ಕುಲಪತಿ ಮಾತಿಗೂ ಬಗ್ಗದ ಹೋರಾಟ
ಶಿವಮೊಗ್ಗ: ಭಾರತೀಯ ಪಶುವೈದ್ಯ ಪರಿಷತ್ತಿನ ಮಾನ್ಯತೆಗೆ ಒತ್ತಾಯಿಸಿ ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ನಡೆಸುತ್ತಿರುವ ಮುಷ್ಕರ ಶುಕ್ರವಾರ 10ನೇ ದಿನಕ್ಕೆ ಕಾಲಿಟ್ಟಿದ್ದು, ಕರ್ನಾಟಕ ಪಶುವೈದ್ಯ, ಪಶು, ಮೀನುಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ. ರೇಣುಕಾ ಪ್ರಸಾದ್ ಅವರ ಮನವಿಗೂ ಮಣಿಯದೇ ಮುಂದುವರಿಸಲು ನಿರ್ಧರಿಸಿದ್ದಾರೆ.
ಸಂಜೆ ಪ್ರತಿಭಟನಾ ಸ್ಥಳಕ್ಕೆ ಕುಲಪತಿ ಹಾಗೂ ಕುಲಸಚಿವರು ಆಗಮಿಸಿ ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನ ನಡೆಸಿದರು. ವಿಸಿಐ ಮಾನ್ಯತೆ ಪಡೆಯುವ ಪ್ರಯತ್ನ ನಡೆಯುತ್ತಿದೆ. ಇನ್ನೆರಡು ವಾರದಲ್ಲಿ ಕಾಲೇಜಿಗೆ ತಾತ್ಕಾಲಿಕ ಮಾನ್ಯತೆ ಸಿಗಲಿದೆ. ಆದ್ದರಿಂದ ಮುಷ್ಕರ ಹಿಂಪಡೆದು ಕಾಲೇಜು ನಡೆಯುವುದಕ್ಕೆ ಅವಕಾಶ ಮಾಡಿಕೊಡಿ ಎಂದರು.
ಕುಲಸಚಿವ ಡಾ. ಎಚ್.ಎಂ. ಜಯಪ್ರಕಾಶ್ ಅವರೂ ಸಹ ಸರ್ಕಾರದ ಮಟ್ಟದಲ್ಲಿಯೂ ಸಹ ಪ್ರಯತ್ನಗಳು ನಡೆಯುತ್ತಿವೆ. ಆದ್ದರಿಂದ ಮುಷ್ಕರ ಹಿಂಪಡೆಯಿರಿ ಎಂದು ಕೇಳಿಕೊಂಡರು.
ಸ್ಪಷ್ಟ ಉತ್ತರವಿಲ್ಲ: ಕರ್ನಾಟಕ ಪಶುವೈದ್ಯ ಪರಿಷತ್ತಿನ ಅಧ್ಯಕ್ಷ ಡಾ. ವಿ. ಚಂದ್ರಶೇಖರ ಮೂರ್ತಿ ಸಹ ತಾತ್ಕಾಲಿಕ ಮಾನ್ಯತೆ ಸಿಗುವ ಭರವಸೆ ನೀಡಿದರು. ಆದರೆ, ವಿದ್ಯಾರ್ಥಿಗಳು ಈ ಮಾನ್ಯತೆ ಹಿಂದಿನ ವರ್ಷಗಳಲ್ಲಿ ವ್ಯಾಸಂಗ ಮಾಡಿದವರಿಗೂ ಪೂರ್ವಾನ್ವಯವಾಗುತ್ತದೆಯೇ ಎಂಬುದಕ್ಕೆ ಸ್ಪಷ್ಟ ಉತ್ತರ ನೀಡಲಿಲ್ಲ.
ಯಾವ ಸಮಜಾಯಿಷಿಗೂ ಒಪ್ಪದ ವಿದ್ಯಾರ್ಥಿಗಳು ಪಶುವೈದ್ಯ ಪರಿಷತ್ ನೀಡುವ ತಾತ್ಕಾಲಿಕ ಮಾನ್ಯತೆ ಪತ್ರ ಸಿಗುವವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಪಟ್ಟುಹಿಡಿದರು. ಸುಮಾರು ಎರಡು ಗಂಟೆಗಳ ಕಾಲ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದ ವಿಶ್ವವಿದ್ಯಾಲಯ ಮುಖ್ಯಸ್ಥರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸಾದರು.
ಈ ಸಂದರ್ಭದಲ್ಲಿ ಕಾಲೇಜಿನ ಡೀನ್ ಡಾ. ಆರ್.ವಿ. ದಬಾಲೆ ಸಹ ಹಾಜರಿದ್ದರು. ಕುಲಪತಿಯವರು ಆಗಮಿಸಿದ ಸಂದರ್ಭದಲ್ಲಿ ನಾಗರೀಕ ಹಿತರಕ್ಷಣಾ ವೇದಿಕೆಯ ಪ್ರಮುಖರಾದ ಕೆ.ವಿ. ವಸಂತಕುಮಾರ್, ಸತೀಶ್ ಕುಮಾರ್ ಸೇರಿದಂತೆ ಹಲವರು ವಿದ್ಯಾರ್ಥಿಗಳ ಪರವಾಗಿ ಅಹವಾಲು ಮಂಡಿಸಿದರು.
ಉದ್ವಿಗ್ನತೆ: ಕುಲಪತಿ ಜತೆ ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಭಾವೋದ್ವೇಗದಿಂದ ತಮ್ಮ ಸಮಸ್ಯೆಗಳನ್ನು ಮುಂದಿಟ್ಟರು. ತಮ್ಮ ಭವಿಷ್ಯವನ್ನು ಸರ್ಕಾರ ಹಾಗೂ ವಿಶ್ವವಿದ್ಯಾಲಯ ಹಾಳು ಮಾಡುತ್ತಿದೆ. ಮಾನ್ಯತೆ ಇಲ್ಲ ಎಂದು ಗೊತ್ತಿದ್ದರೂ ನಮ್ಮನ್ನು ಅಡ್ಮಿಷನ್ ಮಾಡಿಕೊಂಡಿದ್ದು ಏಕೆ ಎಂದು ಆಕ್ರೋಶದಿಂದ ಪ್ರಶ್ನಿಸಿದರು.
ಪ್ರಶ್ನೆಗಳ ಸರಮಾಲೆ: ಈ ವರ್ಷ ತಾತ್ಕಾಲಿಕ ಮಾನ್ಯತೆ ಸಿಕ್ಕು, ಮುಂದಿನ ವರ್ಷ ವಾಪಸು ಪಡೆದರೆ ಆಗ ನಾವೇನು ಮಾಡಬೇಕು ನಮ್ಮ ಭವಿಷ್ಯಕ್ಕೆ ಯಾವ ತೊಂದರೆಯೂ ಆಗುವುದಿಲ್ಲ ಎಂದು ವಿಶ್ವವಿದ್ಯಾಲಯವು ಬಾಂಡ್ ಪೇಪರ್ ಮೇಲೆ ಬರೆದುಕೊಡುತ್ತದೆಯೇ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದು ಬೇರೆ ವೃತ್ತಿಪರ ಪದವಿಗೆ ಸೀಟು ಸಿಕ್ಕರೂ ಸಹ ಅದನ್ನು ಬಿಟ್ಟು ಪಶುವೈದ್ಯಕೀಯ ಪದವಿ ಪಡೆಯಲು ಬಂದರೆ ನಮಗೆ ಸಿಕ್ಕಿದ್ದೇನು ಈಗಾಗಲೇ ಪದವಿ ಮುಗಿಸಿರುವ ಈ ಕಾಲೇಜಿನ ವಿದ್ಯಾರ್ಥಿಗಳಿಗೆ ನ್ಯಾಯ ಸಿಕ್ಕಿದೆಯೇ ಕಾಲೇಜಿನ ಅಭಿವೃದ್ಧಿ ಪರಿವೀಕ್ಷಣೆಗೆ ಸಮಿತಿ ಮಾಡುತ್ತೇವೆಂದು ಹೇಳಿ ವಿವಿ ಯಾಕೆ ಇದೂವರೆಗೆ ಕ್ರಮ ಕೈಗೊಂಡಿಲ್ಲ ಕೊರತೆ ಇದೆ ಎಂದು ಗೊತ್ತಿದ್ದರೂ ಉಪನ್ಯಾಸಕರನ್ನು ಬೇರೆಡೆ ವರ್ಗ ಮಾಡಿದ್ದು ಏಕೆ ಅಡ್ಮಿನಿಸ್ಟ್ರೇಟಿವ್ ಬ್ಲಾಕ್ನ ಮೊದಲ ಮಹಡಿ ಕಟ್ಟಡ ಕಾಮಗಾರಿಯನ್ನು ನಿಲ್ಲಿಸಿದ್ದು ಏಕೆ ಎಂದು ಒಂದರಮೇಲೊಂದು ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೇಳುತ್ತಿದ್ದರೆ ಕುಲಪತಿ ಹಾಗೂ ಕುಲಸಚಿವರು ನಿರುತ್ತರರಾಗಿದ್ದರು.
ಅವರನ್ನು ಸಮಾಧಾನಪಡಿಸುವ ಮಾತುಗಳಿಗೆ ಶಕ್ತಿಯೇ ಇರಲಿಲ್ಲ.
ನಾಗರೀಕ ಹಿತರಕ್ಷಣಾ ಸಮಿತಿಯ ವಸಂತ ಕುಮಾರ್, ಸತೀಶ್ ಸಹ ವಿಶ್ವವಿದ್ಯಾಲಯದ ಮುಖ್ಯಸ್ಥರಿಂದ ಹಲವು ಸಮಜಾಯಿಷಿ ಪಡೆದರು. ಕೊನೆಯಲ್ಲಿ ವಿದ್ಯಾರ್ಥಿಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ಬೆಂಬಲಿಸುತ್ತೇವೆ ಎಂದು ಭರವಸೆ ನೀಡಿದರು.
ತನಿಖೆಗೆ ಸಮಿತಿ- ಕುಲಪತಿ ಭರವಸೆ
ಶಿವಮೊಗ್ಗ ಪಶುವೈದ್ಯ ಕಾಲೇಜಿನ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿರುವುದಾಗಿ ವಿಶ್ವವಿದ್ಯಾಲಯಕ್ಕೆ ಪತ್ರಗಳು ಬಂದಿವೆ. ಈ ಹಿನ್ನಲೆಯಲ್ಲಿ ತನಿಖೆ ನಡೆಸಲು ಸಮಿತಿ ರಚಿಸಲಾಗುವುದು. ಸಮಿತಿ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕುಲಪತಿ ಡಾ. ರೇಣುಕಾ ಪ್ರಸಾದ್ ಹೇಳಿದ್ದಾರೆ.
ತಪ್ಪು ಮಾಡಿರುವುದು ಸಾಬೀತಾಗುವ ವರೆಗೂ ಏನು ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಗಂಭೀರ ಪರಿಶೀಲನೆ ನಡೆಸಲಾಗುವುದು ಎಂದು ಅವರು ಸುದ್ದಿಗಾರರಿಗೆ ಹೇಳಿದರು.
ಇನ್ನೆರಡು ವಾರದಲ್ಲಿ ಭಾರತೀಯ ಪಶುವೈದ್ಯ ಪರಿಷತ್ತಿನ ತಾತ್ಕಾಲಿಕ ಮಾನ್ಯತೆ ಸಿಗುವ ಭರವಸೆ ಸಿಕ್ಕಿದೆ. ಹಾಗಾಗಿ ಪ್ರತಿಭಟನೆ ಹಿಂಪಡೆಯಿರಿ ಎಂದು ಕೇಳಬಹುದೇ ಹೊರತು ಇನ್ನೇನು ಮಾಡಲು ಸಾಧ್ಯ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಕಾಲೇಜು ಕಟ್ಟಡಕ್ಕೆ 107 ಕೋಟಿಕ್ಕಿಂತ ಹೆಚ್ಚು ಅನುದಾನ ಕೊಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಹಾಗಾಗಿ ಎರಡನೇ ಹಂತದ ಕಾಮಗಾರಿ ನಿಧಾನವಾಯಿತು ಎಂದ ಅವರು, ಆದ್ಯತೆಯ ಮೇಲೆ ಕಾಲೇಜಿಗೆ ಬೇಕಾದ ಸೌಕರ್ಯ ಒದಗಿಸಲು ಸರ್ಕಾರ, ವಿವಿ ಸಿದ್ಧವಿದೆ ಎಂದರು.
ವಿದ್ಯಾರ್ಥಿಗಳಿಂದಲೇ ಕ್ಲಿನಿಕ್ಗೆ ಶಂಕುಸ್ಥಾಪನೆ
ಪಶುವೈದ್ಯ ಪರಿಷತ್ತಿನ ಮಾನ್ಯತೆ ಪಡೆಯಲು ಅತ್ಯಂತ ಅಗತ್ಯವಾಗಿರುವ ಟಿವಿಸಿಸಿ (ಟೀಚಿಂಗ್ ವೆಟರ್ನರಿ ಕ್ಲಿನಿಕಲ್ ಕಾಂಪ್ಲೆಕ್ಸ್) ಕಟ್ಟಡಕ್ಕೆ ಶುಕ್ರವಾರ ವಿದ್ಯಾರ್ಥಿಗಳೇ ಶಂಕುಸ್ಥಾಪನೆ ಮಾಡಿದರು.
ಕಾಲೇಜು ಕ್ಯಾಂಪಸ್ನಲ್ಲಿ ಬೆಳಿಗ್ಗೆಯೇ ಆಯ ಗುರುತು ಮಾಡಿ, ಹೂವು- ತಳಿರು ತೋರಣದಿಂದ ಅಲಂಕರಿಸಿ, ವಿದ್ಯುಕ್ತವಾಗಿ ಪೂಜೆ ನೆರವೇರಿಸಿ ಗುದ್ದಲಿಪೂಜೆ ನೆರವೇರಿಸಿದರು. ವಿಸಿಐ ಮಾನ್ಯತೆ ಪಡೆಯಲು ಕ್ಲಿನಿಕಲ್ ಕಾಂಪ್ಲೆಕ್ಸ್ ಅತ್ಯಂತ ಅಗತ್ಯ. ಆದರೆ, ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳು ಕಾಲೇಜು ಶುರುವಾಗಿ 7 ವರ್ಷವಾದರೂ ಇತ್ತ ಗಮನ ಹರಿಸಿಲ್ಲ. ಹಾಗಾಗಿ ನಾವೇ ಶಂಕುಸ್ಥಾಪನೆ ಮಾಡಿದ್ದೇವೆ. ಕೂಡಲೇ ಕಟ್ಟಡ ಕಾಮಗಾರಿಯನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

