ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಕಿಮ್ಮನೆ
ಕ.ಪ್ರ.ವಾರ್ತೆ, ಶಿವಮೊಗ್ಗ, ನ. 24
ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ನನ್ನಂತ ವ್ಯಕ್ತಿಗೆ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತೀರ್ಥಹಳ್ಳಿ ಶಾಸಕ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ರೋಟರಿ ಕ್ಲಬ್ ನಗರದ ಕಸ್ತೂರ ಬಾ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಮಾದರಿ ಯುವ ಸಂಸತ್ ಅಧಿವೇಶನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ನನಗೆ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವುದು ಇಷ್ಟವಿಲ್ಲ. ನನಗೆ ನೀಡಿದ ಖಾತೆಯನ್ನು ಸಮರ್ಪಕವಾಗಿ ನಿರ್ವಹಿಸುವುದಷ್ಟೇ ನನ್ನ ಮುಂದಿರುವ ಗುರಿ. ಸಚಿವರಿಗೆ ಅವರು ನಿರ್ವಹಿಸುವ ಖಾತೆಗಳ ಬಗ್ಗೆ ಆಳವಾದ ಅಧ್ಯಯನ ಇರಬೇಕು. ಅದನ್ನು ಬಿಟ್ಟು ಹಾರ- ತುರಾಯಿ ಹಾಕಿಸಿಕೊಂಡು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಪ್ರಯೋಜನವಿಲ್ಲ. ಶಾಸಕನಾದವನಿಗೆ ಆತ ಪ್ರತಿನಿಧಿಸುವ ಕ್ಷೇತ್ರದ ಸಂಪೂರ್ಣ ಪರಿಚಯ ಹಾಗೂ ಸಮಸ್ಯೆಗಳ ಅರಿವು ಇರಬೇಕು ಎಂದು ತಿಳಿಸಿದರು.
ಮುಂದಿನ ಬಾರಿ ಸ್ಪರ್ಧಿಸಲ್ಲ: ಶೇ.99ರಷ್ಟು ತಾವು ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ರಾಜಕೀಯ ಕ್ಷೇತ್ರದ ಬಗ್ಗೆಯೇ ತಮಗೆ ಆಸಕ್ತಿಯೇ ಇಲ್ಲವಾಗಿದೆ. ಪ್ರಸ್ತುತ ಸ್ಥಿತಿ ನೋಡಿದರೆ ರಾಜಕಾರಣ ತಮ್ಮಂತವರಿಗಲ್ಲ ಎಂದೆನಿಸುತ್ತದೆ ಎಂದು ಹೇಳಿದರು.
ಪ್ರಚಾರಕ್ಕಾಗಿ ಕೂಗಾಟ: ಶಾಸನ ಸಭೆಗಳಲ್ಲಿ ಪತ್ರಿಕೆಯವರಿರುವವರೆಗೂ ಹೆಚ್ಚು ಕೂಗಾಟ ಮಾಡಲಾಗುತ್ತದೆ. ಪತ್ರಕರ್ತರು ಹೋಗುತ್ತಿದ್ದಂತೆ ಎಲ್ಲವೂ ಶಾಂತವಾಗುತ್ತದೆ. ಫೋಟೋ, ಸುದ್ದಿಗಾಗಿ ತಮ್ಮ ಅರ್ಹತೆಗಿಂತ ಹೆಚ್ಚು ಪಾಂಡಿತ್ಯ ಪ್ರದರ್ಶನ ಮಾಡಲಾಗುತ್ತಿದೆ. ಅರ್ಹತೆಯಿಲ್ಲದಿದ್ದರೂ ಅರ್ಹತೆಯಿದೆಯೆಂದು ನಟನೆ ಮಾಡಲಾಗುತ್ತಿದೆ. ಪ್ರಚಾರಕ್ಕೆ ಒಗ್ಗಿಕೊಂಡಿರುವುದು ದೊಡ್ಡ ಸಾಮಾಜಿಕ ದುರಂತವಾಗಿದೆ ಎಂದು ವಿಷಾದಿಸಿದರು.
ಸದನದ ಪ್ರಾವಿತ್ರ್ಯತೆಗೆ ಕುತ್ತು: ಜನಪ್ರತಿನಿಧಿಗಳು ಹೆಚ್ಚೆಚ್ಚು ಅಧ್ಯಯನಶೀಲರಾಗಬೇಕು. ಪ್ರಸ್ತುತ ಸದನದ ಪ್ರಾವಿತ್ರ್ಯತೆ ಕುಂದುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿದೆ. ಇದಕ್ಕೆ ಜನಪ್ರತಿನಿಧಿಗಳು ಎಷ್ಟು ಕಾರಣಕರ್ತರಾಗಿದ್ದರೆಯೋ ಅಷ್ಟೇ ಜನರು ಕೂಡ ಕಾರಣಕರ್ತರಾಗಿದ್ದಾರೆ. ಸದನದ ಪ್ರಾವಿತ್ರ್ಯತೆ ಕುಂದುವಲ್ಲಿ ಜಂಟಿ ಸಹಭಾಗಿತ್ವವಿದೆ ಎಂದು ದೂರಿದರು.
ತಾವು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಇಲ್ಲಿಯವರೆಗೂ ಒಮ್ಮೆಯೂ ಅಧಿವೇಶನ ತಪ್ಪಿಸಿಲ್ಲ. ಸಮಯಕ್ಕೆ ಸರಿಯಾಗಿ ಅಧಿವೇಶನಕ್ಕೆ ಹಾಜರಾಗುತ್ತೇನೆ. ಮಾಹಿತಿಯಿಲ್ಲದೆ ಎಂದೂ ಅಧಿವೇಶನದಲ್ಲಿ ಮಾತನಾಡಲು ಹೋಗುವುದಿಲ್ಲ. ಈ ಹಿಂದೆ ನಡೆದ ಅಧಿವೇಶನದ ನಡಾವಳಿಯ ಪರಾಮರ್ಶೆ ಮಾಡುತ್ತೇನೆ ಎಂದು ತಿಳಿಸಿದರು.
ಭ್ರಷ್ಟ ನಾಯಕನನ್ನು ನಿಮ್ಮ ಆದರ್ಶ ನಾಯಕನಾಗಿ ಆಯ್ಕೆ ಮಾಡಿಕೊಳ್ಳಬೇಡಿ. ಗಾಂಧಿ, ಬುದ್ದ, ಬಸವ, ಕನಕದಾಸರನ್ನು ನಿಮ್ಮ ಆದರ್ಶ ವ್ಯಕ್ತಿಗಳನ್ನಾಗಿ ಮಾಡಿಕೊಂಡು ಜೀವನ ರೂಪಿಸಿಕೊಳ್ಳಿ ಎಂದು ಯುವಕ- ಯುವತಿಯರಿಗೆ ಕರೆ ನೀಡಿದ ಅವರು, ಶಾಸಕನಾದವನು ವರ್ಷದ ಮೂರು ತಿಂಗಳು ಗ್ರಂಥಾಲಯದಲ್ಲಿರಬೇಕು. ಹೆಚ್ಚೆಚ್ಚು ಅಧ್ಯಯನ ನಡೆಸಬೇಕು. ಅದು ಬಿಟ್ಟು ಬರೀ ಹಾರ- ತುರಾಯಿ, ಶಾಲು ಹೊದಿಸಿಕೊಳ್ಳುವುದರಲ್ಲಿಯೇ ಸಮಯ ಹಾಳು ಮಾಡಬಾರದು ಎಂದು ಸಚಿವರ ಕಿಮ್ಮನೆ ರತ್ನಾಕರ್ ನೂತನ ಶಾಸಕರಿಗೆ ಕಿವಿಮಾತು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

