ಒತ್ತುವರಿ ವಿರುದ್ಧದ ಕಾಯ್ದೆ ಜೆಡಿಎಸ್, ಬಿಜೆಪಿ ಸರ್ಕಾರದ್ದು
ಕ.ಪ್ರ.ವಾರ್ತೆ ಶಿವಮೊಗ್ಗ ಏ. 8
ಒತ್ತುವರಿ ಮಾಡಿರುವ ರೈತರನ್ನು ಜೈಲಿಗೆ ಹಾಕುವ ಕಾನೂನು ತಂದು ಅವರನ್ನು ಸಂಕಷ್ಟಕ್ಕೀಡು ಮಾಡಿರುವುದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಸಮ್ಮಿಶ್ರ ಸರ್ಕಾರವೇ ಹೊರತು ನಾವಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿ.ಎ. ರಮೇಶ್ ಹೆಗ್ಡೆ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ಭೂಕಂದಾಯ ಕಾಯ್ದೆಯ ಕಲಂ 192 ಎ ತಿದ್ದುಪಡಿ ಮಾಡಿದ್ದು ಸಮ್ಮಿಶ್ರ ಸರ್ಕಾರ. ಆಗ ಮುಖ್ಯಮಂತ್ರಿಯಾಗಿದ್ದು ಎಚ್.ಡಿ. ಕುಮಾರಸ್ವಾಮಿ. ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿ, ಜಗದೀಶ್ ಶೆಟ್ಟರ್ ಕಂದಾಯ ಸಚಿವರಾಗಿದ್ದರು. ರೈತರ ಮೇಲೆ ಕೇಸುಗಳು ದಾಖಲಾಗಿ, ಅವರು ಜೈಲಿಗೆ ಹೋಗಿರುವ ಪರಿಸ್ಥಿತಿ ಬಂದಿರುವುದಕ್ಕೆ ಅವರೇ ಉತ್ತರಿಸಬೇಕು ಎಂದರು.
ಮಲೆನಾಡಿಗೆ ಮಾರಕ: ಈ ತಿದ್ದುಪಡಿಯಂತೆ ಕಂದಾಯ ಭೂಮಿ ಒತ್ತುವರಿ ಮಾಡಿದರೆ 1 ವರ್ಷ ಜೈಲು ಹಾಗೂ 5 ಸಾವಿರ ರು. ದಂಡವಿದೆ. ಕಾನೂನು ಅನುಷ್ಠಾನ ಮಾಡದ ಅಧಿಕಾರಿಗೆ 3 ವರ್ಷ ಜೈಲು, 10 ಸಾವಿರ ರು. ದಂಡವಿದೆ. ಕಾಂಗ್ರೆಸ್ ಪಕ್ಷ ಅಧಿಕಾರವಿದ್ದಾಗ ರೂಪಿಸಿರುವ ಕಾನೂನುಗಳು ರೈತರಿಗೆ ಭೂಮಿ ಹಕ್ಕು ನೀಡಿದವು. ಆದರೆ ಮಲೆನಾಡಿಗೆ ಮಾರಕವಾದ ಈ ಕಾನೂನು ತಿದ್ದುಪಡಿ ಮಾಡಿ ಅವರನ್ನು ಜೈಲಿಗೆ ಹೋಗುವಂತೆ ಮಾಡಿದ್ದು ಇದೇ ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರಗಳು ಎಂದರು.
ಜಿಲ್ಲಾ ಸರ್ಕಾರಿ ಭೂಮಿ ಸಂರಕ್ಷಣೆ ಕಾರ್ಯಪಡೆಯು ಈಗಾಗಲೇ ಜಿಲ್ಲೆಯಲ್ಲಿ 1,02,065 ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ಹೇಳಿದ್ದು, 44,529 ಜನರು ಈ ಒತ್ತುವರಿ ಮಾಡಿದ್ದಾರೆ. ಈಗಾಗಲೇ 503 ಎಕರೆ ವ್ಯಾಪ್ತಿಯ 306 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಚಂದನಕೆರೆಯ 6 ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.
ಸಂತ್ರಸ್ತರಿಗೆ ಮೋಸ: ಬಿಜೆಪಿ ಸರ್ಕಾರವು ಮುಳುಗಡೆ ಸಂತ್ರಸ್ತರಿಗೂ ಸಹ ಮೋಸ ಮಾಡಿದೆ. ಇವರಿಗೆ ಮಂಜೂರು ಮಾಡಿದ್ದ ಬಹಳಷ್ಟು ಪ್ರದೇಶವನ್ನು ಅರಣ್ಯ ಎಂದು ಇಂಡೀಕರಣ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ವೀಕ್ಷಕ ಜಗದೀಶ್ ಚಂದ್ರ ಟಕ್ರಾಲ್, ಪಕ್ಷದ ಪ್ರಮುಖರಾದ ಸೈಯದ್ ವಾಹಿದ್ ಅಡ್ಡು, ಮಾರ್ಟಿಸ್, ಆರೀಫ್ ಸೇರಿದಂತೆ ಹಲವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

