ಅರಣ್ಯಹಕ್ಕು ಕಾಯ್ದೆ ಅನುಷ್ಠಾನಕ್ಕೆ ಆಗ್ರಹ
ಕ.ಪ್ರ.ವಾರ್ತೆ ಸಾಗರ ಸೆ.8
ಜಿಲ್ಲೆಯಲ್ಲಿ ಅರಣ್ಯಹಕ್ಕು ಕಾಯ್ದೆ ಸಮರ್ಪಕ ಅನುಷ್ಠಾನಕ್ಕೆ ತರಬೇಕು. ಗಿರಿಜನ ಉಪಯೋಜನೆ ಮತ್ತು ವಿಶೇಷ ಘಟಕ ಯೋಜನೆ ಕಾಯ್ದೆಯಾಗಿ ಜಾರಿಗೆ ಬರಬೇಕು. ಜಿಲ್ಲೆಯ ಬುಡಕಟ್ಟು ಜನರಿಗೆ ಉಚಿತ ಪೌಷ್ಟಿಕ ಆಹಾರ ವಿತರಣೆ ಮಾಡಬೇಕು ಹಾಗೂ ಸ್ವತಂತ್ರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆರಂಭಿಸಬೇಕು ಎಂಬಿತ್ಯಾದಿ ನಿರ್ಣಯಗಳನ್ನು ತಾಲೂಕಿನ ತುಮರಿಯಲ್ಲಿ ನಡೆದ ಕರ್ನಾಟಕ ಅರಣ್ಯ ಮೂಲ ಬುಡಕಟ್ಟುಗಳ ಒಕ್ಕೂಟದ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆಯಲ್ಲಿ ಕೈಗೊಳ್ಳಲಾಗಿದೆ.
ತುಮರಿಯಲ್ಲಿ ನಡೆದ ಒಕ್ಕೂಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ರಾಮಣ್ಣ ಕಾರ್ಗಲ್, ಬುಡಕಟ್ಟು ಸಮುದಾಯಗಳು ತಮ್ಮದೇ ಆದ ವಿಶಿಷ್ಟ ಜೀವನ ನಡೆಸಿಕೊಂಡು ಬರುತ್ತಿವೆ. ಅರಣ್ಯ ರಕ್ಷಣೆ, ಜೀವ ಸಂಕುಲಗಳ ಉಳಿವು, ಜೀವವೈವಿಧ್ಯತೆ ರಕ್ಷಣೆ, ಸಮಾನ ನ್ಯಾಯಪದ್ಧತಿ, ಪುರುಷ ಹಾಗೂ ಮಹಿಳೆಯರಿಗೆ ಸಮಾನ ಸ್ಥಾನಮಾನದಂತಹ ಆಚರಣೆಗಳನ್ನು ಬುಡಕಟ್ಟು ಜನಾಂಗದವರು ನಡೆಸಿಕೊಂಡು ಬರುತ್ತಿದ್ದಾರೆ ಎಂದರು.
ಸಂಘಟಿತ ಹೋರಾಟ ಅನಿವಾರ್ಯ: ರಾಜ್ಯ ಸರ್ಕಾರದ ಗಿರಿಜನ ಉಪಯೋಜನೆ ಮತ್ತು ವಿಶೇಷ ಘಟಕ ಯೋಜನೆ ಬುಡಕಟ್ಟು ಹಾಗೂ ದಲಿತ ಜನಾಂಗಗಳಿಗೆ ಸರಿಯಾಗಿ ತಲುಪುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಕೋಟ್ಯಂತರ ರುಪಾಯಿ ಹಣ ಇತರೆ ರಾಜ್ಯಗಳಿಗೆ ಹೋಗುತ್ತಿದೆಯೇ ಹೊರತು ಕರ್ನಾಟಕಕ್ಕೆ ಸಿಗುತ್ತಿಲ್ಲ. ಯೋಜನೆ ಅನುಷ್ಠಾನಕ್ಕೆ ತರಲು ರಾಜ್ಯಾದ್ಯಂತ ಸಂಘಟಿತ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯ ಎಂದು ಹೇಳಿದರು.
ರಾಜ್ಯದ ಬುಡಕಟ್ಟು ಜನಾಂಗಗಳಾದ ಜೇನುಕುರುಬ, ಕೊರಗ, ಸಿದ್ಧಿ, ಮಲೆಕುಡಿಯ, ಎರವ, ಸೋಲಿಗ, ಬೆಟ್ಟಕುರುಬ ಸೇರಿದಂತೆ ಒಟ್ಟು ಏಳು ಸಮುದಾಯಗಳಿಗೆ ಪೌಷ್ಟಿಕ ಆಹಾರ ಸರಬರಾಜು ಆಗುತ್ತಿದೆ. ಇದನ್ನು ಶಿವಮೊಗ್ಗ ಜಿಲ್ಲೆಯ ಬುಡಕಟ್ಟು ಜನಾಂಗಗಳಾದ ಹಸಲರು, ಗೊಂಡ ಸಮುದಾಯಗಳಿಗೂ ಜಾರಿ ಮಾಡಬೇಕು. ಕಾಡಿನ ಕಿರು ಉತ್ಪನ್ನಗಳನ್ನು ತೆಗೆಯಲು ಕೆಲವು ಕಡೆಗಳಲ್ಲಿ ಅರಣ್ಯ ಇಲಾಖೆಯವರು ನೀಡುತ್ತಿರುವ ತೊಂದರೆ ನಿಲ್ಲಿಸುವ ನಿಟ್ಟಿನಲ್ಲಿ ಒಕ್ಕೂಟ ಹೋರಾಟ ಹಮ್ಮಿಕೊಳ್ಳುತ್ತದೆ ಎಂದು ಹೇಳಿದರು.
ಸಮಗ್ರ ಯೋಜನೆ ರೂಪಿಸಿ: ಶಿವಮೊಗ್ಗ ಜಿಲ್ಲೆಯನ್ನು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಪ್ರದೇಶವೆಂದು ಘೋಷಿಸಿ, ಸ್ವತಂತ್ರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆರಂಭಿಸಬೇಕು. ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆ ಸಮರ್ಪಕವಾಗಿ ಜಾರಿಗೊಳಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ಅಧಿಕಾರಿಗಳ ಸಭೆ ಕರೆದು ಬುಡಕಟ್ಟು ಜನರ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸುವಂತೆ ಒತ್ತಡ ಹೇರುವ ಅಗತ್ಯವಿದೆ ಎಂದು ತಿಳಿಸಿದರು.
ಒಕ್ಕೂಟದ ತಾಲೂಕು ಸಂಚಾಲಕ ಬಾಲರಾಜ್ ಕನ್ನಂಗಿ, ಸೀತಾರಾಮ ಕನ್ನಂಗಿ, ಚಂದ್ರು ತುಮರಿ, ಕಾರ್ಯದರ್ಶಿ ಜಾನಕಿ ಕಪದೂರು, ಸರಸ್ವತಿ ಹೊಂಗೆಹಕ್ಲು, ಶ್ರೀಧರ ಇನ್ನಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

