ಶಿವಮೊಗ್ಗ

ಹೋರಾಟದಿಂದ ನ್ಯಾಯ ಕೊಡಿಸುವೆ

Published On :

ಕ.ಪ್ರ.ವಾರ್ತೆ ,  ಸಾಗರ ,  ಏ. 4
ಹೋರಾಟದ ಮೂಲಕವೇ ರಾಜಕೀಯಕ್ಕೆ ಬಂದಿರುವ ನಾನು ಮುಂದೆ ಹೋರಾಟದ ಮೂಲಕ ಜನರಿಗೆ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ತಾಲೂಕಿನ ತ್ಯಾಗರ್ತಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ನಾನು ಜಾತಿಮತಪಂಥಗಳ ಹಿಂದೆ ಹೋಗದೆ ಮನುಷ್ಯ ಜಾತಿ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದೇನೆ. ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಹಲವು ಯೋಜನೆಗಳು ಎಲ್ಲಾ ವರ್ಗದ ಜನರ ಹಿತ ಕಾಯುವ ಯೋಜನೆಗಳಾಗಿವೆ ಎಂದು ಹೇಳಿದರು.
ಜನಸ್ನೇಹಿ ಯೋಜನೆ: ಹಿಂದೆ ಸರ್ಕಾರ ನಡೆಸಿದವರಿಗೆ ಭಾಗ್ಯಲಕ್ಷ್ಮೀ, ರೈತರ ಸಾಲಮನ್ನಾ, ಸಂಧ್ಯಾ ಸುರಕ್ಷಾ ಯೋಜನೆ, ಬೆಳೆವಿಮೆ, ತುರ್ತು ಸೇವೆಗಾಗಿ 108 ವಾಹನ, ಅಂಗವಿಕಲರಿಗೆ, ವೃದ್ಧರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಅನಿಸಿರಲಿಲ್ಲವೇ ಎಂದವರು ಪ್ರಸ್ನಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೆ ಬಂದ ಈ ಎಲ್ಲ ಯೋಜನೆಗಳು ಎಲ್ಲ ವರ್ಗದ ಜನರನ್ನು ತಲುಪಿದೆ. ಜಿಲ್ಲೆಯಲ್ಲಿ ಅರಣ್ಯಹಕ್ಕು ಕಾಯ್ದೆ ಹಾಗೂ ಬಗರ್ ಹುಕುಂ ಸಕ್ರಮ ಬಗ್ಗೆ ಹೆಚ್ಚಿನ ನಿಗಾ ವಹಿಸುವ ಉದ್ದೇಶ ನನ್ನದಾಗಿದೆ. ಅರಣ್ಯಹಕ್ಕು ಹಾಗೂ ಬಗರ್ ರೈತರ ಸಮಸ್ಯೆ ತಿಳಿಸಿ ಅದಕ್ಕೆ ತಿದ್ದುಪಡಿ ತರುವ ಕೆಲಸ ಖಂಡಿತಾ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕೈ ಬಲಪಡಿಸಿ: ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ದೇಶಕ್ಕೆ ನರೇಂದ್ರ ಮೋದಿಯವರ ಸಮರ್ಥ  ನಾಯಕತ್ವದ ಅಗತ್ಯವಿದೆ. ಯಡಿಯೂರಪ್ಪ ಅವರನ್ನು ಆಯ್ಕೆ ಮಾಡುವ ಮೂಲಕ ಮೋದಿಯವರ ಕೈ ಬಲಪಡಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಜನರು ಕಾಂಗ್ರೆಸ್ಸಿನ ದುರಾಡಳಿತದಿಂದ ಬೇಸತ್ತು ಹೋಗಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಅಸ್ತಿತ್ವ ಅಳಿಸಿ ಹಾಕಲು ದೊರಕಿರುವ ಅವಕಾಶವನ್ನು ಮತದಾರರು ಸದ್ಬಳಕೆ  ಮಾಡಿಕೊಳ್ಳಬೇಕು ಎಂದರು.
ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಯಡಿಯೂರಪ್ಪನವರಿಗೆ ಜಿಲ್ಲೆಯ ಸಮಸ್ಯೆ ಬಗ್ಗೆ ಸಮಗ್ರ ಅರಿವಿದೆ. ಅನುಭವ ಇಲ್ಲದ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ದೆಹಲಿಗೆ ಪ್ರವಾಸ ಹೋಗಿ ಬರಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ಮೋದಿ ಹವಾದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಎದೆಯಲ್ಲಿ ಸೋಲಿನ ಭೀತಿ ಕಾಡುತ್ತಿದ್ದು, ಅನಗತ್ಯ ಟೀಕೆಗೆ ಇಳಿದಿದ್ದಾರೆ ಎಂದರು.
ಮಾಜಿ ಸಚಿವ ಎಚ್.ಹಾಲಪ್ಪ, ಯು.ಎಚ್. ರಾಮಪ್ಪ, ಚೇತನರಾಜ್, ಕೆ. ಅರುಣ ಪ್ರಸಾದ್, ಬಿ.ಆರ್. ಜಯಂತ್, ಟಿ.ಡಿ. ಮೇಘರಾಜ್, ಕಲಸೆ ಚಂದ್ರಪ್ಪ, ಟಿ.ವಿ. ಪಾಂಡುರಂಗ, ಸೋಮಶೇಖರ ವೀರಾಪುರ, ನಾಗರಾಜ್ ಟಿ., ತ್ಯಾಗರ್ತಿ ಕೃಷ್ಣಮೂರ್ತಿ, ಸುಬ್ಬಣ್ಣ ನೀಚಡಿ, ನಾಗರಾಜ ಕಳ್ಳಿಮಟ್ಟಿ, ರಘುಪತಿ, ದಾಮೋದರ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.