'ನಿಗದಿತ ಯೋಜನೆ ಪೂರ್ಣಗೊಳಿಸಿ'
ಕ.ಪ್ರ.ವಾರ್ತೆ , ಭದ್ರಾವತಿ , ಫೆ.1
ಲೋಕಸಭಾ ಚುನಾವಣೆಯೊಳಗೆ ನಿಗದಿತವಾದ ಎಲ್ಲಾ ಯೋಜನೆಗಳ ಕಾರ್ಯವನ್ನು ಶೀಘ್ರವಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು ಅನುಷ್ಠಾನಗೊಳಿಸುವ ಪ್ರಯತ್ನ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ ಹೇಳಿದರು.
ತಾಪಂ ಸಭಾಂಗಣದಲ್ಲಿ ಭದ್ರಾವತಿ ತಾಲೂಕು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ವಿವಿಧ ಇಲಾಖೆಗಳು 2013- 14ನೇ ಸಾಲಿನಲ್ಲಿ ಕೈಗೊಂಡಿರುವ ಕಾರ್ಯಗಳ ಕುರಿತಂತೆ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ಕಳೆದ ಸಾಲಿನಲ್ಲಿ ಅತಿವೃಷ್ಟಿಯಿಂದಾಗಿ ತಾಲೂಕಿನಲ್ಲಿ ಅಡಕೆ ಬೆಳೆಗೆ ತಗುಲಿದ ಕೊಳೆರೋಗದಿಂದ ರೈತರಿಗಾಗಿರುವ ನಷ್ಟ ಹಾಗೂ ಅದಕ್ಕೆ ಕೈಗೊಂಡಿರುವ ಪರಿಹಾರ ಕುರಿತಂತೆ ತೋಟಗಾರಿಕೆ ಇಲಾಖೆ ಯಾವ ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ಅವರು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ತೋಟಗಾರಿಕೆ ಇಲಾಖೆ ಅಧಿಕಾರಿ ರಘುರಾಂ, ಕಳೆದ ಸಾಲಿನಲ್ಲಿ ಅತಿವೃಷ್ಟಿಯಿಂದ ಅಡಕೆ ಬೆಳೆಗೆ ತಗುಲಿದ ಕೊಳೆ ರೋಗದಿಂದಾದ ನಷ್ಟಕ್ಕೆ ಪರಿಹಾರ ಕೋರಿ 4,120 ರೈತರು ಅರ್ಜಿ ಸಲ್ಲಿಸಿದ್ದರು. ಆ ಪೈಕಿ ಎಲ್ಲಾ ಅರ್ಜಿ ಪರಿಶೀಲಿಸಿ, ಸ್ಥಳ ಪರಿಶೀಲನೆ ಮಾಡಿ 3,961 ಅರ್ಜಿದಾರರು ಪರಿಹಾಕ್ಕೆ ಅರ್ಹರಾದವರೆಂದು ಗುರುತಿಸಿ ತಹಸೀಲ್ದಾರ್ ಕಚೇರಿಗೆ ವರದಿಯ ಕಡತ ರವಾನಿಸಲಾಗಿದೆ. ಆದರೆ, ಪರಿಹಾರ ವಿತರಣೆ ಕಾರ್ಯ ಇನ್ನೂ ಪೂರ್ಣಗೊಂಡಿರುವುದಿಲ್ಲ. ಪರಿಹಾರ ವಿತರಿಸುವ ಕಾರ್ಯ ತಹಸೀಲ್ದಾರ್ ಕಚೇರಿಯಿಂದ ಆಗಬೇಕಿದೆ ಎಂದರು.
ಹಾಸ್ಟೆಲ್ ದುರಸ್ತಿ: ಬಿಸಿಎಂ ಇಲಾಖೆ ಅಧಿಕಾರಿ ಕುಮಾರ್, ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನ ವರದಿ ವಾಚಿಸುತ್ತಾ, ತಾಲೂಕಿನಲ್ಲಿ 9 ಬಿಸಿಎಂ ಮತ್ತು 2 ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಗಳು ಸೇರಿದಂತೆ 11 ವಿದ್ಯಾರ್ಥಿನಿಲಯಗಳಿದ್ದು, 1,027 ವಿದ್ಯಾರ್ಥಿಗಳು ವಾಸ್ತವ್ಯ ಮಾಡಿರುತ್ತಾರೆ. ಜಟ್ಪಟ್ ನಗರ ಮತ್ತು ಕಲ್ಲಿಹಾಳ್ ವಿದ್ಯಾರ್ಥಿ ನಿಲಯಗಳನ್ನು ಆದ್ಯತೆಯ ಮೇರೆಗೆ ತಲಾ 2 ಮತ್ತು 3 ಲಕ್ಷ ವೆಚ್ಚದಲ್ಲಿ ದುರಸ್ತಿ ಕೈಗೆತ್ತಿಕೊಳ್ಳಲಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಜಮೀನು ಗುರುತಿಸುವ ಕೆಲಸ ಪ್ರಗತಿಯಲ್ಲಿದೆ. ಆಹಾರ ವಸತಿ ಯೋಜನೆ ಶುಲ್ಕ ವಿನಾಯಿತಿ ಯೋಜನೆಯಡಿಯಲ್ಲಿ ಒಟ್ಟು 2,458 ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಆನ್ಲೈನ್ ಮುಖಾಂತರ ನೋಂದಾಯಿಸಿಕೊಂಡಿದ್ದು, ಇಲಾಖೆ ನಿವೇಶನ ಬಂದ ತಕ್ಷಣ ಅರ್ಹತೆ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಮಂಜೂರಾತಿ ಮಾಡಲಾಗುವುದೆಂದರು.
ಹಿನ್ನಡೆ: ರೇಷ್ಮೆ ಇಲಾಖೆ ಅಧಿಕಾರಿ ವರದಿ ವಾಚಿಸಿ, ಕಳೆದ ಸಾಲಿನಲ್ಲಿ ಸುರಿದ ಸತತ ಮಳೆಯಿಂದಾಗಿ ರೇಷ್ಮೆ ಕೃಷಿಯಲ್ಲಿ ಸ್ವಲ್ಪ ಹಿನ್ನಡೆಯಾಗಿದೆಯಾದರೂ ಈಗ ಅದನ್ನು ಸರಿದೂಗಿಸುವ ನಿಟ್ಟಿನಲ್ಲಿ ರೇಷ್ಮೆ ಬೆಳೆಗಾರರನ್ನು ಹುರಿದುಂಬಿಸಲಾಗುತ್ತಿದೆ ಎಂದು ವರದಿ ನೀಡಿದರು.
ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ, ಮೀನುಗಾರಿಕೆ, ಮೆಸ್ಕಾಂ, ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖೆಯ ಕಾರ್ಯಾನುಷ್ಠಾನದ ವರದಿ ವಾಚಿಸಿದರು. ಜಿಪಂ ಉಪಾಧ್ಯಕ್ಷೆ ಹೇಮಾಪಾವನಿ, ಜಿಪಂ ಸದಸ್ಯೆ ಸುಜಾತ, ತಾಪಂ ಅಧ್ಯಕ್ಷೆ ಭುವನೇಶ್ವರಿ, ಉಪಾಧ್ಯಕ್ಷೆ ಸೋಮ್ಲಿಬಾಯಿ, ತಾಪಂ ಸದಸ್ಯ ಶ್ರೀನಿವಾಸ್, ಜಿಪಂ ನೋಡಲ್ ಅಧಿಕಾರಿ ಗಣೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

