ಶೃಂಗ ಸಭೆ ವಿರೋಧಿಸಿ ಮಂಗಳೂರು ಬಂದರು ಮುತ್ತಿಗೆ: ಕೆ.ಟಿ. ಗಂಗಾಧರ್
ಕ.ಪ್ರ.ವಾರ್ತೆ, ಶಿವಮೊಗ್ಗ, ನ.28
ಸರ್ಕಾರದ ಮುಕ್ತ ವಾಣಿಜ್ಯ ನೀತಿ ಹಾಗೂ ಡಬ್ಲ್ಯುಟಿಓ ಶೃಂಗ ಸಭೆಯನ್ನು ವಿರೋಧಿಸಿ ದಕ್ಷಿಣ ರಾಜ್ಯ ರೈತ ಸಂಘಟನೆಗಳು ಡಿಸೆಂಬರ್ 3ರಂದು ಮಂಗಳೂರು ಬಂದರು ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದೊಳಗೆ ನುಗ್ಗಿ ಬರುತ್ತಿರುವ ವಿದೇಶಿ ಕೃಷಿ ಉತ್ಪನ್ನಗಳಿಂದ ರೈತರು ಬೆಳೆದಿರುವ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರಕದೇ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಹೋರಾಟ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಡಿಸೆಂಬರ್ 3ರಂದು ವಿಶ್ವ ವಾಣಿಜ್ಯ ಸಂಸ್ಥೆಯ 9ನೇ ಶೃಂಗಸಭೆ ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಆರಂಭವಾಗುತ್ತಿದ್ದು, ದೇಶದ ರೈತರ ಭವಿಷ್ಯದ ಕರಾಳ ದಿನಗಳು ಈ ಸಭೆಯಲ್ಲಿ ತೀರ್ಮಾನವಾಗಲಿದೆ. ಹೀಗಾಗಿ ಸಭೆಯನ್ನು ವಿರೋಧಿಸಿ ರೈತ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ದೇಶಕ್ಕೆ ಅನ್ನ ನೀಡುತ್ತಿದ್ದ ರೈತರಿಗೆ ಈ ದುಸ್ಥಿತಿ ಬರಲು ಅಮೆರಿಕಾ ಮತ್ತು ಯೂರೋಪ್ ಬಂಡವಾಳ ಶಾಹಿ ದೇಶಗಳು ಕೇವಲ ತಮ್ಮ ಉತ್ಪನ್ನಗಳಿಗೆ ಬೇಕಾದ ಮಾರುಕಟ್ಟೆಯ ವಿಸ್ತರಣೆಗೋಸ್ಕರ ಹುಟ್ಟುಹಾಕಲಾದ ವಿಶ್ವ ವಾಣಿಜ್ಯ ಒಪ್ಪಂದಕ್ಕೆ ಭಾರತ ಒಪ್ಪಿ ಸಹಿ ಹಾಕಿದ್ದೇ ಮೂಲ ಕಾರಣವಾಗಿದೆ ಎಂದು ಟೀಕಿಸಿದರು.
ಸರ್ಕಾರದ ಕ್ರಮಕ್ಕೆ ಟೀಕೆ: ಸಕ್ಕರೆ ಕಾರ್ಖಾನೆ ಮಾಲೀಕರು ಸರ್ಕಾರವನ್ನು ನಿಯಂತ್ರಿಸುವಂತಾಗಿದೆ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರಪ್ಪ ಆರೋಪಿಸಿದರು.
ರಾಜ್ಯ ಸರ್ಕಾರ ಕಬ್ಬಿಗೆ ಬೆಂಬಲ ಬೆಲೆ ನೀಡದೆ ಸರ್ಕಾರ ರೈತರ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ, ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹೇಳಿದಂತೆ ಸರ್ಕಾರ ಕೇಳುತ್ತಿದೆ ಎಂದು ಟೀಕಿಸಿದರು.
300 ಕೋಟಿ ಬಾಕಿ: ಸಕ್ಕರೆ ಕಾರ್ಖಾನೆಗಳು ಈಗಾಗಲೇ 300 ಕೋಟಿಯಷ್ಟು ಹಳೆಯ ಬಾಕಿಯನ್ನು ರೈತರಿಗೆ ನೀಡಬೇಕಾಗಿದೆ. ಇದನ್ನು ಕೊಡಿಸಲು ಕೂಡ ಸರ್ಕಾರದ ಕೈಯಲ್ಲಿ ಸಾಧ್ಯವಾಗುತ್ತಿಲ್ಲ. ಬೆಳಗಾವಿಯಲ್ಲಿ ವಿಧಾನಸೌಧದ ಎದುರು ಸಾವನ್ನಪ್ಪಿದ ರೈತ ವಿಠಲ ಅರಭಾವಿ ಕೇವಲ 30 ಗುಂಟೆ ಜಮೀನು ಹೊಂದಿದ್ದು, ಬೇರೆಯವರ 4 ಎಕರೆ ಜಮೀನನ್ನು ಗುತ್ತಿಗೆ ಪಡೆದು ಕಬ್ಬು ಬೆಳೆದಿದ್ದ. ಆದರೆ, ಆತನಿಗೆ ಸಕ್ಕರೆ ಕಾರ್ಖಾನೆಗಳು ಕಳೆದ ಸಾಲಿನ ಹಣವನ್ನೇ ನೀಡಿರಲಿಲ್ಲ. ಅದರಿಂದಾಗಿ ಸಾಲದ ಹೊರೆಯನ್ನು ಹೊರುವಂತಹ ಸ್ಥಿತಿ ಎದುರಾಗಿತ್ತು ಎಂದು ತಿಳಿಸಿದರು.
ಅಲ್ಲದೆ ಸಕ್ಕರೆ ಕಾರ್ಖಾನೆ ಮಾಲೀಕರಾಗಿರುವ ಮುರುಗೇಶ್ ನಿರಾಣಿ ತಮ್ಮ ಕಾರ್ಖಾನೆ ಕಡೆಯಿಂದ ಯಾವುದೇ ಬಾಕಿ ಉಳಿಸಿಕೊಂಡಿರಲಿಲ್ಲ ಎಂದು ಹೇಳಿದ್ದಾರೆ. ಆದರೆ, ಇನ್ನುಳಿದ ಕಾರ್ಖಾನೆಗಳಿಂದಲೂ ಬಾಕಿ ಇರಲಿಲ್ಲ ಎಂದು ಹೇಳಲು ಅವರಿಂದ ಸಾಧ್ಯವಾಗಿಲ್ಲ ಎಂದು ದೂರಿದರು.
ಕಬ್ಬಿನ ಬೆಂಬಲ ಬೆಲೆಯನ್ನು ನಿಗದಿ ಮಾಡಲು ಪ್ರತ್ಯೇಕ ಸಮಿತಿಯೇ ಇದೆ. ಆದರೆ ಆ ಸಮಿತಿಯ ಶಿಫಾರಸ್ಸುಗಳನ್ನು ಒಪ್ಪಿಕೊಳ್ಳಲಿಕ್ಕೆ ರಾಜ್ಯ ಸರ್ಕಾರವೇ ಸಿದ್ಧವಾಗಿರಲಿಲ್ಲ. ವಿಧಾನಸಭಾ ಕಲಾಪ ನಡೆಯುವಾಗಲೇ ಮುಖ್ಯಮಂತ್ರಿಗಳು ರೈತರ ಬಳಿ ಹೋಗಿ ಮಾತನಾಡಬಹುದಾಗಿತ್ತು, ಆದರೆ ಸಿದ್ದರಾಮಯ್ಯ ಅದನ್ನು ಮಾಡಲಿಲ್ಲ. ಅದರಿಂದಾಗಿಯೇ ಈ ದುರಂತ ಸಂಭವಿಸುವಂತಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಮಂತ್ರಿಗಳೇ ಮಾಲಿಕರು: ರೈತರ ವಿಷಯದಲ್ಲಿ ಮುಖ್ಯಮಂತ್ರಿಗಳು ತಪ್ಪೆಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸಕ್ಕರೆ ಕಾರ್ಖಾನೆ ಮಾಲೀಕರು ಮಾಜಿ-ಹಾಲಿ ಮಂತ್ರಿಗಳೇ ಆಗಿದ್ದಾರೆ. ಪ್ರತಿಯೊಬ್ಬರೂ 1-2 ಕಾರ್ಖಾನೆಗಳನ್ನು ಹೊಂದಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ಪಕ್ಷದಲ್ಲಿ ಇವರೇ ಮಂತ್ರಿಗಳಾಗುತ್ತಾರೆ. ರೈತನಿಗೆ ನ್ಯಾಯ ದೊರಕದ ಹಾಗೆ ಮಾಡುವ ಶಕ್ತಿ ಇವರುಗಳಿಗಿದೆ ಎಂದು ಟೀಕಿಸಿದರು.
ರೈತರು ಮೂರು ದಿನಗಳಿಂದ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೆ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿಯೇ ವಿಠಲ್ ಅರಭಾವಿ ವಿಷಸೇವಿಸಿ ಸಾವನ್ನಪ್ಪಿದ್ದಾರೆ. ಈ ಕೂಡಲೇ ಸರ್ಕಾರ ಅವರ ಕುಟುಂಬಕ್ಕೆ ಸಮರ್ಪಕ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

