ಶಿವಮೊಗ್ಗ

ತಂಗಿ ವಿರುದ್ಧವೇ ಪ್ರಚಾರ ದೀಕ್ಷೆ ತೊಟ್ಟ ಕುಮಾರ ಬಂಗಾರಪ್ಪ

Published On :

ಶಿವಮೊಗ್ಗ: ಕುಮಾರನ ಸಿಟ್ಟು ಮೇರೆ ಮೀರಿದೆ. ನೇರ ಅಖಾಡಕ್ಕೆ ಧುಮುಕಿದ್ದಾರೆ. ಕಾಂಗ್ರೆಸ್ ಪಕ್ಷದ ಅಪೇಕ್ಷೆಯಂತೆ ಪ್ರಚಾರಕ್ಕೂ ಬಂದಿದ್ದಾರೆ. ಆದರೆ, ಅವರ ಆಕ್ರೋಶ ಯಾರ ವಿರುದ್ಧ ಇದರ ಫಲಾನುಭವಿಗಳು ಯಾರಾಗಲಿದ್ದಾರೆ, ಕುಮಾರನ ರೋಷಾಗ್ನಿ ಜ್ವಾಲೆಯು ಯಾರನ್ನು ಆಹುತಿ ತೆಗೆದುಕೊಳ್ಳಲಿದೆ- ಈ ಪ್ರಶ್ನೆಗಳು ಕಾಂಗ್ರೆಸ್ ಮುಖಂಡರ ನೆತ್ತಿಯನ್ನು ಬಿಸಿ ಮಾಡುತ್ತಿವೆ.
ಏಕೆಂದರೆ ಚುನಾವಣೆ ಘೋಷಣೆಯಾದ ನಂತರ ಮೊಟ್ಟಮೊದಲ ಬಾರಿ ಶನಿವಾರ ನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿ ಪತ್ರಿಕಾಗೋಷ್ಠಿ ಮಾಡಿದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅಪ್ಪಿತಪ್ಪಿಯೂ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಅವರ ಹೆಸರೆತ್ತಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮತ ಯಾಚಿಸುತ್ತೇನೆ ಎಂದರೇ ಹೊರತು, ಮಂಜುನಾಥ ಭಂಡಾರಿ ಅವರಿಗೆ ಜನತೆ ಮತ ನೀಡಬೇಕು ಎಂದು ಹೇಳಲಿಲ್ಲ.
ಕಾಂಗ್ರೆಸ್ ಪರ ಪ್ರಚಾರ: ನೀವು ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡುತ್ತೀರೋ, ಅಭ್ಯರ್ಥಿ ಪರ ಮತ ಯಾಚಿಸುತ್ತೀರೋ ಎಂದು ಪ್ರಶ್ನೆ ಕೇಳಿದಾಗ ಕಿಡಿಕಿಡಿಯಾದ ಅವರು, ಕಾಂಗ್ರೆಸ್ ಪರ ಪ್ರಚಾರ ಮಾಡುತ್ತೇನೆ ಎಂದರೆ ಅದು ಅಭ್ಯರ್ಥಿ ಪರ ಎಂದೂ ಅರ್ಥವಲ್ಲವೇ, ಇದೆಂಥ ಪ್ರಶ್ನೆ ಎಂದು ಸಿಡುಕಿದರು. ಒಂದು ಕಾಲದಲ್ಲಿ ನಾಯಕ ನಟರಾಗಿದ್ದ ಕುಮಾರ್ ಬಂಗಾರಪ್ಪ ಅವರ 'ಅಶ್ವಮೇಧ' ಹಿಟ್ ಚಿತ್ರದಲ್ಲಿ ಬಂದ 'ಹೃದಯ ಸಮುದ್ರ ಕಲಕಿ' ಹಿಟ್ ಗೀತೆಗೆ ದನಿಯಾಗಿದ್ದವರು ಡಾ. ರಾಜ್‌ಕುಮಾರ್. ಆಕಾಶವೇ ಮೇಲ್ಬೀಳಲಿ, ಭೂತಾಯಿಯೇ ಬಾಯ್ಬಿರಿಯಲಿ, ದಿಟ್ಟ ಹೆಜ್ಜೆ ಇಟ್ಟು ಯಜ್ಞ ದೀಕ್ಷೆ ತೊಟ್ಟು ನಡೆಸುವೆ ಅಶ್ವಮೇಧ... ಎಂದು ಅದ್ಭುತವಾಗಿ ಹಾಡಿದ್ದರು. ಕುಮಾರ್ ನಟನೆಯೂ ಆಕ್ರೋಶಭರಿತವಾಗಿತ್ತು.
ಯಜ್ಞ ದೀಕ್ಷೆ: ಈಗ ಈ ಚುನಾವಣೆಯ ಮಹಾಯುದ್ಧದಲ್ಲಿ ಕುಮಾರ್ ಅವರು ಸ್ವತಃ ಅವರ ತಂಗಿ, ರಾಜ್‌ಕುಮಾರ್ ಅವರ ಸೊಸೆ ಗೀತಾ ಶಿವರಾಜಕುಮಾರ್ ಅವರ ವಿರುದ್ಧವೇ ಯಜ್ಞ ದೀಕ್ಷೆ ತೊಟ್ಟಿದ್ದಾರೆ.
ಶನಿವಾರದ ಅವರ ಪತ್ರಿಕಾಗೋಷ್ಠಿಯು ಕುಮಾರ್ ಅವರ ಮುಖ್ಯ ಗುರಿ ಗೀತಾ ಶಿವರಾಜಕುಮಾರ್ ಅವರನ್ನು ಸೋಲಿಸುವುದೇ ಎಂದು ಸ್ಪಷ್ಟವಾಗಿ ಬಿಂಬಿಸಿತು. ಅದರ ಲಾಭ ಯಾವ ಪಕ್ಷಕ್ಕೆ ಸಿಕ್ಕರೇನು, ಕುಮಾರ್ ಲೆಕ್ಕಕ್ಕಿಟ್ಟಂತೆ ಕಾಣುತ್ತಿಲ್ಲ.
ತಂತ್ರವೇನು?: ಈಡಿಗ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಪ್ರಚಾರ ಮಾಡುತ್ತಿರುವ ಸಹೋದರ, ಜೆಡಿಎಸ್ ಶಾಸಕ ಮಧು ಬಂಗಾರಪ್ಪ ಹಾಗೂ ಅಭ್ಯರ್ಥಿ ಗೀತಾ ಅವರು ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂಬುದು ಕುಮಾರ್ ಆಕ್ರೋಶ. ಇದಕ್ಕೆ ಅಕ್ಕ- ತಂಗಿಯರು, ಭಾವಂದಿರು ಕೈಜೋಡಿಸಿದ್ದಾರೆ ಎಂಬುದು ಇವರ ರೋಷಾಗ್ನಿ ಜ್ವಾಲೆಗೆ ತುಪ್ಪ ಸುರಿದಿದೆ.
ಹಾಗಾಗಿ ಇವರು ಇದೇ ಜಾಗದಲ್ಲಿ ಸುತ್ತಾಟ ನಡೆಸಲು ತೀರ್ಮಾನಿಸಿದ್ದಾರೆ. ಶಿವಮೊಗ್ಗದಲ್ಲಿರುವ ಶರಾವತಿ ಡೆಂಟಲ್ ಕಾಲೇಜು ಈಡಿಗ ಸಮಾಜದ ಆಸ್ತಿ. ಇದನ್ನು ಮಧು ಬಂಗಾರಪ್ಪ ಸ್ವಂತ ಆಸ್ತಿ ಮಾಡಿಕೊಂಡಿದ್ದಾರೆ ಎಂಬುದು ಇವರ ಆರೋಪ. ಇದೇ ವಿಷಯವನ್ನು ಮುಂದಿಟ್ಟುಕೊಂಡು ಈಡಿಗ ಸಮುದಾಯವನ್ನು ಜೆಡಿಎಸ್ ಪಕ್ಷದಿಂದ ವಿಮುಖಗೊಳಿಸಲು ಮುಂದಾಗಿದ್ದಾರೆ. ಆದರೆ, ಯಾವ ದಿಕ್ಕಿನತ್ತ?
ಕಾಂಗ್ರೆಸ್ ತಲೆಬಿಸಿ: ಇದೇ ಪ್ರಶ್ನೆ ಕಾಂಗ್ರೆಸ್ ಮುಖಂಡರ ತಲೆಬಿಸಿ ಮಾಡಿದೆ. ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡಿ ಎಂದು ಕೇಳಲು ಹೊರಟಿರುವ ಕುಮಾರ್ ಬಂಗಾರಪ್ಪರಿಗೆ ತಮಗೆ ಟಿಕೆಟ್ ಸಿಗದ ಅಸಮಾಧಾನ ಇನ್ನೂ ಆರಿಲ್ಲ ಎಂಬುದನ್ನು ತಿಳಿದಿರುವ ಮುಖಂಡರು ಕುಮಾರ್ ರೋಷಾಗ್ನಿಯ ಲಾಭವನ್ನು ಕಾಂಗ್ರೆಸ್ ಅಭ್ಯರ್ಥಿ ಪರ ಮಾಡಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ನಮಗುಳಿದಿರುವುದು ಇದೊಂದೇ ದಾರಿ ಎಂದು ಹೆಸರು ಹೇಳಲಿಚ್ಛಿಸದ ಮುಖಂಡರೊಬ್ಬರು “OÚ«Ú­sÚ®ÚúڒOæQ ಹೇಳಿದರು.
ಕುಮಾರ್ ಬಂಗಾರಪ್ಪ ಅವರು ಚುನಾವಣಾ ಪ್ರಚಾರಕ್ಕೆ ಧುಮುಕಿರುವುದಕ್ಕೆ ಯಾರಾದರೂ ಸಂತಸದಿಂದಿದ್ದರೆ ಅವರು ಬಿಜೆಪಿ ಮುಖಂಡರು ಮಾತ್ರ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವಿನ ಈ ವಾಕ್ಸಮರದಿಂದ ಲಾಭವಾಗುವುದು ನಮಗೇ ಎಂದುಕೊಂಡಿದ್ದಾರೆ.
ಆದರೆ, ಚುನಾವಣೆಗಿನ್ನೂ ಡಜನ್ ದಿನಗಳು ಬಾಕಿ ಇವೆ. ಮತದಾರ ಎಲ್ಲವನ್ನೂ ನೋಡುತ್ತಿದ್ದಾನೆ. ಫಲಿತಾಂಶ ಇನ್ನೂ ಅವರ ಮನಸಿನೊಳಗೇ ಇದೆ.


-ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.