ಶಿವಮೊಗ್ಗ

ಪಠ್ಯದೊಂದಿಗೆ ಆರೋಗ್ಯ ಸೇವೆ

Published On :

ಕ.ಪ್ರ.ವಾರ್ತೆ  ಭದ್ರಾವತಿ  ಸೆ.3
ಗುಣಮಟ್ಟದ ಶಿಕ್ಷಣ ಉದಾತ್ತ ಮನೋಭಾವದ ಶಿಕ್ಷಕರೊಂದಿಗೆ ಪ್ರಾರಂಭವಾಗುತ್ತದೆ. ಶಿಕ್ಷಣವೆಂದರೆ ಬೆಳಗ್ಗೆ ಶಾಲೆಯ ಗಂಟೆ ಹೊಡೆದ ತಕ್ಷಣ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ತಲಪಲಿ ಬಿಡಲಿ, ತಮ್ಮ ಕರ್ತವ್ಯವೆಂಬಂತೆ ಪಾಠ ಮಾಡಿ ಮನೆಗೆ ಹೋಗುವ ಶಿಕ್ಷಕರೇ ಹೆಚ್ಚು. ಆದರೆ ಪಠ್ಯ ವಿಷಯದಲ್ಲಿ ಆಸಕ್ತಿ ತೋರದ ವಿದ್ಯಾರ್ಥಿಗಳತ್ತ ಗಮನ ಹರಿಸುವ ಜೊತೆಗೆ ಅವರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವ ಶಿಕ್ಷಕಿಯೊಬ್ಬರು ಇಲ್ಲಿದ್ದಾರೆ.
 ಇವರ ಹೆಸರು ಅನಿತಾ ಮೇರಿ. ಭದ್ರಾವತಿಯ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನುಷ್ಯನಿಗೆ ಜೀವನದಲ್ಲಿ ಆರೋಗ್ಯ ಹಾಗೂ ಶಿಕ್ಷಣ  ಎರಡೂ ಅತ್ಯವಶ್ಯಕ. ಹಾಗಾಗಿ ಈ ಎರಡನ್ನೂ ಸೇವಾ ಮನೋಭಾವದಿಂದ ತಾವು ನಿರ್ವಹಿಸುತ್ತಿರುವುದಾಗಿ ಮೇರಿ ಹೇಳುತ್ತಾರೆ.
ಆರೋಗ್ಯಕ್ಕೂ ಆದ್ಯತೆ: ಶಾಲೆಯಲ್ಲಿ ಪಠ್ಯ ವಿಷಯದಲ್ಲಿ ಆಸಕ್ತಿ ತೋರದ ವಿದ್ಯಾರ್ಥಿಗಳನ್ನು ಪತ್ತೆ ಮಾಡಿ ಅವರ ಆರೋಗ್ಯದ ಕಡೆಗೂ ಇವರು ಗಮನ ಹರಿಸಿ ಪೋಷಕರ ಬಳಿ ಚರ್ಚಿಸಿ ಅವರಿಗೆ ಸರಿಯಾದ ಚಿಕಿತ್ಸೆ ಕೊಡಿಸಲು ಉತ್ತೇಜಿಸುತ್ತಾರೆ.
 ಬಡತನದಲ್ಲಿರುವ ವಿದ್ಯಾರ್ಥಿಗಳಿಗೆ ದಾನಿಗಳಿಂದ ಬಟ್ಟೆ, ಪಾದರಕ್ಷೆ,ಪುಸ್ತಕಗಳನ್ನು ಕೊಡಿಸುವುದು ಸಹ ಇವರ ಸೇವಾ ಚಟುವಟಿಕೆಗಳಲ್ಲಿ ಸೇರಿದೆ.  
ಶಾಲೆಯಲ್ಲಿ ತಾವು  ಕೈಗೊಳ್ಳುವ ಸೇವೆಗೆ ಶಿಕ್ಷಕಿ ಬಿ.ಆರ್. ವಿನೋದಮ್ಮ ಮತ್ತು ರಾಜೇಶ್ವರಿ ಸಹಕಾರ ನೀಡುತ್ತಿದ್ದಾರೆ ಎಂದು ಅವರು ಸ್ಮರಿಸುತ್ತಾರೆ.
ಪೋಷಕರಿಗೆ ಮಾಹಿತಿ: ವಿದ್ಯಾರ್ಥಿಗಳಿಗೆ ಸುವರ್ಣ ಆರೋಗ್ಯ ಚೈತನ್ಯ ಕಾರ್ಡುಗಳು ಲಭ್ಯವಿವೆ. ತಾಲೂಕು ಆರೋಗ್ಯ ಅಧಿಕಾರಿಗಳಲ್ಲಿ ಶಿಫಾರಸು ಮಾಡಿಸಿ ಅದನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ತೋರಿಸಿ ಅಲ್ಲಿಂದ ಅನುಮೋದನೆ ಪಡೆದು ಅದನ್ನು ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಅನುಮೋದನೆ ಮಾಡಿಸಿದರೆ ಆಯಾ ಶಾಲೆಗಳಲ್ಲಿ ಕಾರ್ಡುಗಳನ್ನು ನೀಡಲಾಗುವುದು.   ಇದರ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿ, ಕಾರ್ಡ್ ಕೊಡಿಸಲೂ ಇವರು ನೆರವಾಗುತ್ತಿದ್ದಾರೆ.   ಇಂತಹ ಕಾರ್ಡುಗಳನ್ನು ಪಡೆದ ಬಡ ವಿದ್ಯಾರ್ಥಿಗಳು ಉಚಿತವಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.     ಇಂತಹ ಕಾರ್ಡುಗಳನ್ನು ಪಡೆಯುವಲ್ಲಿ ಮತ್ತು ಅವಿದ್ಯಾವಂತ ಹಾಗೂ ಬಡ ಪೋಷಕರ ಮಕ್ಕಳನ್ನು ಶಿವಮೊಗ್ಗ ಮತ್ತು ಬೆಂಗಳೂರು ಆಸ್ಪತ್ರೆಗೆ ಇವರೇ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ ಉದಾಹರಣೆಗಳಿವೆ.   ಮಕ್ಕಳು ವಿದ್ಯಾವಂತರಾಗುವುದರೊಂದಿಗೆ ಆರೋಗ್ಯವಂತರಾಗಿ ದೇಶದ ಸಂಪತ್ತಾಗಿ ಉಳಿಯುತ್ತಾರೆ. ತಮ್ಮ ಈ ಸೇವಾಕಾರ್ಯಕ್ಕೆ ತಮಗೆ ಸಹಕರಿಸುತ್ತಿರುವ ಶಾಲೆಯ ಎಲ್ಲಾ ಸಹೋದ್ಯೋಗಿಗೂ ಅನಿತಾ ಮೇರಿ ಕೃತಜ್ಞತೆ ವ್ಯಕ್ತಪಡಿಸಿದರು.
ನೆರವಿಗೆ ಸಂಪರ್ಕಿಸಿ: ಜಿಲ್ಲೆಯ ಯಾವುದೇ ವಿದ್ಯಾರ್ಥಿಗೆ ಉಚಿತ ಆರೋಗ್ಯಸೇವೆ ಬೇಕಿದ್ದರೂ ತಮ್ಮನ್ನು ಸಂಪರ್ಕಿಸಿದರೆ ತಾವು ಸೂಕ್ತ ಮಾರ್ಗದರ್ಶನ ಮತ್ತು ಸಹಾಯ ಮಾಡುವುದಾಗಿ ಅವರು ತಿಳಿಸಿದರು. ಮೊ-  9481935336 ಸಂಪರ್ಕಿಸಬಹುದು.  ಇವರ ತಾಯಿ ಶಿಕ್ಷಕಿಯಾಗಿರುವ ತೀರ್ಥಹಳ್ಳಿ ತಾಲೂಕಿನ ಕೊಂಡ್ಲೂರು ಶಾಲೆಯಲ್ಲಿಯೂ ಮೇರಿ ಅವರು ಹತ್ತು ವರ್ಷಗಳ ಕಾಲ ಉಚಿತವಾಗಿ ಸೇವೆ ಸಲ್ಲಿಸಿದ್ದರು.

-ಆನಂದರಾಮನ್ ಎಲ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.