ಕನ್ನಡ ಉಳಿವಿಗೆ ಪ್ರತಿಯೊಬ್ಬರ ಶ್ರಮ ಅಗತ್ಯ
ಕ.ಪ್ರ.ವಾರ್ತೆ, ಶಿವಮೊಗ್ಗ, ನ. 27
ನೇಸರ ಗ್ರಾಮೀಣ ಪ್ರಗತಿ ಕೇಂದ್ರ ಹಾಗೂ ಕವಿತಾ ಚಿತ್ರಾಲಯ ಆಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಬುಧವಾರ ಕನ್ನಡ ರಾಜ್ಯೋತ್ಸವ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಂಚರಂಗಿ ಶಿವರಾಜ್, ನಾಡಿನ ಪ್ರತಿಯೊಬ್ಬರ ಶ್ರಮದಿಂದ ಕನ್ನಡ ಉಳಿದು, ಬೆಳೆಯಬೇಕಿದೆ. ಕನ್ನಡ ಜನ ಕನ್ನಡ ಚಲನಚಿತ್ರ, ಧಾರವಾಹಿ ನೋಡಿ ಕನ್ನಡ ಭಾಷೆಯನ್ನು, ಕಲಾವಿದರನ್ನು ಉಳಿಸಿ, ಬೆಳೆಸಬೇಕು ಎಂದು ಮನವಿ ಮಾಡಿದರು.
ಪ್ರತಿಯೊಬ್ಬರ ಹೊಣೆ; ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಉಳಿಸುವ ಹೊಣೆ ಕೇವಲ ಕನ್ನಡಪರ ಸಂಘಟನೆಗಳದ್ದಲ್ಲ. ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪರಿಸರವಾದಿ ಪರಿಸರ ಶಿವರಾಂ, ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿ, ವೇದಿಕೆಯಲ್ಲಿ ಕನ್ನಡ ಕುರಿತು ಭಾಷಣ ಮಾಡಿದರೆ ಅದು ಆತ್ಮ ವಂಚನೆಯಾಗುತ್ತದೆ. ನಾವು ಮಾಡುವುದಕ್ಕೂ ಕೃತಿಯಲ್ಲಿರುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಈ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದರು.
ಕನ್ನಡವನ್ನು ಓದುವುದು, ಬರೆಯುವುದನ್ನು ನಿರಂತರವಾಗಿ ಮಾಡುವ ಮೂಲಕ ಭಾಷೆ ಬೆಳೆಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜಕೀಯಕ್ಕಾಗಿ ಬೆಂಬಲ; ಹಿರಿಯ ಪತ್ರಕರ್ತ ಎನ್. ಮಂಜುನಾಥ್ ಮಾತನಾಡಿ, ಬೆಳಗಾವಿಯಲ್ಲಿರುವ ಎಲ್ಲಾ ಮರಾಠಿಗರು ಕನ್ನಡ ವಿರೋಧಿಗಳಲ್ಲ. ಕೆಲವರು ಮಾತ್ರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮರಾಠಿ ಭಾಷೆಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲವಾದರೆ ಮರಾಠಿಗರೇ ಹೆಚ್ಚಿರುವ ಕ್ಷೇತ್ರಗಳಲ್ಲಿ ಸೋಲನುಭವಿಸಬೇಕಾಗುತ್ತದೆ. ಆದರಿಂದ ಕೆಲ ರಾಜಕೀಯ ಮುಖಂಡರು ಕನ್ನಡ ಭಾಷೆಯನ್ನು ಕಡೆಗಣಿಸಿದ್ದಾರೆ ಎಂದು ತಿಳಿಸಿದರು.
ನಗರಸಭೆ ಉಪಾಧ್ಯಕ್ಷೆ ರೇಖಾ ಚಂದ್ರಶೇಖರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಯಿತು. ನಾಟಕ ಮತ್ತು ಚಿತ್ರ ಕಲಾವಿದ ಎಸ್. ಆರ್. ಗಿರೀಶ್ (ಚಂದ್ರಗಿರಿ), ದೇಶಭಕ್ತರ ಭಾವಚಿತ್ರ ಸಂಗ್ರಹಕಾರ ಕೆ. ಕುಮಾರ್, ಪರಿಸರವಾದಿ ಪರಿಸರ ಶಿವರಾಂ (ಭದ್ರಾವತಿ), ಧ್ವನಿವರ್ಧಕ ಪ್ರಚಾರಕ ಬಿ. ಹನುಮಂತಪ್ಪ, ಕೊಡಗು ಜಿಲ್ಲೆಯ ಆಹಾರ ಸಂರಕ್ಷಣಾ ಜಾಗೃತಿ ಸಮಿತಿಯ ಎನ್.ಕೆ. ಮೋಹನ್ ಕುಮಾರ್, ಸಮಾಜ ಸೇವಕ ರಮೇಶ್, ನಾಟಿ ವೈದ್ಯ ಶಾಂತವೀರಪ್ಪಗೌಡ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪಂಚರಂಗಿ ಪೋಂ ಪೋಂ ಧಾರವಾಹಿ ತಂಡದ ಕಲಾವಿದರೊಂದಿಗೆ ಸಂವಾದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನೇಸರ ಸಂಸ್ಥೆಯ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

