ಪ್ರವಾಸ ಬಿಡಿ, ಚುನಾವಣೆಯಲ್ಲಿ ಮತದಾನಕ್ಕೆ ಕೈ ಕೊಡಿ...
ಶಿವಮೊಗ್ಗ: ಏಪ್ರಿಲ್ 17 ಮತದಾನಕ್ಕಾಗಿ ಸರ್ಕಾರಿ ರಜೆ ಘೋಷಣೆಯಾಗಿದೆ. ಏ.18 ಗುಡ್ಫ್ರೈಡೆ ರಜೆ, ಏ.19 ಶನಿವಾರದ ರಜೆ, 20ರಂದು ಭಾನುವಾರ...
ಹೀಗೆ ಸಾಲು ಸಾಲು ರಜೆಯನ್ನು ಬಳಸಿಕೊಳ್ಳಲು ಅನೇಕ ಜನ ಕಾತುರರಾಗಿದ್ದಾರೆ. ಕೆಲವರಂತೂ ಮತದಾನಕ್ಕೆ ಕೈ ಕೊಟ್ಟು ರಜೆಯ ಮಜಾ ಅನುಭವಿಸಲು ಹೊರಟು ನಿಂತಾಗಿದೆ. ಈ ಕಾರಣಕ್ಕಾಗಿಯೇ ಖಾಸಗಿ ಪ್ರವಾಸಿ ವಾಹನಗಳಿಗೆ ಭಾರೀ ಬೇಡಿಕೆ ಬಂದಿದೆ.
ಈ ಮಧ್ಯೆ, ಪ್ರವಾಸಕ್ಕೆ ಕರೆದೊಯ್ಯಬೇಕಾದ ಶಿವಮೊಗ್ಗದ ಪ್ರವಾಸಿ ವಾಹನ ಚಾಲಕರು- ಮಾಲೀಕರು ಮಾತ್ರ ಮತದಾನಕ್ಕೆ ಮಹತ್ವ ಕೊಡಿ ಎಂದು ಪ್ರವಾಸಕ್ಕೆ ಹೊರಟು ನಿಂತವರಿಗೆ ಕೋರುತ್ತಿರುವ, ಮನವರಿಕೆ ಮಾಡಿಕೊಡುತ್ತಿರುವುದು ವಿಶೇಷ ಸಂಗತಿ ನಡೆದಿದೆ.
ಮತಹಾಕಿ: ಶಿವಮೊಗ್ಗ ಪ್ರವಾಸಿ ಕಾರಿನ ಚಾಲಕರ ಸಂಘವಂತೂ ನಗರದ ಎಲ್ಲಾ ಚಾಲಕರು ತಪ್ಪದೇ ಮತ ಚಲಾಯಿಸುವಂತೆ ಮನವಿ ಮಾಡುತ್ತಿದೆ. ತಿಳಿವಳಿಕೆ ನೀಡುವ ಮಾತುಗಳೂ ಕೂಡ ಅಚ್ಚರಿಯಾಗಿದೆ.
ಪ್ರವಾಸಿ ಕಾರಿನ ಚಾಲಕ ಸಂಘದ ಎಲ್ಲಾ ಸದಸ್ಯರೇ, ತಾವು ಪ್ರಮಾಣಿಕರು ಮತ್ತು ಪ್ರಜ್ಞಾವಂತ ನಾಕರಿಕರಾಗಿ ಚಾಲಕ ವೃತ್ತಿ ಮಾಡುವ ಶ್ರಮ ಜೀವಿಗಳು. ದೇಶ, ರಾಜ್ಯ ಮತ್ತು ಜಿಲ್ಲೆಯ ಮೂಲೆ ಮೂಲೆಗಳಿಗೆ ಪ್ರಯಾಣಿಕರನ್ನು ಕೊಂಡೊಯ್ಯುವವರು. ದೇಶಾದ್ಯಂತ ಸುತ್ತಾಡುವ ನಿಮ್ಮೆಲ್ಲರಿಗೂ ನಿಜವಾದ ಸಮಸ್ಯೆ ಅರಿವು ಮತ್ತು ಜ್ಞಾನವಿದೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ಹಂಬಲವೂ ನಿಮಗಿರುತ್ತದೆ. ಈ ಸಮಸ್ಯೆಗಳ ಸರಮಾಲೆ ನಿಯಂತ್ರಿಸಲು ಉತ್ತಮ ಸರ್ಕಾರದ ಆಯ್ಕೆಯಾಗಬೇಕು. ಈ ಕಾರಣಕ್ಕೆ ಏ.17 ರಂದು ನಡೆಯುವ ಮತದಾನದಲ್ಲಿ ನೀವು ಮತ್ತು ನಿಮ್ಮ ಕುಟುಂಬದವರು ತಪ್ಪದೇ ಪಾಲ್ಗೊಂಡು ಮತ ಚಲಾಯಿಸಿ. ಹಾಗೆಯೇ ತಮ್ಮ ಪ್ರಯಾಣಿಕರು ಸಹ ಮತ ಚಲಾಯಿಸುವಂತೆ ಸೂಚಿಸಿ. ನಂತರವಷ್ಟೇ ಪ್ರಯಾಣಿಸಿ ಎಂದು ಚಾಲಕರನ್ನು ಕೋರಲಾಗುತ್ತಿದೆ ಎಂದು ಸಂಘದ ಕಾರ್ಯದರ್ಶಿ ಸಂದೇಶ್ ತಿಳಿಸಿದ್ದಾರೆ. ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೇ ಪ್ರಾಮಾಣಿಕವಾಗಿ ಮತ ಚಲಾಯಿಸಿ, ದೇಶದ ಭವಿಷ್ಯ ನಮ್ಮ ಭವಿಷ್ಯ ರೂಪಿಸುತ್ತದೆ ಎಂಬುದನ್ನು ಚಾಲಕರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂಬುದು ಸಂಘದ ವಿವರಣೆ.
ಕಳವಳ: ಶಿವಮೊಗ್ಗದಲ್ಲಿ ಸುಮಾರು 800ಕ್ಕೂ ಹೆಚ್ಚು ಪ್ರವಾಸಿ ವಾಹನಗಳಿವೆ. ಏ.17 ರಿಂದ ಒಟ್ಟಾಗಿ 4 ದಿನ ರಜೆ ಸಿಗುವ ಕಾರಣ ಪ್ರವಾಸಿ ವಾಹನಗಳಿಗೆ ಸಾಕಷ್ಟು ಬೇಡಿಕೆ ಇದೆ. ಸಾಮಾನ್ಯ ದರಕ್ಕಿಂತ ಹೆಚ್ಚಿನ ದರ ವಿಧಿಸಿದರೂ ಅದನ್ನು ಕೊಟ್ಟು ವಾಹನ ಬಾಡಿಗೆ ಪಡೆದುಕೊಳ್ಳಲು ಆಸಕ್ತಿ ತೋರಿಸುವವರಿದ್ದಾರೆ. ಹೀಗಿರುವಾಗ 3-4 ದಿನ ಒಳ್ಳೆಯ ಬಾಡಿಗೆ ಸಿಗುತ್ತದೆ. ಆದರೆ ಏ.17 ರಂದು ಚುನಾವಣೆ ಇರುವ ಕಾರಣ ಮತದಾನಕ್ಕೆ ಆದ್ಯತೆ ಕೊಡಬೇಕೆ, ಕೂಳಿಗೆ ಆದ್ಯತೆ ಕೊಡಬೇಕೆ ಎಂಬ ಗೊಂದಲದಲ್ಲಿದ್ದೇವೆ ಎಂಬುದು ವಾಹನ ಚಾಲಕ ರಮೇಶ್ ಮತ್ತು ಧನಂಜಯ ಅವರ ವಿವರಣೆ.
ಮನವರಿಕೆ: ಅನೇಕ ಚಾಲಕರಲ್ಲಿ ಇಂತಹ ಗೊಂದಲಗಳು ಇರುವ ನಡುವೆಯೇ ಪ್ರವಾಸಿ ವಾಹನ ಚಾಲಕರ ಸಂಘದ ಸದಸ್ಯರ ಪೈಕಿ ಅನೇಕರು ಪ್ರವಾಸಿಗಳ ಮನವೊಲಿಸಿ ಮತದಾನ ಮುಗಿಸಿ ಪ್ರಯಾಣ ಹೊರಡುವಂತೆ ಕೋರಿದ್ದಾರೆ. ಈ ಪ್ರಯತ್ನದಲ್ಲೂ ಯಶಸ್ಸು ಕಂಡಿದ್ದಾರೆ.
ಶಿವಮೊಗ್ಗದ ಸಮಯ ಟ್ರಾವೆಲ್ಸ್ಗೆ 17 ರಿಂದ 4 ದಿನ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಪ್ರವಾಸ ನಿಗದಿಯಾಗಿತ್ತು. ಪೂರ್ವ ನಿಗದಿಯಂತೆ 17ರಂದು ಬೆಳಗ್ಗೆ 5 ಗಂಟೆಗೆ ಭದ್ರಾವತಿಯಿಂದ ಪ್ರಯಾಣ ಆರಂಭ ಆಗಬೇಕಾಗಿತ್ತು. ಆದರೆ, ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಟ್ರಾವೆಲ್ಸ್ ಚಾಲಕ ಹಾಗೂ ಪ್ರವಾಸಿಗಳು ಬೆಳಗ್ಗೆ ಮತ ಹಾಕಿ 8 ಗಂಟೆಗೆ ಪ್ರಯಾಣ ಹೊರಡಲು ತೀರ್ಮಾನವಾಗಿದೆ. ಈ ರೀತಿ ಅನೇಕ ಉದಾಹರಣೆ ಇದೆ ಎಂದು ಸಂಘದ ಕಾರ್ಯದರ್ಶಿ ಸಂದೇಶ್ 'ಕನ್ನಡಪ್ರಭ'ಕ್ಕೆ ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

