ದೇವೇಗೌಡ, ಎಚ್ಡಿಕೆ ರಾಜಕೀಯ ರಣಹೇಡಿಗಳು
ಕನ್ನಡಪ್ರಭ ವಾರ್ತೆ, ಶಿವಮೊಗ್ಗ, ಏ.9
ಜೆಡಿಎಸ್ ವರಿಷ್ಠ ದೇವೇಗೌಡ, ಕುಮಾರಸ್ವಾಮಿ ರಾಜಕೀಯ ರಣಹೇಡಿಗಳು ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಗಂಭೀರ ಟೀಕೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿಮ್ಮ ಅನುಭವದ ಎದುರಿಗೆ ನಾವು ಚಿಕ್ಕವರು. ಆದರೆ, ಸಂಸತ್ತಿನಲ್ಲಿ ರಾಜ್ಯದ ಪರವಾಗಿ ಯಾವ ರೀತಿಯಲ್ಲಿ ದನಿ ಎತ್ತಿದ್ದೀರಾ, ರಾಜ್ಯದ ಸಮಸ್ಯೆಗಳನ್ನು ಪ್ರಸ್ತಾಪ ಮಾಡಿದ್ದೀರಾ ಎಂದು ಗೌಡರನ್ನು ತರಾಟೆಗೆ ತೆಗೆದುಕೊಂಡರು.
ಲೋಕಸಭೆ ವೆಬ್ಸೈಟ್ನಲ್ಲಿ ನೀವು ಸಂಸತ್ತಿನಲ್ಲಿ ಪ್ರಸ್ತಾಪಿಸಿದ ವಿಷಯಗಳು, ಚರ್ಚೆಗಳ ಬಗ್ಗೆ ಸತ್ಯ ಹೇಳುತ್ತದೆ. ಗೌಡರು ಬೇರೆಯವರ ಚರ್ಚೆಯಲ್ಲಿ ಭಾಗಿಯಾಗಿದ್ದು ಬಿಟ್ಟರೆ ಸ್ವತಃ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಲೇ ಇಲ್ಲ. ಅದು ಸುಳ್ಳಾಗಿದ್ದರೆ ಬಹಿರಂಗವಾಗಿ ಕ್ಷಮೆ ಕೇಳುತ್ತೇನೆ, ಇಲ್ಲವಾದರೆ ನಾನು ವಿಫಲನಾಗಿದ್ದೇನೆ ಎಂದು ನೀವು ರಾಜ್ಯದ ಕ್ಷಮೆ ಕೋರಿ ಎಂದು ಗೌಡರಿಗೆ ಸವಾಲೆಸೆದರು.
ಅಸಹಾಯಕ ಮಾಜಿ ಪಿಎಂ ಲೋಕಸಭೆಯಲ್ಲಿ ಮಾತನಾಡುವ ಸಾಮರ್ಥ್ಯ ಗಳಿಸಲೇ ಇಲ್ಲ, ದೇವೇಗೌಡರು ಸಾಂದರ್ಭಿಕ ಪ್ರಧಾನಿಯಾದರೂ ರಾಜ್ಯಕ್ಕೆ ನ್ಯಾಯ ದೊರಕಿಸಲಿಲ್ಲ, ಅವರಿಂದ ದೇಶಕ್ಕೆ ಭವಿಷ್ಯ ಸಿಗುತ್ತದೆಯೇ ಎಂದು ಪ್ರಶ್ನಿಸಿದ ಅವರು,
ಅಡಕೆ, ನೀರಾವರಿ, ಅರಣ್ಯ ಸಮಸ್ಯೆ ಬಗ್ಗೆ ಮಾತನಾಡಲೇ ಇಲ್ಲ. ಕನಿಷ್ಠ ತಮ್ಮ ಕ್ಷೇತ್ರಕ್ಕೆ ಎಷ್ಟು ಕೇಂದ್ರದ ಅನುದಾನ ತಂದಿರಿ ಎಂಬುದನ್ನಾದರೂ ಹೇಳಿ ಎಂದರು.
ಗೆಲ್ಲೋದು ಎಷ್ಟು ಕ್ಷೇತ್ರ?: ಮೋದಿ ಪ್ರಧಾನಿ ಆಗಲು ಬಿಡಲ್ಲ ಎಂದು ಹೇಳುವ ಗೌಡರ ಪಕ್ಷ ಗೆಲ್ಲೋದು ಮೂರು ಮತ್ತೊಂದು ಕ್ಷೇತ್ರ. ಸ್ವತಃ ತಮ್ಮ ಮಗನಿಗೆ ಶಾಶ್ವತವಾದ ಕ್ಷೇತ್ರ ಕೊಡಿಸಲಿಲ್ಲ. ವಿಧಾನಸಭೆಗೆ ಬರಲಾಗದೆ, ಲೋಕಸಭೆಯಲ್ಲಿ ಇರಲಾಗದೇ ಓಡಾಡುತ್ತಿರುತ್ತಾರೆ. ರಾಜಕೀಯ ರಣಹೇಡಿಗಳು ನೀವು, ಪಾರ್ಲಿಮೆಂಟ್ನಲ್ಲಿ ಏನು ಮಾಡಿದ್ದೀರಾ. ಚುನಾವಣೆಯಲ್ಲಿ ನಮಗೆ ಅವರು ಎದುರಾಳಿಯಲ್ಲ, ಇವರು ಎದುರಾಳಿಯಲ್ಲ ಎಂದು ಹೇಳಿಕೊಂಡು ತಿರುಗುತ್ತೀರಾ ಎಂದು ಗುಡುಗಿದರು.
ಚುನಾವಣೆ ಬಂದ ಗಳಗಳನೇ ಅತ್ತು ಬಿಡುತ್ತಾರೆ. ಅಳುವ ಮೂಲಕ ಓಟು ಕೇಳುವ ರಾಜಕಾರಣಿಗಳು, ಯಾರದೋ ಮುಖ ತೋರಿಸಿ ಮತ ಕೇಳುವ ರಾಜಕಾರಣಿಗಳು ಹೋರಾಟದ ಜಿಲ್ಲೆಯಲ್ಲಿ(ಶಿವಮೊಗ್ಗ) ಮಾತನಾಡಬೇಕಾದರೆ ಎಚ್ಚರ ವಹಿಸಬೇಕು. ನಿಮಗೆ ಸರಿಗಟ್ಟುವ ನೂರಾರು ಜನರಿದ್ದಾರೆ. ಹೋರಾಟದ ನೆಲಗಟ್ಟಿಗೆ ಬಂದರೆ ಒಂದೇ ಪಕ್ಷವಲ್ಲದೇ ಎಲ್ಲಾ ಪಕ್ಷದಲ್ಲೂ ಇದ್ದಾರೆ. ಎಚ್ಚರ ಇರಬೇಕು. ನಿಮ್ಮ ಪಕ್ಷದ್ದು ಸ್ವಂತ ಹೋರಾಟ ಇಲ್ಲ ಎಂದು ಗೌಡರನ್ನು ಕೆಣಕಿದರು.
ವೇದಿಕೆಯಾದದ್ದು ದುರಂತ: ಪಾಪ ಅಣ್ಣ ತಮ್ಮ ಚೆನ್ನಾಗಿದ್ದರು (ಮಧು-ಕುಮಾರ್ ಬಂಗಾರಪ್ಪ). ಹೋರಾಟದ ಬಂಗಾರಪ್ಪ ಮನೆತನವನ್ನೇ ವಿಭಜಿಸಿ ನಿಮ್ಮ ಪಕ್ಷದ ವೇದಿಕೆ ಮಾಡಿಕೊಂಡಿರಲ್ಲ, ಹೋರಾಟಕ್ಕೆ ಇದು ನಿಮ್ಮ ವೇದಿಕೆಯಾದದ್ದು ದುರಂತ ಎಂದು ಕಟಕಿದ ಅವರು, ಕನಿಷ್ಠ ಒಕ್ಕಲಿಗ ಮುಖಂಡರನ್ನೇ ಬೆಳೆಸಲಿಲ್ಲ. ಯಡಿಯೂರಪ್ಪ ಅವರು ಮನಸ್ಸು ಮಾಡಿದ್ದಕ್ಕೆ ಕುಮಾರಸ್ವಾಮಿ ಸಿಎಂ ಆದರು. ಸದಾನಂದಗೌಡ ಮುಖ್ಯಮಂತ್ರಿಯಾದರೂ, ಅಶೋಕ ಉಪ ಮುಖ್ಯಮಂತ್ರಿಯಾದರೂ, ತಾವು ಯಾರನ್ನು ಬೆಳೆಸಿದ್ದೀರಾ ಹೇಳಿ ಎಂದು ಟೀಕಿಸಿದರು.
ಎದುರಾಳಿ: ಕುಮಾರಸ್ವಾಮಿ ಹೇಳಿದ್ದಾರೆ, ಶಿವಮೊಗ್ಗ ಕ್ಷೇತ್ರದಲ್ಲಿ ದುಡ್ಡೇ ಎದುರಾಳಿಯಂತೆ. ಚಿಕ್ಕಬಳ್ಳಾಪುರದಲ್ಲಿ ಕುಮಾರಸ್ವಾಮಿ ಕೈಬೀಸಿಕೊಂಡು ಓಡಾಡುತ್ತಿದ್ದಾರೆಯೇ ಎಂದು ಹರಿತ ಮಾತುಗಳಲ್ಲಿ ಟೀಕಿಸಿದ ಆಯನೂರು ಮಂಜುನಾಥ್, 30 ಕೋಟಿ ಆಸ್ತಿ 300 ಕೋಟಿ ಆಸ್ತಿ ಹೇಗಾಯಿತು ಎಂಬ ಪ್ರಶ್ನೆಗೆ ಕುಮಾರಸ್ವಾಮಿಯವರಿಂದ ಉತ್ತರ ಬರಲೇ ಇಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

