ಶಿವಮೊಗ್ಗ

ಮಂಗಳಮುಖಿಗೆ ಕೋರ್ಟ್ ನೌಕರಿ

Published On :

ಶಿವಮೊಗ್ಗ:  ನ್ಯಾಯಾಲಯ ಸದ್ದಿಲ್ಲದೆ ಕಳೆದ ಐದು ತಿಂಗಳಿಂದ ಸಾಮಾಜಿಕ ಕಳಕಳಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಎಲ್ಲಿಯೂ ಸಲ್ಲದ ಮಂಗಲ ಮುಖಿಯರಲ್ಲಿ ಆತ್ಮವಿಶ್ವಾಸ ತುಂಬುವ ಉದ್ದೇಶದಿಂದ ಒಬ್ಬ ಮಂಗಳಮುಖಿಗೆ ನ್ಯಾಯಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಿ ಸಲಹುತ್ತಿದೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಮೂಲದ ಅಮರ್ (ಕಿರಣ) ಶಿವಮೊಗ್ಗದ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದಲ್ಲಿ ಬರೋಬ್ಬರಿ 5 ತಿಂಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಕೋರ್ಟ್ ಅಧಿಕಾರಿಗಳು, ಸಿಬ್ಬಂದಿಯ ಪ್ರೀತಿ ಪಾತ್ರರಾಗಿದ್ದಾರೆ.
ಲೈಂಗಿಕ ಅಲ್ಪಸಂಖ್ಯಾತರಿಗಾಗಿಯೇ ಕಾನೂನು ಸೇವಾ ಪ್ರಾಧಿಕಾರ ವಿಶೇಷ ಕಾರ್ಯಕ್ರಮ ರೂಪಿಸಿತ್ತು. ಆ ಸಂದರ್ಭದಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಕೆಲಸ ಮಾಡುತ್ತಿದ್ದ ಕಿರಣ್, ನ್ಯಾಯಾಲಯ ಅಧಿಕಾರಿಗಳ ಸಂಪರ್ಕಕ್ಕೆ ಬಂದರು. ತಮಗೇಕೆ ನ್ಯಾಯಾಲಯದಲ್ಲಿ ಉದ್ಯೋಗ ಕಲ್ಪಿಸಬಾರದು ಎಂಬ ಪ್ರಸ್ತಾಪವನ್ನು ಧೈರ್ಯವಾಗಿ ನ್ಯಾಯಾಧೀಶರ ಮುಂದಿಟ್ಟಿದ್ದರು.
ಈ ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು ಕಾಯಂ ನೇಮಕಾತಿ ಸಾಧ್ಯವಿಲ್ಲ. ಆದರೆ, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಲು ಇಚ್ಛಿಸಿದರೆ, ಅವಕಾಶ ಕಲ್ಪಿಸುವ ಭರವಸೆ ನೀಡಿದರು. ಆದರೆ, ನ್ಯಾಯಾಲಯದ ಸಿಬ್ಬಂದಿಯಲ್ಲಿ ಮಾತ್ರ ಈ ನಿಲುವು ಸಣ್ಣದಾದ ಅಸಮಾಧಾನಕ್ಕೆ ಕಾರಣವಾಯಿತು. ಆಗಲೂ ನ್ಯಾಯಾಧೀಶರೇ ಸಿಬ್ಬಂದಿಯ ಮನವೊಲಿಸಿದರು. ಸಿಬ್ಬಂದಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತರೊಂದಿಗೆ ಒಗ್ಗುವುದು ಕಷ್ಟ ಎಂಬ ಮನೋಭಾವನೆ ತೊಡೆದು ಹಾಕಿದರು. ಇದೀಗ ಕಿರಣ ಅಲ್ಲಿನ ಸಿಬ್ಬಂದಿಗೆ ಅಚ್ಚುಮೆಚ್ಚು.
ಅಚ್ಚುಕಟ್ಟಾದ ಕೆಲಸ: ತಮಗೆ ಕೊಟ್ಟ ಅಟೆಂಡರ್ ಹುದ್ದೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಕಿರಣ್, ಫೈಲ್ ತಂದುಕೊಡುವುದು, ಕಾಫಿ ಟೀ ವಿತರಣೆ ಸೇರಿದಂತೆ ವಿವಿಧ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಇವರೂ ತಮ್ಮ ಕೆಲಸದಲ್ಲಿ ತೃಪ್ತಿ ಹೊಂದಿದ್ದಾರೆ.
ರಾಜ್ಯದ 3 ನ್ಯಾಯಾಲಯಗಳಲ್ಲಿ ಈ ರೀತಿ ಲೈಂಗಿಕ ಅಲ್ಪಸಂಖ್ಯಾತರಿದ್ದಾರೆ. ಆದರೆ, ಇಬ್ಬರು ಮಹಿಳೆಯರ ಧಿರಿಸಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪುರುಷರ ಧಿರಿಸಿನಲ್ಲಿ ಕಾಣಿಸಿಕೊಳ್ಳುವ ಏಕೈಕ ವ್ಯಕ್ತಿ ಕಿರಣ್.
ನನ್ನ ಸಮುದಾಯ ದೊಡ್ಡದಿದೆ. ಪಡಿತರ ಚೀಟಿ, ಮತದಾರ ಚೀಟಿ ಸೇರಿದಂತೆ ಪ್ರತಿ ಹಂತದಲ್ಲೂ ನಮ್ಮನ್ನು ಸಮಾಜ ಕಡೆಗಣಿಸುತ್ತಿದೆ. ಅಧಿಕಾರಿಗಳು ಉದಾಸೀನ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶಿವಮೊಗ್ಗ ನ್ಯಾಯಾಲಯ ನನಗೆ ಕೆಲಸಕೊಟ್ಟಿದ್ದು, ನಾನು ಕೃತಜ್ಞನಾಗಿರುತ್ತೇನೆ ಎಂದು ಹೇಳುತ್ತಾರೆ.
ಮುಂದೇನು?: ನನ್ನಂತೆಯೇ ಸಂಕಷ್ಟ ಅನುಭವಿಸುತ್ತಿರುವವರ ಸಮುದಾಯ ದೊಡ್ಡದಿದೆ. ಇವರಿಗೆಲ್ಲಾ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕೊಡಿಸಬೇಕೆಂಬ ಕಲ್ಪನೆ ಇದೆ. ಈ ನಿಟ್ಟಿನಲ್ಲಿ ವಕೀಲರು, ನ್ಯಾಯಾಧೀಶರ ಸಲಹೆ ಸಹಕಾರ ಪಡೆಯುತ್ತಿದ್ದು, ಕೋರ್ಟ್ ಮೂಲಕವೇ ಪರಿಹಾರ ಪಡೆಯುವ ಉದ್ದೇಶ ಹೊಂದಲಾಗಿದೆ ಎಂದು ಕಿರಣ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಕಿರಣ ಹುಟ್ಟಿದ್ದು ಕೊಪ್ಪ, ಅವರ ತಂದೆಗೆ ಐದು ಜನ ಮಕ್ಕಳು. 7ನೇ ತರಗತಿಗೆ ಓದಿದ್ದು, ನಂತರ ದೈಹಿಕ ಬದಲಾವಣೆಯಿಂದಾಗಿ ಮನೆ, ಕೊಟ್ಟಿಗೆ ಕೆಲಸದಲ್ಲೇ ದಿನ ದಬ್ಬಿದರು. ಅಂತಿಮವಾಗಿ ಕೊಪ್ಪ ಬಿಟ್ಟು ಶಿವಮೊಗ್ಗಕ್ಕೆ ಬಂದ ನಂತರ ಲೈಂಗಿಕ ಅಲ್ಪಸಂಖ್ಯಾತರ ಪರವಾಗಿರುವ ಸಂಸ್ಥೆಗಳಲ್ಲಿ ಕೆಲಸ ಮಾಡಲಾರಂಭಿಸಿದರು, ಸಂಘಟನೆ ಕಟ್ಟಿದರು.
ಓದು ಬಿಟ್ಟು 22 ವರ್ಷದ ನಂತರ ಖಾಸಗಿಯಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಪಾಸು ಮಾಡಿಕೊಂಡಿದ್ದು, ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಉತ್ಸುಕರಾಗಿದ್ದಾರೆ. ಒಟ್ಟಾರೆ, ನ್ಯಾಯಾಲಯ ಎಂಬುದು ಕೇವಲ ನ್ಯಾಯದಾನ ಮಾಡುವ ಕೆಲಸವಷ್ಟನ್ನೇ ಮಾಡದೇ ತನ್ನ ಪರಿಮಿತಿಯೊಳಗೆ ಮಾದರಿ ಕಾರ್ಯವೊಂದನ್ನು ಮಾಡಿ ತೋರಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಕೆಲಸದ ಬಗ್ಗೆ ನಿಷ್ಟೆ, ಪ್ರಾಮಾಣಿಕತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
- ನ್ಯಾ. ಶರಶ್ಚಂದ್ರ ಬ.ಅಂಗಡಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ.

ಲೈಂಗಿಕ ಅಲ್ಪಸಂಖ್ಯಾತರು ಸಾಕಷ್ಟು ಸವಾಲು ಎದುರಿಸುತ್ತಿದ್ದಾರೆ. ಅವರನ್ನು ಮುಖ್ಯವಾಹಿನಿಗೆ ಸೇರಿಸಿ ಅವಕಾಶ ಕೊಡುವುದು ಎಲ್ಲರ ಕರ್ತವ್ಯ. ನಮ್ಮ ನ್ಯಾಯಾಲಯ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.
- ಎಚ್.ಎಂ. ನಂಜುಂಡಸ್ವಾಮಿ, ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ.


-ಶ್ರೀಕಾಂತ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.