ಕಾಂಗ್ರೆಸ್- ಜೆಡಿಎಸ್ ವಿರುದ್ಧ ತಿರುಗಿಬಿದ್ದ ಬಿಜೆಪಿ
ಕ.ಪ್ರ. ವಾರ್ತೆ, ಶಿವಮೊಗ್ಗ, ಏ.3
ಭ್ರಷ್ಟಾಚಾರ ವಿಚಾರದಲ್ಲಿ ಪದೇ ಪದೇ ತಮ್ಮ ಪಕ್ಷದ ಮುಖಂಡರು ಹಾಗೂ ಅಭ್ಯರ್ಥಿಯ ವಿರುದ್ಧ ಆರೋಪ ಮಾಡುತ್ತಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದಿರುವ ಬಿಜೆಪಿ, ತನ್ನ ಪ್ರಶ್ನೆಗೆ ಉತ್ತರಿಸುವಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ಸವಾಲೆಸೆದಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ 2 ಪಕ್ಷಗಳ ಮುಖಂಡರಿಗೆ ಪ್ರಶ್ನೆಗಳ ಸುರಿಮಳೆಗೈದರು.
ಸಾಗರದ ತೀ.ನಾ.ಶ್ರೀನಿವಾಸ್ ಮತ್ತಿತರರು ನಮ್ಮ ಪಕ್ಷದ ಸಭಾಪತಿ ಶಂಕರಮೂರ್ತಿ, ಈಶ್ವರಪ್ಪ, ಯಡಿಯೂರಪ್ಪ ಎಲ್ಲರ ಬಗ್ಗೆಯೂ ಮಾತನಾಡಿದ್ದಾರೆ. ಕಾಗೋಡು ಗೌರವಯುತ ಸ್ಪೀಕರ್ ಸ್ಥಾನದಲ್ಲಿರುವುದರಿಂದ ಟೀಕೆ ಮಾಡುವುದಿಲ್ಲ. ಆದರೆ ನಮ್ಮ ಪಕ್ಷವನ್ನು ಟೀಕಿಸಿದವರು ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ನೀಡಲಿ ಎಂದು ಸವಾಲು ಹಾಕಿದರು.
ಮಧುಗೆ ಸವಾಲ್: ಅದೇ ರೀತಿ ಮಧು ಬಂಗಾರಪ್ಪನವರೂ ಸಹ ತಮ್ಮ ಹಾಗೂ ತಮ್ಮ ಪಕ್ಷದ ಮುಖಂಡರ ಬಗ್ಗೆ ಸ್ಪಷ್ಟ ಉತ್ತರ ನೀಡಲಿ ಎಂದು ಸವಾಲೆಸೆದರು.
ಚುನಾವಣಾ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಮುಂದೆ ಏನು ಮಾಡುತ್ತೇವೆ, ಹಿಂದೆ ಜಿಲ್ಲೆಯ ಅಭಿವೃದ್ಧಿಗೆ ಏನು ಮಾಡಿದ್ದೇವೆ ಎಂದು ಜನರಿಗೆ ಮನವರಿಕೆ ಮಾಡುವ ಬದಲು, ಕಾಂಗ್ರೆಸ್ ಮತ್ತು ಜೆಡಿಎಸ್ ಬಂಡವಾಳವಿಲ್ಲದ ಆರೋಪ ಮಾಡುವುದರಲ್ಲೇ ಕಾಲ ಕಳೆಯುತ್ತಿವೆ ಎಂದು ಲೇವಡಿ ಮಾಡಿದರು.
ಸಾಧನೆ ಪ್ರಕಟಿಸಿ: ಕಾಂಗ್ರೆಸ್ನಿಂದ ಈ ಜಿಲ್ಲೆಯವರು ಸಂಸದರು, ಮುಖ್ಯಮಂತ್ರಿ, ಸಭಾಪತಿ ಎಲ್ಲರೂ ಆಗಿ ಹೋಗಿದ್ದಾರೆ. ಆದರೂ ಅವರು ಏನು ಮಾಡಿದ್ದಾರೆ ಎಂಬುದನ್ನು ಪ್ರಕಟಿಸುತ್ತಲೇ ಇಲ್ಲ. ಅವರ ಬಳಿ ಹೇಳಿಕೊಳ್ಳಲಿಕ್ಕೆ ಏನೂ ಇಲ್ಲ. ಭ್ರಷ್ಟಾಚಾರದ ವಿಚಾರದಲ್ಲಿ ಮಾತನಾಡುವ ಇವರು ಕನ್ನಡಿ ಮುಂದೆ ನಿಂತು ತಮ್ಮ ಮುಖವನ್ನೊಮ್ಮೆ ನೋಡಿಕೊಂಡು ಮಾತನಾಡಲಿ ಎಂದು ಸಲಹೆ ನೀಡಿದರು.
ರಾಜ್ಯ ಉಪಾಧ್ಯಕ್ಷ ರಾಮರಾವ್ ರಾಯ್ಕರ್, ಪ್ರಮುಖರಾದ ದತ್ತಾತ್ರಿ, ಡಿ.ಎಸ್. ಅರುಣ್, ಬಸವರಾಜಪ್ಪ, ಮಹೇಂದ್ರನಾಥ್, ಅಣ್ಣಪ್ಪ, ಮಧುಸೂಧನ್ ಮತ್ತಿತರರು ಇದ್ದರು.
ಕಾಂಗ್ರೆಸ್ಗೆ ಪ್ರಶ್ನೆಗಳು...
ಈ ಹಿಂದೆ ಕಾಗೋಡು ನೀಡಿದ್ದ ಚೆಕ್ ಬೌನ್ಸ್ ಪ್ರಕರಣ ಆಯಿತು ಹೌಸಿಂಗ್ ಬೋರ್ಡ್ ಅಧ್ಯಕ್ಷರಾಗಿದ್ದಾಗ ಆರೆಸ್ಟ್ ಆಗುವ ಪರಿಸ್ಥಿತಿ ಯಾಕೆ ನಿರ್ಣಾಣವಾಗಿತ್ತು. ಹಿಂದೆ ಆಶ್ರಯ ಹಗರಣ ರಾಜ್ಯದಲ್ಲಿ ನಡೆದಾಗ ಸರ್ಕಾರದ ಭಾಗವಾಗಿದ್ದವವರು ಯಾರು ಪ್ರಧಾನಿಯಾಗಿದ್ದ ನರಸಿಂಹರಾಯರಿಂದ ಜನಾರ್ಧನ ಪೂಜಾರಿ ಅವರು ಪತ್ರ ತಂದು ಬಂಗಾರಪ್ಪ ಅವರನ್ನೇ ಪದಚ್ಯುತಗೊಳಿಸಿದ್ದು ಯಾಕೆ, ಕಾಂಗ್ರೆಸ್ ಇತಿಹಾಸದಲ್ಲಿ ಭ್ರಷ್ಟಾಚಾರ ಆರೋಪದ ಮೇರೆಗೆ ವಜಾಗೊಂಡ ಮೊದಲ ಮುಖ್ಯಮಂತ್ರಿ ಬಂಗಾರಪ್ಪನವರು ಅಲ್ಲವೇ.
ಯಲಹಂಕದಲ್ಲಿ ಹೌಸಿಂಗ್ ಬೋರ್ಡ್ನಿಂದ ಬಡವರಿಗಾಗಿ ಕಟ್ಟಿದ್ದ ಮನೆಗಳು ಎರಡೇ ವರ್ಷದಲ್ಲಿ ಕುಸಿದು ಬೀಳಲು ಆರಂಭಿಸಿದ್ದವು. ಆಗ ನೂರಾರು ಕೋಟಿ ರೂಪಾಯಿ ನಷ್ಟ ಸಂಭವಿಸಿತ್ತು. ಅಂದಿನ ಸಿಎಂ ವೀರಪ್ಪ ಮೊಯ್ಲಿ ತಮ್ಮದೇ ಪಕ್ಷದ ಮಾಜಿ ಮುಖ್ಯಮಂತ್ರಿ ವಿರುದ್ಧ ಸಿಬಿಐ ತನಿಖೆಗೆ ಆದೇಶ ನೀಡಿದ್ದರು. ಕಾಂಗ್ರೆಸ್ ಆಡಳಿತದಲ್ಲೇ ಕಾಂಗ್ರೆಸ್ ನಾಯಕನ ವಿರುದ್ಧ ತನಿಖೆ ನಡೆದಿದ್ದು ಯಾಕೆ, ಆ ಸಂದರ್ಭದಲ್ಲಿ ಮೊಯ್ಲಿ ಅವರನ್ನು ಬಂಗಾರಪ್ಪ ಬೆಂಬಲಿಗರು ಶಾಸಕಾಂಗ ಸಭೆಯಲ್ಲೇ ಅಟ್ಟಾಡಿಸಿದ್ದು ಯಾಕೆ. ಕಾಂಗ್ರೆಸ್ ನಾಯಕರನ್ನು ಸಿಬಿಐನವರು ಒಳ ಉಡುಪಿನಲ್ಲಿ ಕೂರಿಸಿ ತನಿಖೆ ಮಾಡಿದ್ದು ಏಕೆ...
ಜೆಡಿಎಸ್ಗೆ ಪ್ರಶ್ನೆ
ಮಾಜಿ ಸಿಎಂ ಕುಮಾರಸ್ವಾಮಿ ಆಸ್ತಿ 2004ರಲ್ಲಿ 3.5 ಕೋಟಿ ರು. ಇದ್ದದ್ದು, 2008ರಲ್ಲಿ 53 ಕೋಟಿ ರು. ಆಯ್ತು. ಈಗ 300 ಕೋಟಿಗೆ ಏರಿಕೆ ಆಗಿದ್ದು ಹೇಗೆ ಅವರ ಪತ್ನಿ ಅನಿತಾ ಕುಮಾರಸ್ವಾಮಿ 2008ರಲ್ಲಿ 39 ಕೋಟಿ ರು. ಆಸ್ತಿ ಘೋಷಿಸಿದ್ದರು. ಕಳೆದ ಬಾರಿ ಸ್ಪರ್ಧಿಸಿದ್ದಾಗ 123 ಕೋಟಿ ರು.ಗಳಾಗಿದೆ. ಈ ನಾಯಕರ ಬಡತನ ನಿರ್ಮೂಲನೆಯ ಕಥೆಯನ್ನು ಸ್ವಲ್ಪ ಹೇಳಲಿ.
ಮಧು ಬಂಗಾರಪ್ಪ ನಿಂತಿರುವ ಶರಾವತಿ ಡೆಂಟಲ್ ಕಾಲೇಜಿನ ನೆಲಗಟ್ಟೇ ಭ್ರಷ್ಟಾಚಾರದಲ್ಲಿದೆ. ಅದರ ಬಗ್ಗೆ ಅವರ ಸಮಾಜದವರೇ ಮಾತನಾಡುತ್ತಿದ್ದಾರೆ. ಕಾಲೇಜಿನ ಜಾಗವನ್ನು ಮೊದಲು ಹೌಸಿಂಗ್ ಬೋರ್ಡ್ಗಾಗಿ ಎಂದು ಹೇಳಿ ರೈತರಿಂದ 75 ಸಾವಿರ ಮತ್ತು 1 ಲಕ್ಷ ರು. ಒಂದು ಎಕರೆ ಜಮೀನು ಖರೀದಿಸಲಾಗಿತ್ತು. ನಂತರ ಹೌಸಿಂಗ್ ಬೋರ್ಡ್ ಆ ಜಾಗ ಬೇಡ ಎಂದಿತು. ಆಗ ಡೆಂಟಲ್ ಕಾಲೇಜು ಟ್ರಸ್ಟ್ ಹೆಸರಿನಲ್ಲಿ ಜಮೀನಿಗಾಗಿ ಅರ್ಜಿ ಸಲ್ಲಿಸಲಾಯಿತು. ನಂತರ ಅದು ಮಂಜೂರಾಗಿಯೂ ಹೋಯಿತು. ಅದರ ಹಿಂದಿನ ಕಥೆ ಹೇಳಲಿ.
ಜೆಡಿಎಸ್ ನಾಯಕರು ಶಾಖಾಂಬರಿ ಎಂಟರ್ಪ್ರೈಸಸ್ ಬಗ್ಗೆಯೂ ಹೇಳುತ್ತಾರಾ, ಬಿಎಸ್ಕೆ ಟ್ರೇಡಿಂಗ್ ಯಾವುದು ಎಂದು ಹೇಳುತ್ತಾರಾ ಕವಿತಾ ಬಾಲಕೃಷ್ಣ ಕೆಆರ್ ಪುರಂ ಹೋಬಳಿಯಲ್ಲಿ 232 ಎಕರೆ ಜಮೀನು ಖರೀದಿಯಲ್ಲಿ ಎರಡು ರೀತಿಯ ವಿಳಾಸ ತೋರಿಸಿದ ಬಗ್ಗೆ ಮಾತನಾಡುತ್ತಾರಾ ದೇವೇಗೌಡರ ಕುಟುಂಬದ ಮೇಲೆ ದಾಳಿ ಮಾಡಿದಾಗ ಪೊಲೀಸ್ ಗಾಂವಕರ್ ಅವರಿಗೆ ಬೆದರಿಕೆ ಹಾಕಿದ ಇತಿಹಾಸ ಹೇಳುತ್ತಾರಾ, ಶಂಕರ ಬಿದರಿ ಸಿಒಡಿಯಲ್ಲಿದ್ದಾಗ ಅವರಿಗೆ ಧಮ್ಕಿ ಹಾಕಿದ್ದು ಯಾಕೆ ಎಂದು ಹೇಳುತ್ತಾರಾ.
ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಕೃಷ್ಣ ಅವರು ಜೈಲಿಗೆ ಹೋಗಿದ್ದು ಯಾಕೆ, ಹೂವಿನ ಹಡಗಲಿಯಿಂದ ಕಪ್ಪತ್ತಗುಡ್ಡದವರೆಗೆ 250 ಕಿಮೀ ಗಾಳ ವಿದ್ಯುತ್ ಯಂತ್ರಗಳನ್ನು ಹೂಡಿರುವ ಸುಜಲಾನ್ ಕಂಪನಿಯ ಬಗ್ಗೆ ಇತಿಹಾಸದ ಬಗ್ಗೆ ಏನು ಹೇಳುತ್ತಾರೆ ಉಳುವವನೇ ಹೊಲದೊಡೆಯ ಜಾರಿಗೆ ಬಂದಾಗ ಪಡೆದುಕೊಂಡ ಜಮೀನು ಎಷ್ಟು ಎಂದು ಮಧು ಬಂಗಾರಪ್ಪ ಉತ್ತರ ನೀಡಲಿ ಎಂದು ಸವಾಲೆಸೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

