ಸಮಾಜದಲ್ಲಿ ಸ್ವಸಹಾಯ ಗುಂಪುಗಳ ಪಾತ್ರ ಪ್ರಮುಖ
ಕ.ಪ್ರ.ವಾರ್ತೆ, ಸಾಗರ, ಫೆ. 5
ಮಹಿಳೆಯರು ಆರ್ಥಿಕವಾಗಿ ಸಬಲರಾಗುವಲ್ಲಿ ಹಾಗೂ ಶೋಷಣೆಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಸ್ವಸಹಾಯ ಗುಂಪುಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಅರಣ್ಯ ಖಾತೆ ಸಚಿವ ಬಿ. ರಮಾನಾಥ ರೈ ಹೇಳಿದರು.
ಇಲ್ಲಿನ ನವೋದಯ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘವು ಬುಧವಾರ ಹಮ್ಮಿಕೊಂಡಿದ್ದ ನವೋದಯ ಸ್ವಸಹಾಯ ಸಂಘಗಳ ಸದಸ್ಯರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅವಕಾಶ ಸದುಪಯೋಗವಾಗಲಿ: ಶೋಷಣೆಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ ಪ್ರತಿಯೊಬ್ಬ ಮಹಿಳೆಯು ಶಿಕ್ಷಣ ಹಾಗೂ ಆರ್ಥಿಕ ಸ್ವಾವಲಂಬನೆ ಸಾಧಿಸುವಂತಾಗಬೇಕು. ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ಬದುಕುವ ಶಕ್ತಿಯನ್ನು, ಸ್ವಾವಲಂಬಿ ಬದುಕನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು. ಮಹಿಳೆಯರು ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ನಾವು ಬದಲಾವಣೆಯ ಪರ್ವ ಕಾಲದಲ್ಲಿದ್ದೇವೆ. ಅಧಿಕಾರ ವಿಕೇಂದ್ರಿಕರಣ ಯೋಜನೆಯಡಿ ಹಿಂದುಳಿದ ವರ್ಗದ ಮಹಿಳೆಯರು ಸ್ಥಳೀಯ ಸಂಸ್ಥೆಗಳ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಆಗಿದೆ. ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಮುಂದಾಗಿರುವ ನವೋದಯ ಸ್ವಸಹಾಯ ಸಂಘದ ಕಾರ್ಯ ಸ್ವಾಗತಾರ್ಹ ಎಂದರು.
ಸಾಗರದಲ್ಲಿ ನವೋದಯ ಸ್ವಸಹಾಯ ಸಂಘಗಳ 7ನೇ ಶಾಖೆಗೆ ಚಾಲನೆ ನೀಡಿ ಮಾತನಾಡಿದ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ನಾವು ಆಧುನಿಕ ಶತಮಾನದಲ್ಲಿದ್ದೇವೆ. ತೀವ್ರ ಪೈಪೋಟಿ ಎದುರಿಸುತ್ತಿರುವ ಈ ಹೊತ್ತಿನಲ್ಲಿ ಮಹಿಳೆಯರು ಸಮಾಜಮುಖಿ ಬದುಕನ್ನು ಕಟ್ಟಿಕೊಳ್ಳುವತ್ತ ಗಮನಹರಿಸಬೇಕು ಎಂದು ತಿಳಿಸಿದರು.
ವಿಜ್ಞಾನ ಎಷ್ಟೆ ಮುಂದುವರೆದರೂ ಸಮಾಜದಲ್ಲಿ ಮೂಢನಂಬಿಕೆ, ಕಂದಾಚಾರ ಪೂರ್ಣ ನಿವಾರಣೆಯಾಗಿಲ್ಲ. ಮಹಿಳೆಯರು ಆರ್ಥಿಕ ಸ್ವಾವಲಂಬನೆ ಜೊತೆಗೆ ಇಂತಹ ಸಾಮಾಜಿಕ ಪಿಡುಗುಗಳನ್ನು ನಿವಾರಿಸುವ ಬಗ್ಗೆ ಗಮನ ಹರಿಸಬೇಕು. ನಿಮಗೆ ಸಮಾಜದಲ್ಲಿ ಸ್ವಾತಂತ್ರ್ಯ ಹಾಗೂ ಸಮಾನತೆ ಹಕ್ಕು ದೊರಕಿದೆ. ಇದರ ಸದುಪಯೋಗಪಡೆದುಕೊಂಡು, ಉತ್ಪಾದನೆ ಕ್ಷೇತ್ರಕ್ಕೆ ನಿಮ್ಮನ್ನು ತೊಡಗಿಸಿಕೊಳ್ಳಿ ಎಂದು ಸಲಹೆ ಮಾಡಿದರು.
ಸಂಘದ ಗಣಕೀಕರಣವನ್ನು ಸಾಹಿತಿ ಡಾ. ನಾ. ಡಿಸೋಜ ಉದ್ಘಾಟಿಸಿದರು. ಭದ್ರತಾ ಕೊಠಡಿಯನ್ನು ರೇಣುಕಾ ಉದ್ಘಾಟಿಸಿದರು. ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹಾರಾಡಿ ರಾಜೇಂದ್ರ ಪೈ, ನಗರಸಭೆ ಸದಸ್ಯ ಮಂಜೂರಾಲಿಖಾನ್, ವಿವೇಕ್ ರಾಜ್, ಸುರೇಶ್ ಶೆಟ್ಟಿ ಹಾಜರಿದ್ದರು.
ಅರಣ್ಯ ರಕ್ಷಣೆಗೆ ಸ್ವಯಂಪ್ರೇರಣೆ ಅವಶ್ಯ
ಕ.ಪ್ರ.ವಾರ್ತೆ, ತ್ಯಾಗರ್ತಿ, ಫೆ. 5
ಕರ್ನಾಟಕದ ಪಶ್ಚಿಮಘಟ್ಟ ಮತ್ತು ಇತರ ಪ್ರದೇಶಗಳಲ್ಲಿ ಶತಶತಮಾನಗಳಿಂದ ನಿತ್ಯಹರಿದ್ವರ್ಣ ಕಾಡುಗಳಿವೆ. ಇಂತಹ ಕಾಡು ಉಳಿದು ಬರಲು ಜನರ ಇಚ್ಛಾಶಕ್ತಿಯೇ ಕಾರಣವಾಗಿ. ಭವಿಷ್ಯದಲ್ಲೂ ಅರಣ್ಯ ಸಂರಕ್ಷಣೆ ಹೊಂದಿ ಮುನ್ನಡೆಯಲು ಜನರು ಸ್ವಯಂಪ್ರೇರಿತರಾಗಿ ತೊಡಗಿಕೊಳ್ಳುವುದು ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಅರಣ್ಯ ಖಾತೆ ಸಚಿವ ಬಿ.ರಮಾನಾಥ ರೈ ತಿಳಿಸಿದರು.
ಇಲ್ಲಿಗೆ ಸಮೀಪದ ಹೊಸಗುಂದದ ಉಮಾಮಹೇಶ್ವರ ದೇವರಕಾಡಿನಲ್ಲಿ ಬುಧವಾರ ಅರಣ್ಯ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುದಾರರು 75 ವರ್ಷಗಳಿಂದ ಆ ಪ್ರದೇಶದಲ್ಲಿ ವಾಸಿಸುತ್ತಿರುವ ಬಗ್ಗೆ ದಾಖಲೆ ನೀಡಬೇಕಾಗಿದೆ. ಇಂತಹ ಅವಧಿಯನ್ನು ಕಡಿಮೆಗೊಳಿಸುವ ಬಗ್ಗೆ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
ಹೊಸಗುಂದದ ದೇವರ ಕಾಡಿನಲ್ಲಿರುವ ಸುಮಾರು 650 ವರ್ಷ ಹಳೆಯದಾದ 7.75 ಮೀಟರ್ ಸುತ್ತಳತೆಯ ಮರವನ್ನು ಇದೇ ಸಂದರ್ಭದಲ್ಲಿ ವೀಕ್ಷಿಸಿದರು. ಶ್ರೀಉಮಾಮಹೇಶ್ವರ ದೇವರಕಾಡು ಅರಣ್ಯ ಸಮಿತಿಯ ಸಿ.ಎಂ.ಎನ್. ಶಾಸ್ತ್ರಿ, ಕಾಡಿನ ಸಂರಕ್ಷಣೆ, ಅಭಿವೃದ್ಧಿ ಕುರಿತಂತೆ ಮನವಿ ಸಲ್ಲಿಸಿದರು.
ಅರಣ್ಯ ಇಲಾಖೆಯ ವರಿಷ್ಠ ಅಧಿಕಾರಿಗಳಾದ ಸೂಗೂರು ಜಿ.ವಿ., ವಿನಯ್ ಲೂತ್ರಾ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಬಿಜೂರ್, ಬ್ಯಾನರ್ಜಿ, ವೆಂಕಟೇಶ್ ಜಿ., ರವಿ ಕೆ., ತಾಪಂ ಸದಸ್ಯ ಜ್ಯೋತಿ ಮುರಳೀಧರ್, ದಕ್ಷಿಣ ಕನ್ನಡ ಕಾಂಗ್ರೆಸ್ ಉಪಾಧ್ಯಕ್ಷ ಹಾಜಿ ಬಿ.ಎಚ್.ಖಾದರ್ ಬಂಟ್ವಾಳ, ಕೋವಿ ಪುಟ್ಟಪ್ಪ, ಹೆಡತ್ರಿ ಬಸವರಾಜಗೌಡ, ಶೇಷಗಿರಿ ಹೆಗಡೆ, ರಮೇಶ್, ವಿನಾಯಕ ಭಟ್, ದಿನೇಶ್ ಇತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

