ಬದುಕು ಕಟ್ಟಿಕೊಡುವ ಕಾರ್ಯಕ್ಕೆ ಆದ್ಯತೆ ಅಗತ್ಯ: ರಾಘವೇಶ್ವರಶ್ರೀ
ಕ.ಪ್ರ.ವಾರ್ತೆ , ಹೊಸನಗರ , ಏ. 4
ಮತ್ತೊಬ್ಬರ ಜೀವನದಲ್ಲಿ ದೀಪ ಬೆಳಗಿಸಿ ಬದುಕು ಕಟ್ಟಿ ಕೊಡುವ ಪುಣ್ಯ ಕಾರ್ಯವಾಗಬೇಕು ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಶ್ರೀಮಠದಲ್ಲಿ ನಡೆಯುತ್ತಿರುವ ಜಯನಾಮ ಸಂವತ್ಸರ ರಾಮೋತ್ಸವ ಸಂದರ್ಭ ಆಯೋಜಿಸಿದ್ದ ಶ್ರೀಗಳ ಸನ್ಯಾಸ ಗ್ರಹಣದ ದಿನದ ವಿಶೇಷ ಆಚರಣೆ ಜೀವನದಾನ ಕಾರ್ಯಕ್ರಮದಲ್ಲಿ ಅಪಘಾತದಲ್ಲಿ ವಿಕಲಾಂಗನಾದ ಕುಮುಟಾ ಕೂಜಳ್ಳಿ ರಾಜೇಶ್ ನಾರಾಯಣ ಭಟ್ ಅವರಿಗೆ ಜೀವನ ಅಭಯ ನೀಡಿ ನಂತರ ಆಶೀರ್ವಚನ ನೀಡಿದರು.
ಬೇರೆಯವರ ಜೀವನ ಆರಿ ಹೋಗುವ ಮುನ್ನ ನಾವು ದೀಪ ಹೊತ್ತಿಸಿ ಸಂಭ್ರಮಪಟ್ಟರೆ ನಮ್ಮ ಹುಟ್ಟುಹಬ್ಬ ಸಾರ್ಥಕ ಕ್ಷಣ ಅನುಭವಿಸಿದಂತೆ. ಬದುಕನ್ನು ಪಡೆದಿರುವ ದಿನವನ್ನು ಇನ್ನೊಬ್ಬರಿಗೆ ಬದುಕು ಕೊಟ್ಟು ಆಚರಿಸಬೇಕು ಎಂದ ಅವರು, ಅದಕ್ಕಾಗಿ ತಮ್ಮ ಸಂನ್ಯಾಸ ಗ್ರಹಣ ದಿನವನ್ನು ಆರ್ತರ ಕಣ್ಣೀರು ಒರೆಸುವ ದಿನವನ್ನಾಗಿ ಸ್ವೀಕರಿಸಲಾಗಿದೆ. ಇದು ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು. ಲೋಕಕ್ಕೆ ಮಾದರಿಯಾಗಬೇಕು ಎಂದರು.
ಲೋಕ ಸೇವೆ ಎನ್ನುವುದು ರಾಮ ಸೇವೆ ಇದ್ದಂತೆ. ಹಾಗೆ ರಾಮ ಸೇವೆಯೂ ಕೂಡ ಲೋಕ ಸೇವೆಯೇ ಸರಿ. ಸಂಸಾರ ಎಂಬ ಮುಳ್ಳಿನಲ್ಲಿ ಸಿಲುಕಿರುವವರನ್ನು ಮುಳ್ಳಿನ ಪೊದೆಯಿಂದ ನೋವಾಗದಂತೆ ದಾಟಿಸಿ ಸಮಾಜ ಊರುಗೋಲಾಗಬೇಕು ಎಂದರು.
ಈ ಸಂದರ್ಭ ಪುನರ್ನವ ಸಮಿತಿ ಕಾರ್ಯಾಧ್ಯಕ್ಷ ಎಲ್.ಎನ್. ಕೂಡೂರು, ರಾಮೋತ್ಸವ ಸಮಿತಿಯ ರಾಜಶೇಖರ್ ಹೆಬ್ಬಾರ್, ಸಂಪೆಕಟ್ಟೆ ಕುಮಾರ್, ಪರಿಕಲ್ಪನೆಯ ಆರ್.ಡಿ. ಶಾಸ್ತ್ರಿ, ಹವ್ಯಕ ಮಹಾಮಂಡಲದ ಮಾತೃ ವಿಭಾಗದ ಮುಖ್ಯಸ್ಥೆ ಈಶ್ವರ ಬೇರ್ಕಾಡವು, ಶಾರದಕ್ಕ, ವಡ್ಡಿನಬೈಲು ವೆಂಕಟೇಶ್, ಐಸಿರಿ ಗುರುಪ್ರಸಾದ್ ಇದ್ದರು.
ಪತ್ರಕರ್ತ ರಮೇಶ್ ಹೆಗಡೆ ನಿರೂಪಿಸಿ, ಜಟ್ಟಿಮನೆ ಗಣಪತಿಭಟ್ ವಂದಿಸಿದರು. ನಂತರ ಆರ್.ಡಿ. ಶಾಸ್ತ್ರಿಗಳ ಪರಿಕಲ್ಪನೆಯಲ್ಲಿ ನಿಸರಾಣಿ ರಾಮಚಂದ್ರ, ಮೂಡಂಬೈಲು ಶಾಸ್ತ್ರಿ, ಪ್ರಭಾಕರ್ ಜೋಷಿ, ನಾರಾಯಣ ಯಾಜಿ, ಮತ್ತು ಲಕ್ಷ್ಮೀಶ್ ತೋಳ್ಪಡಿತ್ತಾಯರವರು ರಾಮಾಯಣದಲ್ಲಿ ಬರುವ ಪಾತ್ರಗಳ ಆತ್ಮ ನಿವೇದನಾ ವಿಶಿಷ್ಟ ಕಾರ್ಯಕ್ರಮ ನಡೆಸಿಕೊಟ್ಟರು. ಮೈಸೂರು ಅಂಧರ ಶಾಲಾ ವಿದ್ಯಾರ್ಥಿಗಳು ಭರತನಾಟ್ಯ ಹಾಗೂ ಹಾಸ್ಯ ನಟ ಚಪ್ಪರಮನೆ ಶ್ರೀಧರ ಹೆಗಡೆ ನೇತೃತ್ವದಲ್ಲಿ ಮಂಥರೆ ಎನ್ನುವ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಅಡಕೆ ತುಲಾಭಾರ: ಏ.5ರ ಬೆಳಗ್ಗೆ 11 ಗಂಟೆಗೆ ರಾಘವೇಶ್ವರ ಸ್ವಾಮಿಗಳ ಅಡಕೆ ತುಲಾಭಾರ ಕಾರ್ಯಕ್ರಮ ನೆರವೇರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

