ಶಿವಮೊಗ್ಗ

24 ಗಂಟೆ ವಿದ್ಯುತ್, ಏರ್ ಆ್ಯಂಬುಲೆನ್ಸ್, ಹೈಟೆಕ್ ಬಂದರು

Published On :

ಕ.ಪ್ರ.ವಾರ್ತೆ , ಚಿಕ್ಕಮಗಳೂರು , ಏ. 5
ದಿನಂಪ್ರತಿ 24 ಗಂಟೆ ವಿದ್ಯುತ್ ಪೂರೈಕೆ...
- ಇದು, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತದಾರರಿಗೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಗಳೊಂದು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಅವರು ಕ್ಷೇತ್ರದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು.
ಗುಜರಾತ್ ಮಾದರಿಯಲ್ಲಿ ಹೊಸ ವಾಣಿಜ್ಯ ಬಂದರಿನ ಅಭಿವೃದ್ಧಿ, ಬಂದರು ಆಧಾರಿತ ಮುಕ್ತ ವಾಣಿಜ್ಯ ವ್ಯವಸ್ಥೆ ಜಾರಿ. ಹೈಟೆಕ್ ಮಾದರಿಯ ಮೀನುಗಾರಿಕಾ ಬಂದರಿನ ಅಭಿವೃದ್ಧಿ, ಮೀನುಗಾರಿಕಾ ವಿಶೇಷ ವಿತ್ತವಲಯ ರಚನೆ, ಮೀನಿನ ಉತ್ಪನ್ನಗಳ ಮೌಲ್ಯವರ್ಧನೆ, ಕಡಲ್ಕೊರೆತ ತಡೆಗೆ ಸಮಗ್ರ ಪರಿಹಾರ.
ನದಿ ಜೋಡಣೆ: ಮಲೆನಾಡಿನಲ್ಲಿ ಹುಟ್ಟಿ ಕರಾವಳಿ ಮೂಲಕ ಪಶ್ಚಿಮಾಭಿಮುಖವಾಗಿ ಹರಿಯುತ್ತಿರುವ ಎಲ್ಲಾ ನದಿಗಳ ಜೋಡಣೆ ಮಾಡುವ ಮೂಲಕ ವಾಟರ್ ಗ್ರೀಡ್ ನಿರ್ಮಾಣ, ಕೃಷಿ ಚಟುವಟಿಕೆಗೆ ಹಾಗೂ ಕೈಗಾರಿಕೆಗಳಿಗೆ ದಿನದ 24 ಗಂಟೆ ನಿರಂತರವಾಗಿ ನೀರು ಪೂರೈಕೆ, ಮಂಗಳೂರು- ಕಾರವಾರದ ನಡುವೆ ಸರ್ವಋತು ಜನ ಮಾರ್ಗದ ಸ್ಥಾಪನೆ. ಉಡುಪಿ- ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಏರ್ ಆ್ಯಂಬುಲೆನ್ಸ್ ಸೇವೆ ಪ್ರಾರಂಭ, ಕೌಶಲ್ಯಾಭಿವೃದ್ಧಿ ಕೇಂದ್ರಗಳ ಸ್ಥಾಪನೆ, ಗೋರಕ್ ಸಿಂಗ್ ವರದಿಯಲ್ಲಿನ ಅಡಕೆ ಬೆಳೆಗಾರರ ಪ್ರೋತ್ಸಾಹಕ ಅಂಶಗಳ ಜಾರಿ, ಅಡಕೆ, ಕಾಫಿ ಮತ್ತು ತೆಂಗು ಬೆಳೆಗಾರರಿಗೆ ವಿವಿಧ ಸಹಕಾರ ಮತ್ತು ಪ್ರೋತ್ಸಾಹ.
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಾದ್ಯಂತ ದಿನಂಪ್ರತಿ 24 ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಕೆ, ವಾರಾಹಿ ಮತ್ತು ಯುಪಿಸಿಎಲ್ ಘಟಕಗಳಿಂದ ಉಭಯ ಜಿಲ್ಲೆಗಳಿಗೆ ಆದ್ಯತೆಯ ಮೇಲೆ ವಿದ್ಯುತ್ ಪೂರೈಕೆಗೆ ಕ್ರಮ. ನರೇಂದ್ರ ಮೋದಿಯವರ ಕನಸಿನ 100 ಸ್ಮಾರ್ಟ್ ಸಿಟಿಗಳ ಯೋಜನೆಯಡಿ ಉಡುಪಿ ಮತ್ತು ಚಿಕ್ಕಮಗಳೂರು ನಗರಗಳ ಸಮಗ್ರ ಅಭಿವೃದ್ಧಿಗೆ ಕ್ರಮ, ಚಿಕ್ಕಮಗಳೂರಿನಲ್ಲಿ ಜಾಗತಿಕ ದರ್ಜೆಯ ವಿಶ್ವವಿದ್ಯಾನಿಲಯ ಸ್ಥಾಪನೆ, ಅಂತಾರಾಷ್ಟ್ರೀಯ ಜ್ಞಾನ ಕೇಂದ್ರವಾಗಿ ಉಡುಪಿಯ ಅಭಿವೃದ್ಧಿ, ಪ್ರವಾಸೋದ್ಯಮಕ್ಕೆ ಆದ್ಯತೆ, ಕರಾವಳಿಯ ಬೀಚ್‌ಗಳ ಅಭಿವೃದ್ಧಿ.
ಮಹಿಳೆಯರು ಹಾಗೂ ಯುವತಿಯರ ರಕ್ಷಣೆಗಾಗಿ ಮೊಬೈಲ್ ಆಧಾರಿತ ವಿಶೇಷ ವ್ಯವಸ್ಥೆ ಜಾರಿ, ಕರಾವಳಿಯ ಭದ್ರತಾ ವ್ಯವಸ್ಥೆಯನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಉನ್ನತೀಕರಿಸಲು ಸಂಕಲ್ಪ, ಮಹಿಳಾ ದೌರ್ಜನ್ಯಕ್ಕೆ ಕಠಿಣ ಶಿಕ್ಷೆ ವಿಧಿಸಲು ಸೂಕ್ತ ಕಾನೂನು ತಿದ್ದುಪಡಿ, ನಕ್ಸಲ್‌ಪೀಡಿತ ಪ್ರದೇಶಗಳ ಅಭಿವೃದ್ಧಿ, ಕರಾವಳಿ ನಿಯಂತ್ರಣ ವಲಯ ಕಾಯ್ದೆಯಲ್ಲಿನ ಎಲ್ಲಾ ಲೋಪದೋಷಗಳ ನಿವಾರಣೆ, ಈ ಕಾಯ್ದೆಯನ್ನು ಜನಸ್ನೇಹಿ ಕಾಯ್ದೆಯನ್ನಾಗಿ ಪರಿವರ್ತನೆ. ವಿಶ್ವ ಪರಂಪರೆಯ ಪಟ್ಟಿಯಿಂದ ಪಶ್ಚಿಮ ಘಟ್ಟ ಹೊರತುಪಡಿಸಲು ಕ್ರಮ, ತನ್ಮೂಲಕ ಚಿಕ್ಕಮಗಳೂರು ಜಿಲ್ಲೆಯ 156 ಕಂದಾಯ ಗ್ರಾಮಗಳ ವ್ಯಾಪ್ತಿಗಳ ಜನರ ಆತಂಕ ನಿವಾರಣೆ.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಲ್ಮರಡಪ್ಪ, ನಿರಂಜನ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮ್ ಕುಮಾರ್, ವಕ್ತಾರ ಎಚ್.ಡಿ. ತಮ್ಮಯ್ಯ, ನಗರಾಧ್ಯಕ್ಷ ವರಸಿದ್ದಿ ವೇಣುಗೋಪಾಲ್, ನಗರಸಭಾಧ್ಯಕ್ಷ ಪುಷ್ಪರಾಜ್, ಕೋಟೆ ರಂಗನಾಥ್, ಬಿ. ರಾಜಪ್ಪ ಉಪಸ್ಥಿತರಿದ್ದರು.
ಪ್ರಣಾಳಿಕೆಯಲ್ಲಿಯೇನಿದೆ?
ಅಡಕೆ ನಿಷೇಧಕ್ಕೆ ತಡೆ, ಅಡಕೆ ಬೆಳೆಗಾರರ ಸಂರಕ್ಷಣೆಗೆ ಕ್ರಮ
ಕಳಸದ ಇನಾಂ ಭೂಮಿ ರೈತರ ಹಿತರಕ್ಷಣೆಗೆ ಬದ್ಧ
ಹಳದಿ ಎಲೆರೋಗ ಪೀಡಿತ ಅಡಕೆ ಬೆಳೆಗಾರರಿಗೆ ಪ್ಯಾಕೇಜ್
ಕಸ್ತೂರಿ ರಂಗನ್ ವರದಿ ಸಡಿಲಗೊಳಿಸಲು ವಿಶೇಷ ಪ್ರಯತ್ನ
ಉಡುಪಿ ಜಿಲ್ಲೆಗೆ ಸ್ವತಂತ್ರ, ವಿಮಾನ ನಿಲ್ದಾಣ ಸ್ಥಾಪನೆ
ಕೊಂಕಣ ರೇಲ್ವೆಯ ಹೊಸ ಉಡುಪಿ ವಿಭಾಗ ರಚನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.