ಮತ್ಸ್ಯ ಸಂತತಿ ಉಳಿಸಿ ಬೆಳೆಸಿ
ಶಿವಮೊಗ್ಗ: ಮನುಷ್ಯ ಪ್ರಕೃತಿಯ ಮೇಲೆ ನಿರಂತರವಾಗಿ ನಡೆಸುತ್ತಿರುವ ದಾಳಿಯಿಂದಾಗಿ ಸ್ವಾಭಾವಿಕವಾಗಿ ನಾಗರಿಕ ವ್ಯವಸ್ಥೆಗೆ ಪೂರಕವಾಗಿದ್ದ ಕೆಲ ಮತ್ಸ್ಯ ಸಂತತಿ ಅಳಿವಿನಂಚಿನಲ್ಲಿರುವುದು ನೋವಿನ ಸಂಗತಿ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ವಿಷಾದಿಸಿದರು.
ಅವರು ಶನಿವಾರ ಮೀನುಗಾರಿಕೆ ಇಲಾಖೆಯು ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಮೂರು ದಿನಗಳವರೆಗೆ ನಡೆಯಲಿರುವ ಮತ್ಸ್ಯಮೇಳವನ್ನು ಉದ್ಘಾಟಿಸಿ, ರಾಜ್ಯವು ವಿಶಾಲವಾದ ಸಮುದ್ರ ತೀರ ಹೊಂದಿದೆ. ಹಲವು ನದಿಗಳಿವೆ. ಸಾವಿರಾರು ಕೆರೆಕಟ್ಟೆಗಳಿವೆ. ಮೀನುಗಳನ್ನು ಬೆಳೆಸುವುದಕ್ಕೆ ವಿಪುಲ ಅವಕಾಶವಿದೆ. ಆದರೆ ಕಲುಷಿತಗೊಳ್ಳುತ್ತಿರುವ ಪರಿಸರ ಜಲಚರಗಳಿಗೆ ಕಂಟಕ ತಂದಿದೆ ಎಂದರು.
ಮೀನಿನ ಸಂತತಿ ಉಳಿಸಿ: ಮನುಷ್ಯ ತಿಳಿದೋ, ತಿಳಿಯದೆಯೋ ಜಲಮೂಲಗಳನ್ನು ಹಾಳು ಮಾಡುತ್ತಿದ್ದಾನೆ. ಹೊಲಗಳಿಗೆ ಸಿಂಪಡಿಸಿದ ರಸಾಯನಿಕಗಳು ನದಿತೊರೆಗಳು ಸೇರಿ ಕಲುಷಿತಗೊಳ್ಳುತ್ತಿವೆ. ಸರ್ಕಾರ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರರಿಗೆ ಸಮುದ್ರದಲ್ಲಿ ಮೀನುಗಳು ಸಂತಾನಾಭಿವೃದ್ದಿ ನಡೆಸುವ ಕಾಲದಲ್ಲಿ ಮೀನುಗಾರಿಕೆ ನಡೆಸದಂತೆ ನಿಷೇಧ ಹೇರಿದೆ. ಈಗಲಾದರೂ ಮೀನಿನ ಸಂತತಿ ಉಳಿಸಿ ಬೆಳೆಸಲು ಶ್ರಮಿಸಬೇಕು ಎಂದರು.
ಗ್ರಾಮೀಣ ಪ್ರದೇಶದ ಕೆರೆಗಳಲ್ಲಿ ಮೀನಿನ ಸಂತತಿ ನಾಶದ ಅಂಚಿಗೆ ಬಂದು ನಿಂತಿದೆ. ಕೆರೆಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುತ್ತಿದ್ದೇವೆ. ಅಲ್ಲದೇ ಕೆರೆಯನ್ನು ಒತ್ತುವರಿ ಮಾಡಿ ಸಾಗುವಳಿ ಮಾಡಿಕೊಳ್ಳುತ್ತಿದ್ದೇವೆ. ಹೀಗಾದರೆ ಮೀನಿನ ಸಂತತಿ ಉಳಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಮನುಷ್ಯ ಮತ್ತು ಪ್ರಕೃತಿ ಒಟ್ಟಾಗಿ ಬಾಳುವಂತಹ ಸಂಬಂಧ ಭಾರತದಲ್ಲಿರುವುದು ವಿಶೇಷ. ಅದಕ್ಕೆ ಧಾರ್ಮಿಕ ಕಾರಣಗಳೂ ಇವೆ ಎಂದರು.
ಮೀನುಗಾರರಿಗೆ ಯೋಜನೆ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮೀನುಗಾರರ ಕುಟುಂಬಗಳು ಇಂದು ಸಂಕಷ್ಟದಲ್ಲಿರುವುದನ್ನು ಗಮನಿಸಿ ಸರ್ಕಾರವು ಮೀನುಗಾರರ ಶ್ರೇಯೋಭಿವೃದ್ದಿ ಅನೇಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದಿದೆ. ಪ್ರಸ್ತುತ ಬಜೆಟ್ನಲ್ಲಿ ರಾಜ್ಯದ 3,000 ಮೀನುಗಾರರಿಗೆ ಮನೆಗಳನ್ನು ನಿರ್ಮಿಸಿಕೊಡಲು ಅಗತ್ಯ ಅನುದಾನ ಕಾಯ್ದಿರಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಅಂದ, ಆನಂದ, ಆರೋಗ್ಯಕ್ಕಾಗಿ ಅಕ್ವೇರಿಯಂ ಎಂಬ ಮಡಿಕೆ ಪತ್ರವನ್ನು ಹಾಗೂ ಜಿಲ್ಲೆಯ ಮೀನುಗಾರರ ವಿಳಾಸದ ಕೈಪಿಡಿಯನ್ನು ಆಹ್ವಾನಿತ ಗಣ್ಯರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ಸುರೇಖಾ ಮುರಳೀಧರ್, ವಿಶ್ವನಾಥ್ ಕಾಶಿ, ತಾ.ಪಂ. ಉಪಾಧ್ಯಕ್ಷೆ ಅತಿಯಾಬೇಗಂ, ಮೀನುಗಾರಿಕೆ ಇಲಾಖೆ ನಿರ್ದೇಶಕ ಹೆಚ್.ಎಸ್. ವೀರಪ್ಪಗೌಡ ಮತ್ತಿತರರು ಆಗಮಿಸಿದ್ದರು.
ಮೀನುಗಾರಿಕೆ ಇಲಾಖೆ ಉಪರ್ದೇಶಕ ಎಸ್.ಸಿ. ಹೇಮಂತರಾಜು ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

