ಶಿಲಾಮಯ ಮಹಾದ್ವಾರ ಲೋಕಾರ್ಪಣೆ
ಹೊಸನಗರ: ಪಾರಮಾರ್ಥಿಕ ಬದುಕು ಸಾರ್ಥಕ, ಸಮಾಜಕ್ಕೆ ಕೊಡುಗೆಯಾದ ವ್ಯಕ್ತಿಯ ಬದುಕು ಅಮರ ಎಂದು ರಾಮಚಂದ್ರಾಪುರಮಠದ ರಾಘವೇಶ್ವರಭಾರತೀ ಶ್ರೀ ಹೇಳಿದರು.
ಕಾರಣಗಿರಿಯಲ್ಲಿ ನಿರ್ಮಿಸಲಾದ 32 ಅಡಿ ವಿಸ್ತಾರದ ಶಿಲಾಮಯ ಮಹಾದ್ವಾರವನ್ನು ಲೋಕಾರ್ಪಣೆ ಮಾಡಿ ನಂತರ ನಡೆದ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಪ್ರತಿಯೊಬ್ಬರೂ ತನಗೆ ಸಾವು ಬರಬಾರದು ತಾನು ಕುಮಾರನಾಗಿರಬೇಕು, ತನ್ನಲ್ಲಿ ಹಣ ಸದಾ ಇರಬೇಕು ಎಂಬ ಬಯಕೆ ಹೊಂದಿರುತ್ತಾರೆ. ಆದರೆ ಸಾವು ಬಯಸದಿದ್ದರೂ, ಅದು ಖಚಿತ ಎಂದರು. ಎಲ್ಲರಿಗೂ ಎಲ್ಲಾ ಸಂದರ್ಭದಲ್ಲಿಯೂ ಸಮಾಜಮುಖಿಯಾದ ಕಾರ್ಯ ಮಾಡುವ ಯೋಗ ಲಭ್ಯವಾಗುವುದಿಲ್ಲ, ಯೋಗಭಾಗ್ಯ ಕೂಡಿ ಬಂದಾಗ ತಾತ್ಸಾರ ಮಾಡದೇ ತೊಡಗಿಸಿಕೊಳ್ಳುವ ಮನಸ್ಸು ಮಾಡಬೇಕು. ಸ್ವಾರ್ಥ ಇಲ್ಲದವರಿಗೆ ಮಾತ್ರ ಸಾಧನೆ ಸಾಧ್ಯ ಎಂದರು.
ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಭೀಮೇಶ್ವರ ಜೋಷಿ ಮಾತನಾಡಿ, ಸಹಸ್ರಮಾನದ ಕಾರ್ಯ ಮಾಡಿಸುವ ಹಿಂದೆ ಶ್ರೇಷ್ಠ ಪ್ರೇರಣಾಶಕ್ತಿಯೂ ಕೆಲಸ ಮಾಡುತ್ತದೆ ಎಂದರು.
ಭೀಮೇಶ್ವರ ಜೋಷಿ, ಸಿಗಂದೂರು ಕ್ಷೇತ್ರದ ಶೇಷಗಿರಿ ಭಟ್, ರಾಣೆಬೆನ್ನೂರು ವಾಸುದೇವ ಹೆಬ್ಬಾರ್, ಮುಂಬಯಿ ಜನಾರ್ದನ, ಪ್ರಕಾಶ್, ಸಂಪಾಜೆ ಸುಮನಾ ಶ್ಯಾಮಭಟ್, ದಾವಣಗೆರೆ ಎಸ್.ಆರ್. ಹೆಗಡೆ, ಹಾಗೂ ಶಿಲ್ಪಿ ಜಯನಗರ ಕುಮಾರ ಅವರನ್ನು ಸನ್ಮಾನಿಸಲಾಯಿತು.
ಸಂಪೆಕಟ್ಟೆ ಹವ್ಯಕ ಮಹಾಮಂಡಲದ ಅಧ್ಯಕ್ಷ ವೈ.ವಿ. ಕೃಷ್ಣಮೂರ್ತಿ ಇದ್ದರು. ಸಂಪೆಕಟ್ಟೆ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟೇಶ್ ಹಾರೇಬೈಲು ನಿರೂಪಿಸಿದರು. ರಾಜಶೇಖರ್ ಹೆಬ್ಬಾರ್ ವಂದಿಸಿದರು.
ಗಮನಸೆಳೆದ ಮಹಾದ್ವಾರ: ತಾಲೂಕಿನ ಕಾರಣಗಿರಿ ಸರ್ಕಲ್ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ 32 ಅಡಿ ಉದ್ದ, ಹಾಗೂ 18.5 ಅಡಿ ಎತ್ತರದ ಶಿಲಾಮಯ ಮಹಾದ್ವಾರ ವಿಶಿಷ್ಟ ಕೆತ್ತನೆಯಿಂದ ಗಮನ ಸೆಳೆದಿದೆ. 9 ಹಸುಗಳು 36 ಬೇರೆಬೇರೆ ರೀತಿಯಲ್ಲಿ ನಿಂತಿರುವ ವಿನ್ಯಾಸ ಕೆತ್ತಲ್ಪಟ್ಟಿರುವ ಈ ದ್ವಾರದ ಕಂಬದಲ್ಲಿ 36 ಪದ್ಮದಳ ಮೂಡಿಸಲಾಗಿದೆ.
ದ್ವಾರದ ಒಂದು ಭಾಗದಲ್ಲಿ ರಾಮನ ಕೋದಂಡ ಇನ್ನೊಂದು ಭಾಗದಲ್ಲಿ ಶಂಕರಾಚಾರ್ಯರ ದಂಡ ಇದೆ. ಶಿಖರದ ಒಂದು ಪಾರ್ಶ್ವ ಮಹಾನಂದಿ, ಇನ್ನೊಂದು ಪಾರ್ಶ್ವ ಕಾಮಧೇನು ಹಾಗೂ ಮಧ್ಯದಲ್ಲಿ ಚಿನ್ಮುದ್ರೆ ಕೆತ್ತಲಾಗಿದೆ. ಜಯನಗರ ಕಾಮಧೇನು ಶಿಲ್ಪಕಲಾ ಶಾಲೆಯ ಶಿಲ್ಪಿ ಕುಮಾರ ನೇತೃತ್ವದಲ್ಲಿ ಕೇವಲ 7 ತಿಂಗಳಲ್ಲಿ ಈ ಮಹಾದ್ವಾರ ನಿರ್ಮಾಣವಾಗಿದೆ.
ರಾಮೋತ್ಸವಕ್ಕೆ ಚಾಲನೆ
ಹೊಸನಗರ: ರಾಮಚಂದ್ರಾಪುರಮಠದ ಜಯ ನಾಮ ಸಂವತ್ಸರದ ರಾಮೋತ್ಸವ ಮಂಗಳವಾರ ಆರಂಭಗೊಂಡಿದೆ. ಇದರ ಅಂಗವಾಗಿ ಮಂಗಳವಾರ ರಾತ್ರಿ ನಡೆದ ರಾಘವೇಶ್ವರಭಾರತೀ ಶ್ರೀಗಳ ಪುರಪ್ರವೇಶ ಅದ್ಧೂರಿ ಮೆರವಣಿಗೆಯೊಂದಿಗೆ ಸಂಪನ್ನಗೊಂಡಿತು. ವಿವಿಧ ಸಾಂಸ್ಕೃತಿಕ ಕಲಾ ಪ್ರಕಾರ, ಮೆರವಣಿಗೆ ಪಾಲ್ಗೊಂಡಿದ್ದವು. ಜತೆಗೆ ಮಹಿಳೆಯರು ಪೂರ್ಣ ಕುಂಭದೊಂದಿಗೆ ಸ್ವಾಗತ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

