ಶಿವಮೊಗ್ಗ

ಶೇ.80 ಮತದಾನ ನಿರೀಕ್ಷೆ: ಬನ್ಸಲ್

Published On :

ಕ.ಪ್ರ. ವಾರ್ತೆ, ಶಿವಮೊಗ್ಗ, ಏ.15
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ.80 ರಷ್ಟು ಮತದಾನವಾಗಬೇಕೆಂಬ ನಿರೀಕ್ಷೆಯನ್ನು ಜಿಲ್ಲಾಡಳಿತ ಇಟ್ಟುಕೊಂಡಿದೆ.
2009ರ ಲೋಕಸಭಾ ಚುನಾವಣೆಯಲ್ಲಿ ಶೇ.60.46 ಮತದಾನವಾಗಿದ್ದರೆ, 2013ರ ವಿಧಾನಸಭಾ ಚುನಾವಣೆಯಲ್ಲಿ ಶೇ.75.43 ರಷ್ಟು ಮತದಾನವಾಗಿತ್ತು. ಈ ಚುನಾವಣೆಯಲ್ಲಿ ಶೇ.80 ರಷ್ಟು ಮತದಾನದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿಪುಲ್ ಬನ್ಸಲ್ ವಿವರಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಚುನಾವಣಾ ಪೂರ್ವತಯಾರಿ ಬಗ್ಗೆ ಮಾಹಿತಿ ನೀಡಿದ ಅವರು, ಏ.17 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಸಂಜೆ 6 ಗಂಟೆಗೆ ಮತಗಟ್ಟೆಯ ಸಾಲಿನಲ್ಲಿ ನಿಂತಿರುವ ಎಲ್ಲಾ ಮತದಾರರು ಮತದಾನ ಮಾಡಲು ಅವಕಾಶ ಇರುತ್ತದೆ ಎಂದರು.
  ಓಟ್ ಮಾಡಲು ಈ ಪೈಕಿ ಒಂದು ದಾಖಲೆ
1. ಎಪಿಕ್, 2. ಪಾಸ್‌ಪೋರ್ಟ್, 3. ಡ್ರೈವಿಂಗ್ ಲೈಸೆನ್ಸ್, 4. ಫೋಟೋ ಇರುವ ಸೇವಾ ಗುರುತಿನ ಪತ್ರ (ಕೇಂದ್ರ, ರಾಜ್ಯ ಸರ್ಕಾರದ ಸಂಸ್ಥೆಗಳಿಂದ ನೀಡಲ್ಪಟ್ಟಿದ್ದು)
5. ಬ್ಯಾಂಕ್, ಪೋಸ್ಟ್ ಆಫೀಸ್‌ನಿಂದ ವಿತರಣೆಯಾದ ಫೋಟೋಗ್ರಾಫ್ ಸಹಿತ ಪಾಸ್ ಪುಸ್ತಕ.
6. ಪಾನ್‌ಕಾರ್ಡ್, 7. ಆಧಾರ್ ಕಾರ್ಡ್, 8. ಸ್ಮಾರ್ಟ್ ಕಾರ್ಡ್ (ಆರ್‌ಜಿಐ ಅಂಡರ್ ಎನ್‌ಪಿಆರ್)  9. ನರೇಗಾ ಜಾಬ್‌ಕಾರ್ಡ್, 10. ಕೇಂದ್ರ ಕಾರ್ಮಿಕ ಇಲಾಖೆ ನೀಡಿದ ಆರೋಗ್ಯ ವಿಮೆ ಸ್ಮಾರ್ಟ್‌ಕಾರ್ಡ್, 11. ಫೋಟೋಗ್ರಾಫ್ ಇರುವ ಪಿಂಚಣಿ ದಾಖಲೆ.
12. ಚುನಾವಣಾ ಆಯೋಗ ನೀಡಿದ ಫೋಟೋ ಓಟರ್ ಸ್ಲಿಪ್.
  ಹಣ ಪಡೆದರೆ ಜೈಲು, ಜೋಕೆ!
ಐಪಿಸಿ 171ಬಿ ಪ್ರಕರಣದ ಪ್ರಕಾರ, ಚುನಾವಣಾ ಪ್ರಕ್ರಿಯೆಯ ಅಡಿಯಲ್ಲಿ ಯಾರೇ ವ್ಯಕ್ತಿಯು, ಚುನಾವಣೆಗೆ ಸಂಬಂಧಿಸಿದಂತೆ ಯಾರೇ ವ್ಯಕ್ತಿಗೆ ಇರುವ ಅಧಿಕಾರವನ್ನು ಚಲಾಯಿಸಲು ಪ್ರೇರೇಪಣೆ ಮಾಡುವ ದೃಷ್ಟಿಯಿಂದ ನಗದು ರೂಪದಲ್ಲಿ ಅಥವಾ ವಸ್ತು ರೂಪದಲ್ಲಿ ಆಮಿಷ ಕೊಟ್ಟರೆ ಅಥವಾ ತೆಗೆದುಕೊಂಡರೆ ಆತನು 1 ವರ್ಷದವರೆಗೆ ದಂಡಿಸಬಹುದಾದ ಕಾರಾಗೃಹ ವಾಸದ ಶಿಕ್ಷೆಯಿಂದ ಅಥವಾ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ದಂಡಿತನಾಗತಕ್ಕದ್ದು ಎಂದು ಡಿಸಿ ಎಚ್ಚರಿಸಿದ್ದಾರೆ.
ಅಲ್ಲದೇ, ಐಪಿಸಿ 171ಸಿ ಪ್ರಕರಣದ ಮೇರೆಗೆ ಯಾರೇ ವ್ಯಕ್ತಿಯು ಯಾರೇ ಅಭ್ಯರ್ಥಿಗೆ ಅಥವಾ ಮತದಾರನಿಗೆ ಅಥವಾ ಯಾರೇ ಇತರ ವ್ಯಕ್ತಿಗೆ ಯಾವುದೇ ಬಗೆಯ ಘಾಸಿ ಉಂಟು ಮಾಡುವುದಾಗಿ ಬೆದರಿಕೆ ಹಾಕಿದರೆ, ಅವರು 1 ವರ್ಷದವರೆಗಿನ ಕಾರಾಗೃಹ ವಾಸದ ಶಿಕ್ಷೆಯಿಂದ ಅಥವಾ ಜುಲ್ಮಾನೆಯಿಂದ ಅಥವಾ ಅವರೆಡರಿಂದ ದಂಡಿತನಾಗತಕ್ಕದ್ದು. ಲಂಚ ನೀಡುವವರು ಮತ್ತು ತೆಗೆದುಕೊಳ್ಳುವವರು ಇವರಿಬ್ಬರ ವಿರುದ್ಧ ಮೊಕದ್ದಮೆಯನ್ನು ದಾಖಲು ಮಾಡುವುದಕ್ಕಾಗಿ ಮತ್ತು ಮತದಾರಿಗೆ ಬೆದರಿಕೆ ಹಾಕುವುದರಲ್ಲಿ ಮತ್ತು ಹೆದರಿಸುವುದರಲ್ಲಿ ನಿರತರಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಾಗಿ ಕ್ಷಿಪ್ರ ಸಂಚಾರಿ ದಳವನ್ನು ರಚಿಸಲಾಗಿದೆ.
  ಕರೆ ಮಾಡಿ
ಲಂಚ ತೆಗೆದುಕೊಳ್ಳುವುದರಿಂದ ದೂರವಿರುವಂತೆ ಎಲ್ಲಾ ನಾಗರಿಕರಲ್ಲಿ ವಿನಂತಿ ಎಂದು ಡಿಸಿ ಹೇಳಿದ್ದಾರೆ.
ಯಾರೇ ವ್ಯಕ್ತಿ ಲಂಚ ನೀಡಲು ಬಂದ ಸಂದರ್ಭ ಅಥವಾ ಲಂಚದ ಪ್ರಕರಣಗಳು ಅಥವಾ ಮತದಾರರಿಗೆ ಬೆದರಿಕೆ ಹಾಕುವ, ಹೆದರಿಕೆ ಉಂಟು ಮಾಡುವ ಪ್ರಕರಣಗಳ ಬಗ್ಗೆ ಯಾರೇ ವ್ಯಕ್ತಿಗೆ ಗೊತ್ತಿದ್ದರೆ, ಆಗ ದೂರುಗಳನ್ನು ಸ್ವೀಕರಿಸಲು ರಚಿಸಲಾಗಿರುವ ದಿನ 24 ಗಂಟೆ ಕಾರ್ಯನಿರ್ವಹಿಸುವ ದೂರು ಮೇಲ್ವಿಚಾರಣಾ ಕೋಶಕ್ಕೆ ದೂರು ನೀಡಬಹುದು. ಸಂಖ್ಯೆ. 08182 220291, 220292.
  ಪ್ರಚಾರ ಮಾಡೀರಿ, ಎಚ್ಚರ...
ಚುನಾವಣಾ ಬಹಿರಂಗ ಪ್ರಚಾರದ ಅವಧಿಯು ಏ.15ರ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿರುವ ಕಾರಣ ಬಹಿರಂಗ ಚುನಾವಣಾ ಪ್ರಚಾರ ಮಾಡಿದರೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗುವುದು ಎಂದು ಡಿಸಿ ಎಚ್ಚರಿಸಿದ್ದಾರೆ.
ಬಹಿರಂಗ ಪ್ರಚಾರ ಅಂತ್ಯಗೊಂಡ ನಂತರ ಈ ಕ್ಷೇತ್ರದಲ್ಲಿ ಮತದಾರರಲ್ಲದ ಸ್ಟಾರ್ ಕ್ಯಾಂಪೇನರ್, ಕಾರ್ಯಕರ್ತರು ಕ್ಷೇತ್ರ ಬಿಡಬೇಕು. ಮತದಾನದ ದಿನ ಮತದಾರರನ್ನು ಮತಗಟ್ಟೆಗೆ ವಾಹನಗಳಲ್ಲಿ ಕರೆದೊಯ್ಯುವಂತಿಲ್ಲ.
  ಮಾದರಿ ನೀತಿ ಸಂಹಿತೆ ಉಲ್ಲಂಘನೆ
- ಮಾದರಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ 55 ಪ್ರಕರಣಗಳು ದಾಖಲಾಗಿವೆ.
- ತಾಲೂಕು ಕೇಂದ್ರಗಳು ಸೇರಿದಂತೆ ಕಂಟ್ರೋಲಲ್ರೂಂಗೆ ಇದುವರೆಗೂ 109 ದೂರುಗಳನ್ನು ಸ್ವೀಕರಿಸಿದ್ದು, ಇತ್ಯರ್ಥಪಡಿಸಲಾಗಿದೆ.
- ಇಲ್ಲಿಯವರೆಗೂ 5,90,191 ಮೌಲ್ಯದ 1396 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.
- ಸೂಕ್ತ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 7.5 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
- ಶಿಕಾರಿಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೇ ಕರ್ನಾಟಕ ಮಕ್ಕಳ ಪಕ್ಷದವರು ಸಾಗಿಸುತ್ತಿದ್ದ 109 ಸೀರೆ, 300 ಪಂಚೆ, 20 ಶಾಲೆ ಮತ್ತಿತರ ಸಾಮಗ್ರಿಗಳು 11,300 ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ.
  ಶುಷ್ಕ ದಿನ ಘೋಷಣೆ
ಏ.15ರ ಸಂಜೆ 6 ಗಂಟೆಯಿಂದ ಏ.17ರ ಸಂಜೆ 6 ಗಂಟೆಯವರೆಗೆ ಮದ್ಯ ತಯಾರಿಕೆ, ಮಾರಾಟ, ಸರಬರಾಜು ಮತ್ತು ಸಾಗಾಟ ನಿಷೇಧಿಸಿ ಪಾನ ನಿರೋಧ ಶುಷ್ಕ ದಿನ ಎಂದು ಘೋಷಿಸಲಾಗಿದೆ.
  ವೇತನ ಸಹಿತ ರಜೆ
ಮತದಾನದ ದಿನ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕೇಂದ್ರಗಳಿಗೊಳಪಟ್ಟ ಸಂಸ್ಥೆಗಳಿಗೆ, ಸರ್ಕಾರಿ ಹಾಗೂ ಖಾಸಗಿ (ಅನುದಾನಿತ ಮತ್ತು ಅನುದಾನ ರಹಿತ) ಶಿಕ್ಷಣ ಸಂಸ್ಥೆಗಳಿಗೆ, ಔದ್ಯಮಿಕ ಸಂಸ್ಥೆಗಳ ಮತ್ತು ಇನ್ನಿತರೆ ಸಂಸ್ಥೆಗಳಿಗೆ ಕಾಯ್ದೆಯಡಿ ವೇತನ ಸಹಿತ ರಜೆ ನೀಡಲು ಆದೇಶಿಸಲಾಗಿದೆ.
  11 ಸಾವಿರ ಸಿಬ್ಬಂದಿ ಬಳಕೆ
ಜಿಲ್ಲೆಯ ವ್ಯಾಪ್ತಿಯಲ್ಲಿ 1704 ಬೂತ್‌ಗಳಿದ್ದು, 346 ವೀಕ್ಷಕರು, 6816 ಸಿಬ್ಬಂದಿ,  1704 ಬಿಎಲ್‌ಓ, ರಕ್ಷಣಾ ಸಿಬ್ಬಂದಿ ಸೇರಿದಂತೆ ಒಟ್ಟಾರೆ 11715 ಕಾರ್ಯನಿರ್ವಹಿಸಲಿದ್ದಾರೆ. 1519 ಬೂತ್‌ಗಳು ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇಲ್ಲಿನ ಬಿಸಿಯೂಟ ಸಿಬ್ಬಂದಿ ಬಳಸಿ ಎಲ್ಲಾ ಬೂತ್ ಸಿಬ್ಬಂದಿಗೆ ಬೆಳಗ್ಗೆ ಕಾಫಿ, ತಿಂಡಿ, ಮಧ್ಯಾಹ್ನ ಊಟ, ಸಂಜೆ ತಿಂಡಿ ನೀಡುವ ವ್ಯವಸ್ಥೆ ಇದೇ ಪ್ರಥಮ ಬಾರಿಗೆ ಮಾಡಲಾಗುತ್ತಿದೆ. ಜೊತೆಗೆ ಪ್ರತಿ ಸಿಬ್ಬಂದಿಗೆ 2 ಲೀಟರ್ ನೀರಿನ ಕ್ಯಾನ್ ಸಹ ನೀಡಲಾಗುತ್ತಿದೆ. ಮಹಿಳಾ ಸಿಬ್ಬಂದಿ ಮನೆಗೆ ತೆರಳಿ ಬೆಳಗ್ಗೆ 5 ಗಂಟೆಗೆ ಬೂತ್‌ನಲ್ಲಿ ಹಾಜರಿರುವಂತೆಯೂ ತಿಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.