ಶಿವಮೊಗ್ಗ

ಕ್ಷೇತ್ರದಲ್ಲಿ ಅಚ್ಚರಿ ಸೃಷ್ಟಿಸಿದ ಚುನಾವಣೆ

Published On :

ಕ.ಪ್ರ. ವಾರ್ತೆ, ಶಿವಮೊಗ್ಗ, ಏ.18
ಮಾಜಿ ಸಿಎಂ, ಬಿಜೆಪಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಯಾರನ್ನೂ ಟೀಕಿಸಲಿಲ್ಲ, ನಾವು ಶಿವಮೊಗ್ಗದವರೇ ಎಂದು ಕೊನೆ ಹಂತದವರೆಗೆ ಪ್ರಚಾರ ನಡೆಸಿದ ಜೆಡಿಎಸ್- ಕಾಂಗ್ರೆಸ್ ಅಭ್ಯರ್ಥಿಗಳು, ನಟ-ನಟಿಯರ ಕುರಿತ ಆಯನೂರು ಮಂಜುನಾಥ್ ಟೀಕೆ ರಾಜ್ಯಮಟ್ಟದಲ್ಲೊಂದು ವಿವಾದವಾಗಿದ್ದು, ಲೆಕ್ಕಕೊಡದೆ ಇಕ್ಕಟ್ಟಿನಲ್ಲಿ ಸಿಲುಕಿದ ಪಕ್ಷೇತರ ಅಭ್ಯರ್ಥಿಗಳು...
ಹೀಗೆ 16ನೇ ಲೋಕಸಭಾ ಚುನಾವಣೆ ಕಣದಲ್ಲಿ ಅನೇಕ ಸಂಗತಿಗಳು ಅಚ್ಚರಿಗೆ ಸಾಕ್ಷಿಯಾದವು.
ಬಿಎಸ್‌ವೈ ಯಾರನ್ನೂ ಟೀಕಿಸಲಿಲ್ಲ
ಎದುರಾಳಿ ಅಭ್ಯರ್ಥಿಗಳ ವಿರುದ್ಧ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಅವರು ತುಟಿಪಿಟಿಕ್ ಎನ್ನದೇ ಮಾತು ಮುಗಿಸಿದ್ದು ಈ ಬಾರಿಯ ಚುನಾವಣೆಯ ಅಚ್ಚರಿಗಳಲ್ಲೊಂದು.
ಎಂಥಾ ಸಂದರ್ಭ ಬಂದರೂ, ಎದುರಾಳಿಗಳಿಂದ ಕೆರಳಿಸುವ ಮಾತು ಬಂದಾಗಲೂ ಸಹ ಯಡಿಯೂರಪ್ಪ ಅಭ್ಯರ್ಥಿಗಳ ಕುರಿತು ಒಂದೇ ಒಂದು ಮಾತನಾಡಲಿಲ್ಲ. ಇದು ಅವರ ಚುನಾವಣಾ ತಂತ್ರಗಾರಿಕೆಯಲ್ಲಿ ಒಂದು ಪ್ರಧಾನ ಆಸ್ತ್ರಕೂಡ ಆಗಿತ್ತು ಎಂದು ಪಕ್ಷದವರು ವಿಶ್ಲೇಷಿಸುತ್ತಾರೆ.
ಸಾಮಾನ್ಯವಾಗಿ ಯಡಿಯೂರಪ್ಪ ಅವರ ಮಾತೆಂದರೆ ಅದರಲ್ಲಿ ಹರಿತವಿರುತ್ತದೆ. ಎದುರಾಳಿಗಳಿಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡುತ್ತಾರೆ. ಆದರೆ, ಪ್ರಚಾರ ಸಭೆಯಲ್ಲಿ ಒಂದೇ ಒಂದು ಮಾತನಾಡದೇ ಚುನಾವಣೆ ಮುಗಿಸಿದ್ದು ಯಡಿಯೂರಪ್ಪ ಅವರ ಆತ್ಮೀಯ ಬಳಗಕ್ಕಂತೂ ಅಚ್ಚರಿಯ ಸಂಗತಿ.
ತಿಣಕಾಡಿದ ಅಭ್ಯರ್ಥಿಗಳು
ಮಂಜುನಾಥ ಭಂಡಾರಿ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಣೆಯಾದ ನಂತರ ಮತದಾನದ ದಿನವರೆಗೆ ಅವರ ಪ್ರಚಾರದಲ್ಲಿ ನಾನು ಶಿವಮೊಗ್ಗದವರು ಎಂದು ಮತದಾರರಿಗೆ ತಿಳಿಹೇಳುವ ಕೆಲಸ ಮಾಡಿದರು. ನಾನು ಹುಟ್ಟಿದ್ದು ಇದೇ ಜಿಲ್ಲೆಯಲ್ಲಿ. ಇಲ್ಲೇ ಮತದಾನ ಮಾಡುವುದು ಎಂದು ಪದೇ ಪದೇ ಪ್ರಸ್ತಾಪಿಸಿದರು.
ಅದೇ ರೀತಿ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ನಾನು ಗೆಲುವು ಸಾಧಿಸಿದರೆ ಶಿವಮೊಗ್ಗದಲ್ಲಿ ಮನೆ ಮಾಡುತ್ತೇನೆ ಎಂದು ಹೇಳಿಕೊಂಡೇ ಓಡಾಡಿದರು.
ಇವರಿಬ್ಬರ ಮಾತುಗಳು ಜನರ ಮನಸ್ಸಿಗೆ ಎಷ್ಟು ನಾಟಿದವು ಎಂಬುದು ಫಲಿತಾಂಶ ಬಂದಾಗಲಷ್ಟೇ ಗೊತ್ತಾಗುತ್ತದೆ.
ಕಲರ್‌ಪುಲ್ ಪ್ರಚಾರ
ಜೆಡಿಎಸ್ ಅಭ್ಯರ್ಥಿ ಪರವಾಗಿ ಚಿತ್ರನಟರಾದ ಪ್ರೇಮ್, ಯೋಗಿ, ಉಪೇಂದ್ರ, ವಿಜಯ ರಾಘವೇಂದ್ರ, ಶ್ರೀಮುರಳಿ, ನಟಿಯರಾದ ಅಮೂಲ್ಯ, ರಾಗಿಣಿ ಮತ್ತಿತರರು ರೋಡ್ ಶೋ ನಡೆಸಿ ಪ್ರಚಾರಕ್ಕೆ ತಾರಾ ಕಳೆ ತಂದುಕೊಟ್ಟರು. ರೋಡ್ ಶೋ ವೇಳೆ ಡೈಲಾಗ್ ಹೇಳುವಂತೆ ಅಭಿಮಾನಿಗಳು ಮುಗಿಬಿದ್ದ ಕಾರಣ ಅನೇಕರು ತಮ್ಮ ಫೇವರಿಟ್ ಡೈಲಾಗ್ ಹೊಡೆದು ಪ್ರಚಾರಕ್ಕೆ ರಂಗುತಂದರು.
ವಿವಾದವಾಯಿತು ಟೀಕೆ
ಜೆಡಿಎಸ್ ಅಭ್ಯರ್ಥಿಗಳು ಚಿತ್ರನಟರನ್ನು ಕರೆ ತಂದು ಪ್ರಚಾರ ಮಾಡುತ್ತಿರುವ ಸಂಗತಿ ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಕೆಣಕಿದ್ದು ರಾಜ್ಯಮಟ್ಟದಲ್ಲಿ ವಿವಾದವಾಯಿತು. ಶಿವಮೊಗ್ಗಕ್ಕೆ ಏನು ಮಾಡುತ್ತೇವೆಂದು ಹೇಳುವ ಬದಲು ನಟ, ನಟಿಯರನ್ನು ಕರೆಸಿ ಹಾಡು ಹೇಳಿಸಿ ಡೈಲಾಗ್ ಹೊಡೆಸಿದರೆ ಜನ ನಂಬೋದಿಲ್ಲ ಎಂಬುದು ಆಯನೂರು ಮಂಜುನಾಥ್ ಟೀಕೆ ಆಗಿತ್ತು.
ಆದರೆ, ಬಿಜೆಪಿ ಕಲಾವಿದರಿಗೆ ಅವಮಾನ ಮಾಡಿದೆ ಎಂದು ನಟ ಯೋಗೀಶ್ ಬಾಯಲ್ಲಿ ಹೇಳಿಸುವಲ್ಲಿ ಸಫಲವಾದ ಜೆಡಿಎಸ್ ವಿವಾದಕ್ಕೆ ನಾಂದಿ ಹಾಡಿತು. ನಾವು ಮತ ಕೇಳಲಷ್ಟೇ, ಅಭಿಮಾನಿಗಳು ಡೈಲಾಗ್ ಹೇಳಿ ಎಂದರೆ ನಾವೇನು ಮಾಡಲಾಗುತ್ತದೆ ಎಂದು ನಟ, ನಟಿಯರು ಸಮಜಾಯಿಷಿ ನೀಡಿದರು. ಅಂತಿಮವಾಗಿ ಬಿಜೆಪಿ ನಾಯಕರಿಗೂ ಸಂಕಟವಾಗಿದ್ದು ಸುಳ್ಳಲ್ಲ.
ಇಕ್ಕಟ್ಟಿನಲ್ಲಿ ಸಿಲುಕಿದ ಅಭ್ಯರ್ಥಿಗಳು
ಘಟಾನುಘಟಿ ಅಭ್ಯರ್ಥಿಗಳೆದರು ಕಣಕ್ಕಿಳಿದ ಪಕ್ಷೇತರ ಅಭ್ಯರ್ಥಿಗಳ ಪೈಕಿ ಇಬ್ಬರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಚುನಾವಣಾ ನೀತಿ ಸಂಹಿತೆಯಂತೆ ನಿಗದಿತ ದಿನದಂದು ಅಭ್ಯರ್ಥಿಯ ಚುನಾವಣಾ ಲೆಕ್ಕವನ್ನು ಅಧಿಕಾರಿಗಳ ಮುಂದೆ ಹಾಜರುಪಡಿಸಬೇಕು. ಆದರೆ, ಮೂವರು ಪಕ್ಷೇತರ ಅಭ್ಯರ್ಥಿಗಳು ಲೆಕ್ಕಪತ್ರಗಳನ್ನು ಕಾಲಕಾಲಕ್ಕೆ ಸಲ್ಲಿಸದ ಕಾರಣ ಜಿಲ್ಲಾ ಚುನಾವಣಾಧಿಕಾರಿ ಅವರಿಂದ ನೋಟಿಸ್ ಪಡೆದಿದ್ದಾರೆ. ಕಾನೂನು ಕ್ರಮ ಎದುರಿಸುವ ಎಚ್ಚರಿಕೆಯನ್ನೂ ಸ್ವೀಕರಿಸಿದ್ದಾರೆ.
ಸ್ತ್ರೀಶಕ್ತಿ ಸಂಘಟನೆಗಳು ಗೌಣ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಪಾತ್ರ ವಹಿಸಿದ್ದ ಸ್ತ್ರೀಶಕ್ತಿ ಗುಂಪು, ಸ್ವಸಹಾಯ ಗುಂಪುಗಳು ಲೋಕಸಭಾ ಚುನಾವಣೆಯಲ್ಲಿ ಗೌಣವಾಗಿದ್ದವು. ಸಾಕಷ್ಟು ಸಂಘಗಳು ಪ್ರಚಾರಕ್ಕೆ, ರ್ಯಾಲಿಯಲ್ಲಿ ಪಾಲ್ಗೊಳ್ಳಲು ಮೊತ್ತ ನಿಗದಿಪಡಿಸಿ ರಾಜಕೀಯ ಪಕ್ಷಗಳನ್ನೇ ದಂಗುಬಡಿಸಿದ್ದವು. ಆದರೆ, ಈ ಬಾರಿ ಅಲ್ಲಲ್ಲಿ ಸಂಘಟನೆಗಳು ತೊಡಗಿಕೊಂಡಿದ್ದು ಬಿಟ್ಟರೆ ರಾಜಕೀಯ ಪ್ರವೇಶದಿಂದ ಸಂಘಟನೆಗಳು ದೂರ ಉಳಿದವು ಎಂದೇ ಹೇಳಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.