ಅಬ್ಬಲಗೆರೆ ಸರ್ಕಾರಿ ಶಾಲೆಗೆ ಬೆಂಕಿಯಿಟ್ಟ ಕಿಡಿಗೇಡಿಗಳು
ಶಿವಮೊಗ್ಗ: ದುಷ್ಕರ್ಮಿಗಳ ತಂಡ ಇಲ್ಲಿನ ಅಬ್ಬಲಗೆರೆ ಸರ್ಕಾರಿ ಪ್ರೌಢಶಾಲೆಯೊಳಗೆ ನುಗ್ಗಿ ಬೆಂಕಿ ಹಾಕಿ ದಾಖಲೆಗಳನ್ನು ಸುಟ್ಟುಹಾಕಿದೆ. ಏ.19ರ ತಡರಾತ್ರಿ ಈ ಘಟನೆ ನಡೆದಿದ್ದು, ಭಾನುವಾರ ಮುಂಜಾನೆ ಗ್ರಾಮಸ್ಥರ ಗಮನಕ್ಕೆ ಬಂದಿದೆ.
ಶಿವಮೊಗ್ಗ ಗ್ರಾಮಾಂತರ ಠಾಣೆಯ ಪೊಲೀಸರು ಶ್ವಾನ ದಳದೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಶಾಲೆ ಗ್ರಾಮದ ಹೊರವಲಯದಲ್ಲಿದೆ. ಇಲ್ಲಿ ಕುಡುಕರು ಆಗಾಗ ಬಂದು ಗುಂಪು ಸೇರುತ್ತಿದ್ದರು. ಈ ಹಿಂದೆ ಕೂಡ ಈ ಶಾಲೆಯ ಒಂದು ಕೊಠಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ವ್ಯಾಪಕ ನಷ್ಟ ಸಂಭವಿಸಿತ್ತು ಎಂದು ಗ್ರಾಮಸ್ಥರು ದೂರಿದ್ದಾರೆ.
ವ್ಯಾಪಕ ಶೋಧ: ಶನಿವಾರ ರಾತ್ರಿ ಶಾಲೆಯ 8 ಕೊಠಡಿಗಳ ಬೀಗ ಒಡೆದು ಒಳನುಗ್ಗಿದ ಕಿಡಿಗೇಡಿಗಳು, ಬೀರು ಹಾಗೂ ಕಪಾಟನ್ನು ಹೊರಗೆ ಎಳೆದು ತಂದಿದ್ದಾರೆ. ಶಾಲೆಯಲ್ಲಿದ್ದ ಪುಸ್ತಕ, ದಾಖಲೆ, ಉತ್ತರ ಪತ್ರಿಕೆ, ಮಕ್ಕಳ ಸಮವಸ್ತ್ರ ಎಲ್ಲದಕ್ಕೂ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಶಾಲೆಯ ಪೀಠೋಪಕರಣಗಳಿಗೂ ಹಾನಿಯಾಗಿದೆ. ಮುಖ್ಯ ಶಿಕ್ಷಕರ ಕಚೇರಿ ಕೊಠಡಿಯ ಬೀಗ ಒಡೆಯಲು ಯತ್ನಿಸಿದರಾದರೂ ಅದರಲ್ಲಿ ಯಶಸ್ವಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸ್ಥಳೀಯರ ಹೇಳಿಕೆ ಪಡೆದು, ಸ್ಥಳದಲ್ಲಿ ಸಾಕ್ಷಿಗಾಗಿ ವ್ಯಾಪಕ ಶೋಧ ನಡೆಸಿದ್ದಾರೆ.
ದಾಖಲೆ ಸುಡುವ ಗುರಿಯೇ: ವಿಕೃತ ಮನಸ್ಸಿನ ವ್ಯಕ್ತಿಗಳು ಶಾಲೆಯ ಮೇಲೆ ದಾಳಿ ನಡೆಸಿ ದಾಖಲೆ ಸುಟ್ಟಿದ್ದಾರೋ ಅಥವಾ ಶಾಲೆಯಲ್ಲಿರುವ ಮೂಲ ದಾಖಲೆಗಳನ್ನು ಸುಡುವುದಕ್ಕಾಗಿ ಈ ರೀತಿ ನಡೆದುಕೊಂಡರೇ ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕಾಗಿದೆ.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೇಮಕಾತಿ ಸಂದರ್ಭ ಸುಳ್ಳು ದಾಖಲೆ ನೀಡಿ ಉದ್ಯೋಗ ಪಡೆದುಕೊಂಡವರು ಮೂಲ ದಾಖಲೆ ಪರಿಶೀಲನೆ ಸಂದರ್ಭ ತಮ್ಮ ಬಣ್ಣ ಬಯಲಾಗುತ್ತದೆ ಎಂಬ ಕಾರಣ ಮೂಲ ದಾಖಲೆಯನ್ನು ತಿರುಚುವ ಅಥವಾ ನಾಶ ಮಾಡುವ ಸಾಧ್ಯತೆಯೂ ಇದಾಗಿರಬಹುದೆಂದು ಶಂಕಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

