ಶಿವಮೊಗ್ಗ

ಸರ್ಕಾರ ದೃಷ್ಟಿ ಬದಲಿಸಿಕೊಳ್ಳಲಿ: ಬಿಜೆಪಿ ಆಗ್ರಹ

Published On :

ಕ.ಪ್ರ. ವಾರ್ತೆ, ಶಿವಮೊಗ್ಗ, ಏ.28
ಅಪರಾಧಿಗಳನ್ನು ಕೋಮು ಆಧಾರದ ಮೇಲೆ ನೋಡುವ, ಅವರನ್ನು ರಕ್ಷಿಸುವ, ಪ್ರೋತ್ಸಾಹ ನೀಡುವ ರೀತಿನೀತಿಗಳನ್ನು ಸರ್ಕಾರ ಕೈಬಿಡಬೇಕೆಂದು ಜಿಲ್ಲಾ ಬಿಜೆಪಿ ಆಗ್ರಹಿಸಿದೆ. ಜೊತೆಗೆ ಈ ನಡೆಯನ್ನು ತಿದ್ದಿಕೊಳ್ಳದೆ ಇದ್ದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ಖಂಡಿಸಿದರು.
ನೈತಿಕ ಸ್ಥೈರ್ಯ ಕುಸಿತ: ಅಕ್ರಮವಾಗಿ ಗೋವುಗಳನ್ನು ಸಾಗಿಸುವಾಗ ಎಎನ್‌ಎಫ್ ಸಿಬ್ಬಂದಿ ಗುಡಿನಿಂದ ಹತನಾದ ಕಬೀರ್ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಅತ್ಯಂತ ಖಂಡನೀಯ. ಈ ಪ್ರಕರಣದಲ್ಲಿ ಅಪರಾಧಿಗಳಿಗೆ ಕುಮ್ಮಕ್ಕು ನೀಡುವಂತಹ ಹಾಗೂ ಕರ್ತವ್ಯನಿರತ ಪೊಲೀಸರ ನೈತಿಕ ಸ್ಥೈರ್ಯ ಕುಸಿಯುವಂತಹ ಕಾಂಗ್ರೆಸ್ ನಡೆಯನ್ನು ಖಂಡಿಸುವುದಾಗಿ ಪ್ರತಿಭಟನಾ ನಿರತ ಬಿಜೆಪಿ ಮುಖಂಡರು ತಿಳಿಸಿದರು.
ಹತನಾದ ವ್ಯಕ್ತಿ ಒಂದು ನಿರ್ದಿಷ್ಟ ಕೋಮಿಗೆ ಸೇರಿದ್ದಾನೆಂಬ ಕಾರಣಕ್ಕೆ ಸರ್ಕಾರ ಈ ವಿಷಯವನ್ನು ಇಷ್ಟೊಂದು ದೊಡ್ಡದಾಗಿ ಮಾಡಲಾಗುತ್ತಿದೆ. ಉದ್ದೇಶಪೂರ್ವಕವಾಗಿ ಎನ್‌ಕೌಂಟರ್ ನಡೆದಿದೆ ಎಂಬ ರೀತಿಯಲ್ಲಿ ಪರಿಸ್ಥಿತಿ ಸೃಷ್ಟಿ ಮಾಡಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ದತ್ತಾತ್ರಿ ಆರೋಪಿಸಿದರು.
ತನಿಕೋಡು ಸೂಕ್ಷ್ಮ ಚೆಕ್‌ಪೋಸ್ಟ್ ಆಗಿದ್ದು, ಇದೇ ಸ್ಥಳದಲ್ಲಿ ನಕ್ಸಲರು ಚೆಕ್‌ಪೋಸ್ಟ್‌ನಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ್ದರು. 2013ರಲ್ಲಿ ಸಿಸಿಟಿವಿ ಜಖಂ ಮಾಡಿದ್ದರು. ಹೀಗಾಗಿ ಈ ಪ್ರದೇಶವನ್ನು ಸೂಕ್ಷ್ಮಸ್ಥಳವೆಂದು ಭಾವಿಸಲಾಗುತ್ತದೆ. ಅಲ್ಲದೇ ಇಲ್ಲಿನ ನಡೆಯುವ ಪ್ರತಿ ಘಟನೆ, ವ್ಯಕ್ತಿಯನ್ನು ಅನುಮಾನದಿಂದ ನೋಡುವ ಸ್ವಭಾವ ಪೊಲೀಸರಿಗಿರುತ್ತದೆ. ಹೀಗಿರುವಾಗ ಕಬೀರ್ ಪೊಲೀಸರ ಕಂಡೊಡನೆ ಓಡುವ ಅವಶ್ಯಕತೆ ಏನಿತ್ತು, ಓಡದೇ ಇದ್ದಿದ್ದರೆ ಜೀವ ಉಳಿಯುತ್ತಿತ್ತು. ಕಬೀರ್ ಶಂಕಾಸ್ಪದವಾಗಿ ವರ್ತಿಸಿ ಓಡಿದ್ದರಿಂದಲೇ ನಕ್ಸಲೀಯರೆಂದು ಭಾವಿಸಿ ಪೊಲೀಸರು ಗುಂಡು ಹಾರಿಸಿದ್ದಾರೆ. ಇದೊಂದು ಆಕಸ್ಮಿಕ ಘಟನೆ ಎಂದು ದತ್ತಾತ್ರಿ ವಿವರಿಸಿದರು.
ಗುಲ್ಬರ್ಗದಲ್ಲಿ ಪೊಲೀಸ್ ಅಧಿಕಾರಿಯೇ ಎನ್‌ಕೌಂಟರ್‌ನಲ್ಲಿ ಮೃತರಾದ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್ ಕುಟುಂಬಕ್ಕೆ ಬಿಜೆಪಿ ಹಾಗೂ ಸಾರ್ವಜನಿಕರಿಂದ ಒತ್ತಡ ಬಂದ ನಂತರ 5 ಲಕ್ಷ ಪರಿಹಾರ ನೀಡಿದ ಸರ್ಕಾರ, ಈ ಘಟನೆ ನಡೆದ ಕೂಡಲೇ ಅಕ್ರಮ ಗೋ ಸಾಕಾಣಿಕೆ ಮಾಡಿಕೊಂಡಿದ್ದ ಕಬೀರ್ ಕುಟುಂಬಕ್ಕೆ 10 ಲಕ್ಷ ಘೋಷಿಸಿದರು. ಸಚಿವರಿಂದ ಕಬೀರ್ ಸಂಗಡಿಗರ ಆರೋಪಗಳನ್ನು ಮುಚ್ಚಿಹಾಕುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ರಾಜ್ಯಪಾಲರಿಗೆ ಮನವಿ: ಸರ್ಕಾರ ಅಪರಾಧಿಗಳಿಗೆ ನೀಡುತ್ತಿರುವ ಕುಮ್ಮಕ್ಕು, ಪೊಲೀಸರ ಮೇಲೆ ದಾಖಲಿಸುತ್ತಿರುವ ಕೇಸು ಮುಂತಾದ ಕ್ರಮಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವಾಗಿದೆ ಎಂದು ಬಿಜೆಪಿಯು ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.
ವಿಧಾನಪರಿಷತ್ ಸದಸ್ಯ ಸಿದ್ದರಾಮಣ್ಣ, ಗಿರೀಶ್ ಪಟೇಲ್, ಎಂ. ಮಂಜುನಾಥ್ ನೇತೃತ್ವ ವಹಿಸಿದ್ದರು.


ಪೊಲೀಸ್ ಮೇಲಿನ ಪ್ರಕರಣ ಕೈ ಬಿಡಲು ಒತ್ತಾಯ
ತನಿಕೋಡು ಪ್ರಕರಣದಲ್ಲಿ ಕಬೀರ್ ಮತ್ತು ಸಂಗಡಿಗರ ಕೃತ್ಯಗಳ ಬಗ್ಗೆ ತನಿಖೆಯಾಗಬೇಕು. ಅಪರಾಧ ಕೃತ್ಯದಲ್ಲಿ ತೊಡಗಿದ್ದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಘೋಷಿಸಿರುವ ನಿರ್ಧಾರ ಹಿಂದಕ್ಕೆ ಪಡೆದುಕೊಳ್ಳಬೇಕು. ಇಂತಹ ದುಷ್ಕೃತ್ಯಗಳನ್ನು ನಡೆಯುವ ಬಗ್ಗೆ ಅಗತ್ಯವಾದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಅಪರಾಧಿಗಳ ನಿಗ್ರಹದಲ್ಲಿ ನಿರತರಾಗಿರುವ ಪೊಲೀಸರಿಗೆ ನೈತಿಕ ಬಲ ತುಂಬಬೇಕು, ಜೊತೆಗೆ ಕಾನೂನು ಸುವ್ಯವಸ್ಥೆಯಲ್ಲಿ ತೊಡಗಿಕೊಂಡಿದ್ದ ಪೊಲೀಸರ ಮೇಲೆ ದಾಖಲಿಸಿರುವ ಕೊಲೆ ಪ್ರಕರಣವನ್ನು ವಾಪಸ್ ಪಡೆಯಬೇಕು ಎಂದು ಬಿಜೆಪಿ ಒತ್ತಾಯಿಸಿದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.