ಬಾಲಗ್ರಹ ಪೀಡಿತ ಕೃಷಿ, ತೋಟಗಾರಿಕೆ ವಿವಿ
ಹೊನ್ನಾಳಿ ಚಂದ್ರಶೇಖರ್
ಶಿವಮೊಗ್ಗ: ಬೆಂಗಳೂರು ಕೃಷಿ ವಿವಿ ಹಾಗೂ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯವನ್ನು ವಿಭಜಿಸಿ ಆರಂಭಿಸಿರುವ ರಾಜ್ಯದ ಮೊಟ್ಟಮೊದಲ ಬಹುಶಿಸ್ತೀಯ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಮಸ್ಯೆಗಳು ನಿಧಾನವಾಗಿ ಇಲ್ಲವಾಗುತ್ತಿವೆ. ಬೆಂಗಳೂರು ಹಾಗೂ ಬಾಗಲಕೋಟೆ ವಿವಿಯಿಂದ ಬರಬೇಕಿದ್ದ ಆಸ್ತಿಗಳೆಲ್ಲಾ ಈಗ ಹೊಸ ವಿವಿಗೆ ಹಸ್ತಾಂತರವಾಗಿದೆ.
ಆದರೆ ಬಹುಮುಖ್ಯವಾಗಿ ಹಸ್ತಾಂತರವಾಗಬೇಕಿದ್ದ ಕೃಷಿ ವಿಜ್ಞಾನ ಕೇಂದ್ರಗಳೇ ನೂತನ ವಿವಿ ವ್ಯಾಪ್ತಿಗೆ ಬಂದಿಲ್ಲ. ಇದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿ ಬಾಲಗ್ರಹದಿಂದ ಮುಕ್ತವಾಗಿಲ್ಲ ಎಂದು ತೋರಿಸುತ್ತಿದೆ.
ಸರ್ಕಾರಿ ಆದೇಶ: ಮೂಲ ಎರಡು ವಿಶ್ವವಿದ್ಯಾಯಗಳೊಂದಿಗೆ ಶಿವಮೊಗ್ಗ ವಿವಿ ಉನ್ನತಾಧಿಕಾರಿಗಳು ಜಂಟಿ ಸಭೆ ನಡೆಸಿ ನಿರ್ಣಯಿಸಿದಂತೆ ಶಿವಮೊಗ್ಗ ವಿವಿ ವ್ಯಾಪ್ತಿಯಲ್ಲಿರುವ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿರುವ ಎಲ್ಲಾ ಸಂಯೋಜಿತ ಕೃಷಿ ಕಾಲೇಜುಗಳು, ಸಂಶೋಧನಾ ಕೇಂದ್ರಗಳು, ಅವುಗಳಿಗೆ ಹೊಂದಿಕೊಂಡಿರುವ ಎಲ್ಲಾ ಬಗೆಯ ಸ್ಥಿರ ಹಾಗೂ ಚರಾಸ್ತಿಗಳನ್ನು ನೂತನ ವಿವಿಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಸರ್ಕಾರವೂ ಅಧಿಸೂಚನೆ ಹೊರಡಿಸಿದ್ದು, ಇವುಗಳ ಮೇಲೀಗ ಮೂಲ ವಿವಿಗಳ ಯಾವ ಅಧಿಕಾರವೂ ಇಲ್ಲ.
ಏನೇನು ಹಸ್ತಾಂತರ: ಮುಖ್ಯವಾಗಿ ಕೃಷಿ ಭೂಮಿ ನೂತನ ವಿವಿ ವ್ಯಾಪ್ತಿಗೆ ಬಂದಿದೆ. ಇದರೊಂದಿಗೆ ಕಾಲೇಜು ಕಟ್ಟಡಗಳು, ಹಾಸ್ಟೆಲ್ ಕಟ್ಟಡಗಳು, ವಸತಿ ಗೃಹಗಳು, ಕಚೇರಿ ಕಟ್ಟಡಗಳು, ಎಲ್ಲಾ ಬಗೆಯ ವಾಹನಗಳು ಸೇರಿವೆ. ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಜವಾಬ್ದಾರಿಯೂ ಸಹ ಈಗ ಶಿವಮೊಗ್ಗದ ವಿವಿಗೆ ಸೇರಿದಂತಾಗಿದೆ.
ತೋಟಗಾರಿಕೆ ವಿವಿ ವ್ಯಾಪ್ತಿಯ ಶೃಂಗೇರಿ ಕ್ಯಾಂಪಸ್, ಉಲ್ಲಾಳದ ತೋಟಗಾರಿಕೆ ಸಂಶೋಧನಾ ಕೇಂದ್ರ, ತೀರ್ಥಹಳ್ಳಿಯ ತೋಟಗಾರಿಕೆ ಸಂಶೋಧನಾ ಕೇಂದ್ರಗಳು, ಶಿವಮೊಗ್ಗದ ಕ್ಯಾಂಪಸ್, ಇತರೆಡೆ ಇರುವ ಕಾಲೇಜು ಕ್ಯಾಂಪಸ್ ಗಳು ಬಂದಿವೆ.
ಏನು ಬಂದಿಲ್ಲ: ಮೂಲ ವಿವಿ ವ್ಯಾಪ್ತಿಯ ಆಸ್ತಿಗಳೆಲ್ಲಾ ಬಂದಿವೆ. ಆದರೆ ಭಾರತೀಯ ಕೃಷಿ ಅನುಸಂದಾನ ಪರಿಷತ್ ನಿರ್ವಹಿಸುತ್ತಿರುವ ನಾಲ್ಕು ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆ) ಇನ್ನೂ ಸುಪರ್ದಿಗೆ ಬಂದಿಲ್ಲ. ಉಡುಪಿ ಜಿಲ್ಲೆಯ ಬ್ರಹ್ಮಾವರ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಶಿವಮೊಗ್ಗದ ನವುಲೆ, ಚಿತ್ರದುರ್ಗದ ಹಿರಿಯೂರಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರಗಳು ಇನ್ನೂ ಬೆಂಗಳೂರು ವಿವಿ ನಿರ್ವಹಣೆಯಲ್ಲಿಯೇ ಇವೆ. ಇದಲ್ಲದೇ ಕೃಷಿ ವಿಜ್ಞಾನ ಕೇಂದ್ರಗಳು ನಿರ್ವಹಿಸುತ್ತಿರುವ ಬೆಳೆ ಯೋಜನೆಗಳೂ ಹಸ್ತಾಂತರವಾಗಿಲ್ಲ.
ಇದರಿಂದ ಹೊಸ ವಿವಿ ಆಡಳಿತಕ್ಕೆ ಸಮಸ್ಯೆಯಾಗುತ್ತಿದೆ. ಕೃಷಿ ವಿಜ್ಞಾನ ಕೇಂದ್ರಗಳು ಯಾವ ಕೆಲಸ ಮಾಡಬೇಕೆಂದರೂ ಬೆಂಗಳೂರು ವಿವಿ ಮುಖಾಂತರವೇ ಸಾಗಬೇಕಿದೆ. ಅಲ್ಲದೇ, ಹಣಕಾಸು ಅಧಿಕಾರ ಬೆಂಗಳೂರು ವಿವಿ ಇಟ್ಟುಕೊಂಡಿರುವುದರಿಂದ ಯೋಜನೆ ಕುಂಟುತ್ತಾ ಸಾಗಿವೆ.
ಇನ್ನೇನು ಇವು ನಮ್ಮ ಪಾಲಿಗೆ ಇರುವುದಲ್ಲ ಎಂದು ಭಾವಿಸಿರುವ ಬೆಂಗಳೂರು ಕೃಷಿ ವಿವಿಯು ಈ ಕೇಂದ್ರಗಳತ್ತ ಗಂಭೀರವಾಗಿ ಗಮನ ಹರಿಸುತ್ತಿಲ್ಲ. ಇತ್ತ ಶಿವಮೊಗ್ಗ ವಿವಿಯು ಹಸ್ತಾಂತರವಾಗುವವರೆಗೂ ಏನೂ ಮಾಡುವಂತಿಲ್ಲ. ಹಾಗಾಗಿ ವಿವಿ ಉನ್ನತಾಧಿಕಾರಿಗಳು ತೀರ್ಮಾನ ಕೈಗೊಳ್ಳುವಾಗ, ಹೊಸ ಕೆಲಸ ಕೈಗೆತ್ತಿಕೊಳ್ಳುವಾಗ ಸಮಸ್ಯೆಗಳಾಗುತ್ತಿವೆ.
ಕೆಲವು ಯೋಜನೆಗಳನ್ನು ಸಲ್ಲಿಸುವಾಗ ಹಣಕಾಸು ನೆರವು ಸಿಗುತ್ತಿಲ್ಲ. ಈ ಮೂರೂ ಕೆವಿಕೆ ಸಿಬ್ಬಂದಿಗೀಗ ಇಬ್ಬರು ಬಾಸ್. ಒಬ್ಬರು ಶಿವಮೊಗ್ಗದಲ್ಲಿದ್ದರೆ, ಇನ್ನೊಬ್ಬರು ಬೆಂಗಳೂರಲ್ಲಿ.
ಆಗಬೇಕಿರುವುದಿಷ್ಟೇ: ಭಾರತೀಯ ಕೃಷಿ ಅನುಸಂದಾನ ಪರಿಷತ್ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕು. ಬೆಂಗಳೂರು ಕೃಷಿ ವಿವಿ ಹಸ್ತಾಂತರಿಸಬೇಕು. ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿ ಸ್ವೀಕರಿಸಬೇಕು.
ಇದೂವರೆಗೂ ಚುನಾವಣೆ ನೆವ ಹೇಳಿದ್ದಾಯಿತು. ಯಾವತ್ತು ಶಿವಮೊಗ್ಗ ವಿವಿ ಬಾಲಗ್ರಹದಿಂದ ಮುಕ್ತವಾಗುವುದೋ ಕಾಯುವಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

