಡನ ಆನೆ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದರು.
ಅಪರೂಪದ ಅವಕಾಶ: ಜನರನ್ನು, ಯುವಕರನ್ನು ರಂಗಭೂಮಿ ಕಡೆಗೆ ಸೆಳೆಯುವ ಉದ್ದೇಶದಿಂದಲೇ ಮೈಸೂರು ರಂಗಾಯಣ ಇಂತಹ ಅಪರೂಪದ ನಾಟಕಗಳನ್ನು ಶಿವಮೊಗ್ಗಕ್ಕೆ ತಂದಿದೆ. ಪ್ರತಿ ನಾಟಕಗಳಿಗೆ 30 ಹಾಗೂ ವಿದ್ಯಾರ್ಥಿಗಳಿಗೆ 15 ಪ್ರದೇಶ ದರ ನಿಗದಿ ಮಾಡಲಾಗಿದ್ದು, ಶಿವಮೊಗ್ಗದ ಜನರಿಗೊಂದು ಇದೊಂದು ಅಪೂರ್ವ ಅವಕಾಶವಿದ್ದು ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ರಂಗಭೂಮಿಯನ್ನು ಪ್ರೋತ್ಸಾಹಿಸಬೇಕೆಂದು ಮೈಸೂರು ರಂಗಾಯಣದ ಜನ್ನಿ ಮನವಿ ಮಾಡಿದರು.
ರಂಗಾಯಣದ ಹಿರಿಯ 18 ಜನ ಕಲಾವಿದರು, 16 ಜನ ಕಿರಿಯ ಕಲಾವಿದರು ಹಾಗೂ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಒಂದು ವರ್ಷದ ಡಿಪ್ಲೋಮಾ ಕೋರ್ಸ್ ನಡೆಯುತ್ತಿದ್ದು, ರಂಗಶಿಕ್ಷಣ ಕೇಂದ್ರದಲ್ಲಿ ತರಬೇತಿ ತರಬೇತಿ ಪಡೆಯುತ್ತಿರುವ 17 ಕಲಾವಿದರು ಕೂಡ ನಾಟಕಗಳಲ್ಲಿ ಅಭಿನಯಿಸಲಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಶಿವಮೊಗ್ಗ ಹಾಗೂ ಧಾರವಾಡದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅರ್ಹ ಸಹಾಯಕ ನಿರ್ದೇಶಕರನ್ನು ನೇಮಕ ಮಾಡಲಾಗುವುದು. ಈ ನೇಮಕಾತಿಯಲ್ಲಿ ಯಾವುದೇ ಲಾಬಿಯಾಗಲಿ, ಒತ್ತಡದಿಂದಾಗಲಿ ಆಯ್ಕೆಮಾಡದೆ, ಪ್ರಾಮಾಣಿಕವಾಗಿ ನಿರ್ದೇಶಕರನ್ನು ನೇಮಕ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದ ಅವರು, ನಿರ್ದೇಶಕರ ಕ್ರಿಯಾಶೀಲತೆಗೆ ಅಡ್ಡಿ ಪಡಿಸುವಂತಹ ಕೆಲಸ ಯಾರಿಂದಲೂ ಆಗಬಾರದು ಎಂದರು.
ಸುದ್ದಿಗೋಷ್ಠಿಯಲ್ಲಿ ಮೈಸೂರು ರಂಗಾಯಣದ ಉಪ ನಿರ್ದೇಶಕ ಎಸ್.ಇ. ಭಾವಿಕಟ್ಟಿ, ಶಿವಮೊಗ್ಗ ರಂಗಾಯಣದ ಆಡಳಿತಾಧಿಕಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕುಮಾರ ಬೆಕ್ಕೇರಿ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

