ಶಿವಮೊಗ್ಗ

ಸಾಂಕ್ರಾಮಿಕ ರೋಗ ತಡೆಗೆ ಅಭಿಯಾನ

Published On :

ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಏ.27
ಮುಂಬರುವ ದಿನಗಳಲ್ಲಿ ಸಾಂಕ್ರಾಮಿಕ ರೋಗ ಬಾರದಂತೆ ಮುಂಜಾಗ್ರತೆ ವಹಿಸುವ ಉದ್ದೇಶದಿಂದ ಮನೆಮನೆಗೆ ಆರೋಗ್ಯ ಇಲಾಖೆ ಎಂಬ ಪಲ್ಸ್ ಪೊಲಿಯೋ ಮಾದರಿ ಅಭಿಯಾನ ನಡೆಸಲು ಸಚಿವ ಯು.ಟಿ. ಖಾದರ್ ಸೂಚಿಸಿದ್ದಾರೆ.
ಜಿಪಂ ಸಭಾಂಗಣದಲ್ಲಿ ಭಾನುವಾರ ನಡೆದ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಾಂಕ್ರಾಮಿಕ ರೋಗ ಬಂದ ಮೇಲೆ ಕ್ರಮ ಕೈಗೊಳ್ಳುವ ಬದಲು ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತೆ ವಹಿಸುವುದು ಮುಖ್ಯ. ಹೀಗಾಗಿ ಮುಂದಿನ ಒಂದೂವರೆ ತಿಂಗಳಲ್ಲಿ ಬೇರೆ ಕೆಲಸಗಳನ್ನು ಬದಿಗೊತ್ತಿ ಆಂದೋಲನ ಮಾದರಿಯಲ್ಲಿ ಜಾಗೃತಿ ಕಾರ್ಯಕ್ರಮ ಜಾರಿಗೊಳಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಮುಂಜಾಗ್ರತೆ ಅಗತ್ಯ: ಏಪ್ರಿಲ್ ಮತ್ತು ಮೇ ತಿಂಗಳು ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ವೈದ್ಯಾಧಿಕಾರಿಗಳು ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತೆ ವಹಿಸಬೇಕು. ಈ ಸಲುವಾಗಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯಾಧಿಕಾರಿಗಳು ಒಂದು ರಿಜಿಸ್ಟ್ರರ್ ಪುಸ್ತಕ ಹಾಗೂ ಬ್ಲೀಚಿಂಗ್ ಪೌಡರ್‌ನೊಂದಿಗೆ ಮನೆಮನೆ ತಲುಪಿ ಶುಚಿತ್ವದ ಬಗ್ಗೆ ಸಾರ್ವಜನಿಕರಲ್ಲಿ ತಿಳಿಸಿ ಹೇಳಬೇಕು ಹಾಗೂ ಅವರ ಸಮಸ್ಯೆ ಪಟ್ಟಿ ಮಾಡಬೇಕು. ಇದು ಪಲ್ಸ್ ಪೋಲಿಯೋ ಮಾದರಿಯಲ್ಲಿ ಸಮರೋಪಾದಿಯಲ್ಲಿ ಆಗಬೇಕೆಂದು ತಾಕೀತು ಮಾಡಿದರು.
ವೈದ್ಯರ ಕೊರತೆ ನೆಪ ಹೇಳಬೇಡಿ ಎಂದ ಅವರು, ಖಾಲಿ ಹುದ್ದೆ ಭರ್ತಿಗೆ ಹಂತಹಂತವಾಗಿ ಕ್ರಮ ಕೈಗೊಳ್ಳಲಾಗುವುದು. ಆದರೆ ಪ್ರಸ್ತುತ ಇರುವ ವೈದ್ಯರು ಸಮರ್ಪಕವಾಗಿ ಕೆಲಸ ನಿರ್ವಹಿಸಿದರೆ ಭಾಗಶಃ  ಸಮಸ್ಯೆ ಪರಿಹರಿಸಬಹುದಾಗಿದೆ. ಸಿಬ್ಬಂದಿ ಕೊರತೆ ಚಿಂತೆ ಮಾಡದೇ ಸಾರ್ವಜನಿಕ ಸ್ವಾಸ್ತ್ಯದ ಬಗ್ಗೆ ಕಾಳಜಿ ತೋರಬೇಕು ಎಂದು ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಮಂಗನ ಕಾಯಿಲೆ: ಇನ್ನು ಜಿಲ್ಲೆಯಲ್ಲಿ ಪ್ರಮುಖವಾಗಿ ಕಾಡುತ್ತಿರುವ ಮಂಗನ ಖಾಯಿಲೆ ನಿಯಂತ್ರಣದಲ್ಲಿರುವ ಬಗ್ಗೆ ಮಾಹಿತಿ ಇದ್ದು, ಸಂಬಂಧಿತ ಔಷಧ, ಲಸಿಕೆ ಪೂರೈಕೆ ಸಮರ್ಪಕವಾಗಿರಲಿ ಎಂದರು. ಅಲ್ಲದೆ ರಕ್ತ ಪರೀಕ್ಷೆ ಪ್ರಯೋಗಾಲಯ ಶೀಘ್ರದಲ್ಲಿ ಅರಂಭವಾಗುವುದರಿಂದ ಬಹುತೇಕ ಸಮಸ್ಯೆ ಬಗೆಹರಿಯಲಿವೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಸಿಕಾಂತ್ ಸೆಂಥಿಲ್, ನಗರಪಾಲಿಕೆ ಮೇಯರ್ ಖುರ್ಷಿದಾ ಬಾನು, ಜಿಲ್ಲಾ ವೈದ್ಯಾಧಿಕಾರಿ ಡಾ. ರಾಜೇಶ್ ಉಪಸ್ಥಿತರಿದ್ದರು.


ಖಾಸಗಿ ವೈದ್ಯರ ಸೇವೆಗೆ ಸೂಚನೆ

ಜಿಲ್ಲೆಯಲ್ಲಿ ವೈದ್ಯರ ಕೊರೆತೆ ಎದುರಿಸುತ್ತಿರುವ ಸರ್ಕಾರಿ ಆರೋಗ್ಯ ಕೇಂದ್ರ, ಆಸ್ಪತ್ರೆಗಳಿಗೆ ಖಾಸಗಿ ವೈದ್ಯರ ನೆರವು ಪಡೆಯುವಂತೆ ಸಚಿವ ಯು.ಟಿ. ಖಾದರ್ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದ್ದಾರೆ.
ಕೂಡಲೇ ಖಾಸಗಿ ವೈದ್ಯರ ಸಭೆ ಕರೆದು ಸಮಸ್ಯೆ ವಿವರಿಸಿ ಸಹಕಾರ ನೀಡುವಂತೆ ಕೋರಬೇಕು ಎಂದು ತಿಳಿಸಿದರು.
ಎಂಬಿಬಿಎಸ್ ವೈದ್ಯರು, ತಜ್ಞ ವೈದ್ಯರು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಗಂಟೆ ಆಧಾರದಲ್ಲಿ, ಪ್ರಕರಣದ ಆಧಾರದಲ್ಲೇ ಸೇವೆ ನೀಡಿ, ಗೌರವಧನ ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದ್ದು, ಈ ವಿಷಯ ಪ್ರಸ್ತಾಪಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ 97 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಇಲ್ಲಿ 137 ವೈದ್ಯರು ಕಾರ್ಯನಿರ್ವಹಿಸಬೇಕು. ಸದ್ಯ 91 ಮಂದಿಯಷ್ಟೇ ಸೇವೆಯಲ್ಲಿದ್ದಾರೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಡಿಎಚ್‌ಒ ಅವರು ಸಚಿವರ ಗಮನಕ್ಕೆ ತಂದರು.


ನಕಲಿ ವೈದ್ಯರ ಹಾವಳಿ ಬಗ್ಗೆ ಅಸಮಾಧಾನ


ನಕಲಿ ವೈದ್ಯನಾದವನು ರಾಜಾರೋಷವಾಗಿ ಬೋರ್ಡ್ ಹಾಕಿ ಕ್ಲಿನಿಕ್ ನಡೆಸುತ್ತಿದ್ದರೂ ನೀವೇನು ಮಾಡುತ್ತಿದ್ದೀರಾ, ಎಷ್ಟು ಪ್ರಕರಣ ದಾಖಲಿಸಿದ್ದೀರಾ, ಎಷ್ಟು ಜನರನ್ನು ಜೈಲಿಗೆ ಕಳುಹಿಸಿದ್ದೀರಾ ಎಂದು ಆಯುಷ್ ಅಧಿಕಾರಿಯನ್ನು ಸಚಿವರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ನಗರ ಪ್ರದೇಶದಲ್ಲಿ ಬೋರ್ಡ್ ಹಾಕಿಕೊಂಡು ಕ್ಲಿನಿಕ್ ನಡೆಸುತ್ತಿದ್ದರೂ, ನೀವೇಕೆ ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ನಕಲಿ ವೈದ್ಯರನ್ನು ಹಿಡಿಯಲು ಕಾನೂನಿನ ಅಸ್ತ್ರವಿದೆ, ಕೂಡಲೇ ಕ್ರಮಕೈಗೊಳ್ಳಿ, ಇಲ್ಲವಾದರೆ ನೀವೇ ಜವಾಬ್ದಾರರಾಗುತ್ತೀರಾ. ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.