ನೀರಿನ ಹಾಹಾಕಾರ ಎದುರಾಗದಿರಲಿ
ಕ.ಪ್ರ.ವಾರ್ತೆ, ಸೊರಬ ಫೆ.7
ಪ್ರಸಕ್ತ ದಿನಗಳಲ್ಲಿ ತಾಪಮಾನ ಹೆಚ್ಚಳ ಆಗುತ್ತಿರುವ ಹಿನ್ನೆಲೆ ನೀರಿನ ಅಭಾವ ತೋರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್ ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ತಾಲೂಕು ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಕರೆಯಲಾಗಿದ್ದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ನಿಗಾ ವಹಿಸಬೇಕು. ವಿದ್ಯುತ್ಗೆ ಜನರು ಪರದಾಡದಂತೆ, ಅಭಾವವಿರುವ ಗ್ರಾಮಗಳಿಗೆ ನೀರಿನ ಪೂರೈಕೆ, ಶಾಲಾ -ಕಾಲೇಜುಗಳಿಗೆ ನೀರಿನ ಸೌಲಭ್ಯವನ್ನು ಒದಗಿಸಬೇಕು. ಆನವಟ್ಟಿ ಬಿಸಿಎಂ ಹಾಸ್ಟೆಲ್ ಸೇರಿದಂತೆ ಕೆಲ ಹಾಸ್ಟೆಲ್ಗಳಲ್ಲಿ ನೀರಿನ ಅಭಾವ ಕಂಡುಬಂದಿದೆ. ಕುಡಿಯುವ ನೀರು ಮತ್ತು ಹಾಸ್ಟೆಲ್ನ ಸ್ವಚ್ಛತೆ ಕಾಪಾಡುವಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿಗೆ ವಿದ್ಯುತ್ ಸಂಪರ್ಕದ ಅವಶ್ಯಕತೆ ಇದೆ. ಮೆಸ್ಕಾಂ ಅಧಿಕಾರಿಗಳು ತಕ್ಷಣದಲ್ಲಿಯೇ ವಿಳಂಬ ಮಾಡದೆ ಸಂಪರ್ಕ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸೂಚನೆ: ತಾಲೂಕಿನಲ್ಲಿ ವೈದ್ಯರ ಕೊರತೆಯಿರುವ ಕುರಿತು ಪ್ರತಿಬಾರಿ ಸಭೆಗಳಲ್ಲಿ ಚರ್ಚೆಯಾಗುತ್ತದೆ. ಆದರೆ, ಅದಕ್ಕೆ ಪರಿಹಾರವೇ ಸಿಗುತ್ತಿಲ್ಲ. ರಾಜ್ಯಾದ್ಯಂತ ವೈದ್ಯರ ಕೊರತೆ ಇದೆ. ಇರುವ ವೈದ್ಯರನ್ನೇ ವಾರದಲ್ಲಿ ಒಂದು ದಿವಸವಾದರೂ ಅರ್ಧ ದಿನ ಒಂದು ಪ್ರಾಥಮಿಕ ಕೇಂದ್ರದಲ್ಲಿ ಕರ್ತವ್ಯನಿರ್ವಹಿಸುವಂತೆ ನೇಮಿಸಬೇಕು ಎಂದು ಟಿಎಚ್ಓ ಸತೀಶ್ ಅವರಿಗೆ ಸೂಚಿಸಿದರು.
ಸೌಲಭ್ಯವಿರುವೆಡೆ ಉಪಚರಿಸಿ: ಸಭೆಯಲ್ಲಿದ್ದ ಜಿಪಂ ಸದಸ್ಯ ಗುರುಕುಮಾರ್ ಪಾಟೀಲ್ ಮಾತನಾಡಿ, ಡಾಕ್ಟರ್ ಕೊರತೆಯ ನೆಪವೊಡ್ಡಿ ಸಿಬ್ಬಂದಿ ಮತ್ತು ಎಎನ್ಎಂಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ತಾಲೂಕಿನಲ್ಲಿ 12 ಜಾನುವಾರುಗಳು ಕಾಲು- ಬಾಯಿಜ್ವರದಿಂದ ಸಾವನ್ನಪ್ಪಿವೆ. ಅವುಗಳಲ್ಲಿ 3 ದನಗಳಿಗೆ ಪರಿಹಾರ ಸಿಕ್ಕಿದೆ. ಫೆ.15 ರಿಂದ ಮಾ.15 ರವರೆಗೆ ಚುಚ್ಚುಮದ್ದು ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಶುಸಂಗೋಪನೆ ಇಲಾಖೆಯ ಕಿರಿಯ ಸಹಾಯಕ ನಿರ್ದೇಶಕ ಆರ್.ರಂಗಸ್ವಾಮಿ ಸಭೆಗೆ ಮಾಹಿತಿ ನೀಡಿದರು.
2013- 14ನೇ ಸಾಲಿನಲ್ಲಿ ಒಟ್ಟು 741 ಬಸವ ಮನೆಗಳು ಮಂಜೂರಾಗಿವೆ. ಯಾವುದೇ ಮನೆ ಪೂರ್ಣ್ಣಗೊಂಡಿಲ್ಲ ಎಂದು ವಸತಿ ನೋಡಲ್ ಅಧಿಕಾರಿ ಸಭೆಗೆ ತಿಳಿಸಿದರು.
ಕಾಮಗಾರಿ ಪ್ರಗತಿ: ಉದ್ಯೋಗ ಖಾತ್ರಿ ಯೋಜನೆಯಡಿ 36 ಗ್ರಾಮ ಪಂಚಾಯ್ತಿಯಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ವಿವಿಧ ಇಲಾಖೆಗಳಿಂದ ಕೈಗೆತ್ತಿಕೊಳ್ಳಲಾಗಿದೆ. ಪಶುಪಾಲನೆಯಿಂದ 62, ಕೃಷಿ ಇಲಾಖೆಯಿಂದ 24, ತೋಟಗಾರಿಕೆಯಿಂದ 40, ಸಾಮಾಜಿಕ ಅರಣ್ಯದಿಂದ 4, ಜಲಾನಯನದಿಂದ 17 ಫಲಾನುಭವಿಗಳನ್ನು ಗುರುತಿಸಿ ಕೆಲಸ ಕೈಗೆತ್ತಿಕೊಂಡಿದ್ದು, ಪ್ರಗತಿಯಲ್ಲಿದೆ. ಈ ತಿಂಗಳ ಅಂತ್ಯದೊಳಗೆ ಗುರಿ ಸಾಧಿಸಲಾಗುವುದು ಎಂದು ಇ.ಓ.ಇಸ್ಮಾಯಿಲ್ ಖಾನ್ ತಿಳಿಸಿದರು.
ಸಭೆ ಅಧ್ಯಕ್ಷತೆ ಗೀತಾ ಮಲ್ಲಿಕಾರ್ಜುನ್ ವಹಿಸಿದ್ದರು. ಜಿ.ಪಂ. ಸದಸ್ಯರಾದ ಗುರುಕುಮಾರ್ ಪಟೇಲ್, ಕೋಮಲಾ ನಿರಂಜನ್, ಮಲ್ಲಮ್ಮ ಮಲ್ಲಿಕಾರ್ಜುನ, ನೋಡಲ್ ಅಧಿಕಾರಿ ಮಣಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

