ಶಿವಮೊಗ್ಗ

ಚುನಾವಣೆ ಕರ್ತವ್ಯಕ್ಕೆ ಸಜ್ಜಾಗುವಂತೆ ಪೊಲೀಸರಿಗೆ ಸೂಚನೆ

Published On :

ಶಿವಮೊಗ್ಗ: ಏ.17ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗೆ ಆಸ್ಪದ ನೀಡದೆ ಯಶಸ್ವಿಗೊಳಿಸಲು ಸಜ್ಜಾಗುವಂತೆ ಪೊಲೀಸ್ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಕೌಶಲೇಂದ್ರ ಕುಮಾರ್ ಸೂಚಿಸಿದ್ದಾರೆ.
ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಬುಧವಾರ ನಗರ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳನ್ನು ಸ್ವಾಗತಿಸಿ ಅವರು ಮಾತನಾಡಿದರು.
ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಯಾವುದೇ ದೊಡ್ಡ ಪ್ರಕರಣಗಳು ನಡೆದಿಲ್ಲ. ಈ ವಿಷಯವಾಗಿ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಷಮತೆ ಅಭಿನಂದನೀಯ. ಅಂತೆಯೇ ಇದೀಗ ಲೋಕಸಭೆ ಚುನಾವಣೆ ಬಂದಿದ್ದು, ಮುಂದಿನ 15 ದಿನಗಳು ಪೊಲೀಸರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಜ್ಜಾಗಬೇಕು ಎಂದರು.
ಪೊಲೀಸರ ಕಲ್ಯಾಣಕ್ಕೆ ಸರ್ಕಾರದ ವತಿಯಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಏಪ್ರಿಲ್ 02, 1965ರಲ್ಲಿ ಸರ್ಕಾರದಿಂದ ಕರ್ನಾಟಕ ಪೊಲೀಸ್ ಇಲಾಖೆಗೆ ಪ್ರತ್ಯೇಕ ಧ್ವಜ ಹಸ್ತಾಂತರಿಸಿದ ಕುರುಹಾಗಿ ಆಚರಿಸಲಾಗುವ ಈ ಧ್ವಜ ದಿನಾಚರಣೆ ದಿನವನ್ನು ಈ ಸಾಲಿನಲ್ಲಿ ನಿವೃತ್ತರಾದ ಪೊಲೀಸ್ ಸಿಬ್ಬಂದಿಗೆ ಸನ್ಮಾನ ಮಾಡುವ ಮೂಲಕ ಗೌರವಿಸಲಾಗುತ್ತಿದೆ ಎಂದು ಹೇಳಿದರು.
ವಾರ್ಷಿಕ ವರದಿ ವಾಚನ ಮಾಡಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬಿ. ದಯಾಳು, ಪೊಲೀಸರ ಅನುಕೂಲಕ್ಕಾಗಿ ಈ ಸಾಲಿನಲ್ಲಿ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ವಿವರಿಸಿ, ಜಿಲ್ಲೆ 2013-14ನೇ ಸಾಲಿನಲ್ಲಿ ನಿವೃತ್ತರಾದ 93 ಪೊಲೀಸ್ ಸಿಬ್ಬಂದಿಗೆ ಸನ್ಮಾನಿಸುವ ವಿಚಾರವನ್ನು ಪ್ರಕಟಿಸಿದರು. ಸಮಾರಂಭದಲ್ಲಿ ಅಷ್ಟೂ ನಿವೃತ್ತರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಪೊಲೀಸ್ ಉಪಾಧೀಕ್ಷ ಕೆ.ಎಚ್. ನಾಗರಾಜಪ್ಪ ಗೌರವ ವಂದನೆ ಸ್ವೀಕರಿಸಿದರು. ಪೊಲೀಸ್ ಕಲ್ಯಾಣ ನಿಧಿಗಾಗಿ ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಲಾಯಿತು. ಪ್ರೊಬೆಷನರಿ ಐಪಿಎಸ್ ಅಧಿಕಾರಿ ಡಾ. ಭೀಮಶಂಕರ ಗುಳೇದ ಅವರು ಕವಾಯತು ಕಮಾಂಡೆಂಟ್ ಆಗಿ ತಂಡಗಳನ್ನು ಮುನ್ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.