ಶಿವಮೊಗ್ಗ

ಅಡಕೆ; ಎಕರೆಗೆ 50 ಸಾವಿರ ಪರಿಹಾರಕ್ಕೆ ಆಗ್ರಹ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ,  ಸೆ.2
ಅಡಕೆ ಬೆಳೆ ಕೊಳೆರೋಗದಿಂದ ಹಾಳಾಗಿದ್ದು, ಮೆಕ್ಕೆಜೋಳ, ಶುಂಠಿ ಬೆಳೆಗೆ ಅತಿವೃಷ್ಟಿಯಿಂದ ಹಾನಿಯಾಗಿದೆ. ಹೀಗಾಗಿ ಸರ್ಕಾರ ಈ ಕೂಡಲೇ ಪರಿಹಾರ ಘೋಷಿಸಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಒತ್ತಾಯಿಸಿದೆ.
ಸೋಮವಾರ ಪ್ರತಿಭಟನೆ ನಡೆಸಿದ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿ, ಸರ್ಕಾರದ ಮುಂದೆ ಬೇಡಿಕೆ ಮಂಡಿಸಿದರು.
ಗೋರಖ್ ಸಿಂಗ್ ವರದಿಯಂತೆ ಅಡಕೆ ಬೆಳೆಗಾರರ ಸಾಲಮನ್ನಾ ಮಾಡುವುದು, ಸಹಕಾರ ಸಂಘಗಳಿಂದ ರೈತರಿಗೆ ಸಾಲ ಮನ್ನಾ ಬಾಬ್ತು ಹಣವನ್ನು ಕೂಡಲೇ ಕೊಡುವುದು, ರೈತರಿಗೆ ಹೊಸ ಸಾಲ ನೀಡುವುದು, ಬ್ಯಾಂಕು ಮತ್ತು ಸಹಕಾರಿ ಸಂಸ್ಥೆಗಳಿಂದ ಸಾಲ ವಸೂಲಾತಿ ಮತ್ತು ನ್ಯಾಯಾಲಯಕ್ಕೆ ಹಾಕುವುದನ್ನು ನಿಲ್ಲಿಸಬೇಕು ಎಂದು ರೈತರು ಒತ್ತಾಯಿಸಿದರು.
ಹೆಚ್ಚಿನ ಮಳೆ: ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಈ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 45 ಸಾವಿರ ಹೆಕ್ಟೇರ್ ಅಡಕೆ ಬೆಳೆ ಪ್ರದೇಶವಿದ್ದು, ಶೇ.90ರಷ್ಟು ಭಾಗ ಅಡಕೆ ಬೆಳೆ ಕೊಳೆರೋಗಕ್ಕೆ ತುತ್ತಾಗಿ ನಾಶವಾಗಿದೆ. ಮೆಕ್ಕೆಜೋಳ, ಶುಂಠಿ ಬೆಳೆ ಸಹ ಅತಿಯಾದ ಮಳೆಯಿಂದ ಹಾನಿಯಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಅಡಕೆ ಎಕರೆಗೆ ಕನಿಷ್‌ಠ 50 ಸಾವಿರ ರುಪಾಯಿ, ಮೆಕ್ಕೆಜೋಳ, ಶುಂಠಿಗೆ ಎಕರೆಗೆ 25 ಸಾವಿರ ರುಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಆತಂಕ: ಸುಮಾರು 8-10 ವರ್ಷಗಳಿಂದಲೂ ಅಡಕೆ ಫಸಲು ಹಳದಿ ಎಲೆ ರೋಗ, ಹಿಡಿ ಮುಂಡಿಗೆ, ಬೇರುಹುಳ ಮುಂತಾದ ರೋಗಗಳಿಗೆ ತುತ್ತಾಗಿ ಪ್ರತಿಶತ 75 ಭಾಗದಷ್ಟು ನಷ್ಟವಾಗಿದೆ. ಅನೇಕ ಕಡೆ ಅಡಕೆ ಮರಗಳನ್ನು ಫಸಲು ಬಂದ 2-3 ವರ್ಷಗಳಲ್ಲಿ ಕಡಿದು ಹಾಕಿದ್ದಾರೆ. ಸುಮಾರು 8-10 ವರ್ಷಗಳ ಕಾಲ ಅಡಕೆ ಬೆಳೆಸಲು ಬ್ಯಾಂಕುಗಳಲ್ಲಿ ಲಕ್ಷಾಂತರ ರುಪಾಯಿ ಸಾಲ ಮಾಡಿದ್ದು ಸಾಲ ತೀರಿಸಲಾಗದೆ ಸುಸ್ತಿಯಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಅಡಕೆಗೆ ತಗುಲಿರುವ ರೋಗಗಳ ಬಗ್ಗೆ ಅಧ್ಯಯನ ಮಾಡಲು ಬಂದ ಕೇಂದ್ರ ಸರ್ಕಾರದ ಘೋರಕ್ ಸಿಂಗ್ ಸಮಿತಿಯು ಸಾಲವನ್ನು ಮನ್ನಾ ಮಾಡಲು ಶಿಫಾರಸ್ಸು ಮಾಡಿ ನಾಲ್ಕು ವರ್ಷ ಕಳೆದರೂ ಈವರೆಗೂ ಸಾಲ ಮನ್ನಾ ಮಾಡಿಲ್ಲ. ಆದ್ದರಿಂದ ಈ ಕೂಡಲೇ ಮುಖ್ಯಮಂತ್ರಿಯವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಸಾಲ ಮನ್ನಾ ಮಾಡಿಸಲು ಪ್ರಯತ್ನಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಬಡವರಿಗೆ ಒಂದು ರುಪಾಯಿಗೆ ದವಸ ಧಾನ್ಯ ಕೊಡುವುದು ಮತ್ತು ಕೇಂದ್ರ ಸರ್ಕಾರ 3 ರುಪಾಯಿಗೆ ಆಹಾರ ಧಾನ್ಯ ಕೊಡಲು ತೀರ್ಮಾನಿಸಿರುವುದರ ಬಗ್ಗೆ ರೈತರಿಗೆ ಅಭ್ಯಂತರವಿಲ್ಲ. ಆದರೆ, ರೈತರು ಬೆಳೆದ ಆಹಾರ ಧಾನ್ಯಗಳ ಬೆಲೆಗಳು ಕುಸಿಯುವ ಬೀತಿ ಇದೆ. ಆದ್ರದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತತ್‌ಕ್ಷಣದಿಂದಲೇ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದನ್ನು ಕೈ ಬಿಟ್ಟು ವೈಜ್ಞಾನಿಕ ಬೆಲೆಗೆ ರೈತರಿಂದ ಆಹಾರ ಪದಾರ್ಥಗಳನ್ನು ಖರೀದಿಸಲು ತೀರ್ಮಾನ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆ ವೇಳೆ ರಾಜು, ವಸಂತಕುಮಾರ್, ಕೆ. ರಾಘವೇಂದ್ರ, ಗುರುಶಾಂತಪ್ಪ, ಶಿವಮೂರ್ತಿ, ಸತೀಶ್, ಪಿ.ಡಿ. ಮಂಜಪ್ಪ, ಎಚ್.ಪಿ. ಸತೀಶ್, ಡಿ.ಎಚ್. ರಾಮಚಂದ್ರಪ್ಪ, ಗಂಗಾಧರಪ್ಪ, ವೆಂಕಟೇಶಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.