ಜಾತಿ ಸಂಘಟನೆ ಅಪಾಯಕಾರಿ: ಡಾ. ಮಲ್ಲಿಕಾ
ಶಿವಮೊಗ್ಗ: ಇತ್ತೀಚಿನ ವರ್ಷಗಳಲ್ಲಿ ಜಾತಿವಾರು ಸಂಘಟನೆಗಳು ಹೆಚ್ಚಾಗುತ್ತಿದ್ದು, ಇದು ಅಪಾಯಕಾರಿ ಎಂದು ಹೇಳಲಾಗುತ್ತದೆ. ಆದರೆ, ಯಾವುದೇ ಸಮಾಜದವರು ಸೌಲಭ್ಯ ಪಡೆಯಲು, ಸಮಾಜದಲ್ಲಿ ವಿವಿಧ ಸ್ಥಾನಮಾನ ಪಡೆಯಲು ಸಂಘಟನೆ ಅಗತ್ಯ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಸಚಿವರಾದ ಡಾ. ಮಲ್ಲಿಕಾ ಘಂಟಿ ಅಭಿಪ್ರಾಯಪಟ್ಟಿದ್ದಾರೆ.
ಕಾಳಿದಾಸ ಸೇವಾ ಸಂಸ್ಥೆ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ಸಮಾಜಗಳೂ ಸಂಘಟಿತವಾಗುತ್ತಿವೆ. ಇದಕ್ಕೆ ಮೇಲ್ವರ್ಗದ ಸಮಾಜದವರಿಂದಲೇ ವಿರೋಧ ವ್ಯಕ್ತವಾಗುತ್ತಿರುವುದು ವಿಷಾದನೀಯ ಎಂದು ಹೇಳಿದರು.
ಜಾತಿಯ ಬಂಧಿ: ಪ್ರಗತಿಪರರು, ಸಾಹಿತಿಗಳು ಜಾತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬಾರದೆಂಬ ವಾದ ಕೇಳಿ ಬರುತ್ತಿದೆಯಾದರೂ ಯಾವುದೇ ವ್ಯಕ್ತಿ ಜಾತಿ ಬಿಡುತ್ತೇನೆಂದರೂ ಜಾತಿ ಮಾತ್ರ ಅವರನ್ನು ಬಿಡುತ್ತಿಲ್ಲ.
ಸಂವಿಧಾನ ವ್ಯವಸ್ಥೆಯಲ್ಲಿ ಒಂದಲ್ಲ ಒಂದು ಕಾರಣಕ್ಕೆ ಜಾತಿಯ ಬಂಧಿಗಳಾಗುತ್ತಿದ್ದೇವೆ ಎಂದು ಹೇಳಿದ ಅವರು, ಅಧಿಕಾರ, ಅಂತಸ್ತು ಇದ್ದರೂ ಜಾತಿ ಅನಿವಾರ್ಯವಾಗುತ್ತಿದೆ ಎಂದರು.
ಅಧಿಕಾರ ಯಾರ ಕೈಹಿಡಿದು ನಡೆಸುವುದಿಲ್ಲ. ದೇಶಿ ಅಧಿಕಾದ ಮೇಲೆ ವಿದೇಶಿ ಬಂಡವಾಳ ಸವಾರಿ ಮಾಡುತ್ತಿರುವುದರಿಂದ ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳಾಗಿದ್ದರೂ ಅವರ ಅಧಿಕಾರ ಎಷ್ಟು ದಿನ ಎಂಬುದು ಅವರಿಗೇ ಗೊತ್ತಿರುವುದಿಲ್ಲ.
ಸಮಾಜದ ವಿಚಾರ ಮಾತನಾಡಿದ್ದಕ್ಕೆ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯಿಂದ ತಮ್ಮನ್ನು ವರ್ಗಾವಣೆ ಮಾಡಲಾಯಿತೆಂದು ಹೇಳಿದರು.
ಅಭಿವೃದ್ಧಿ ಅಸಾಧ್ಯ: ಮಹಿಳೆಯರಿಗೆ ಸಾಮಾಜಿಕ, ಶೈಕ್ಷಣಿಕ, ವೈಚಾರಿಕ, ವೈಜ್ಞಾನಿಕವಾಗಿ ತಿಳಿವಳಿಕೆ ನೀಡದಿದ್ದರೆ ಯಾವುದೇ ಸಮಾಜ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದ ಅವರು, ಒಟ್ಟು ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚಿರುವ ಮಹಿಳೆಯರಿಗೆ ಆದ್ಯತೆ ನೀಡದಿದ್ದರೆ ದೇಶ ಅಭಿವೃದ್ಧಿಯಾಗುವುದಿಲ್ಲ ಎಂದು ಅಭಿಪ್ರಾಯಿಸಿದರು.
ಉತ್ತರ ಕರ್ನಾಟದ ಜಿಲ್ಲೆಗಳಲ್ಲಿ ಮಹಿಳೆಯರು ಸಭೆ, ಸಮಾರಂಭಗಳಿಗೆ ಹೋಗುವುದು ಕಡಿಮೆ. ಅಲ್ಲಿ ಪುರುಷರೇ ಇಡೀ ಸಭೆಗಳಲ್ಲಿ ಇರುತ್ತಾರೆ. ಇದಕ್ಕೆ ಅಲ್ಲಿನ ಹೆಣ್ಣುಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡದೆ ಇರುವುದೇ ಮುಖ್ಯ ಕಾರಣವಾಗಿದೆ. ಆದರೆ, ದಕ್ಷಿಣ ಕರ್ನಾಟದಲ್ಲಿ ಆ ಸ್ಥಿತಿ ಇಲ್ಲ. ಇಲ್ಲಿ ಮಹಿಳೆಯರೂ ಹೆಚ್ಚು ಶಿಕ್ಷಣ ಪಡೆದಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ಪಿ.ಬಾಲಪ್ಪ ವಹಿಸಿದ್ದರು. ಉಪಾಧ್ಯಕ್ಷ ಮಹಾಬಲೇಶ್ವರ್, ಕಾರ್ಯದರ್ಶಿ ಕೆ.ತಿಮ್ಮಪ್ಪ, ವಾಣಿಜ್ಯ ತೆರಿಗೆ ಇಲಾಖೆ ಜಿಲ್ಲಾ ಅಧಿಕಾರಿ ಟಿ. ದಾನೇಶ್, ಎಂ. ಈಶ್ವರಪ್ಪ, ನಾಗರಾಜ್, ಕೆ.ರಂಗನಾಥ ಹಾಜರಿದ್ದರು.
ನಾನು ಅನಾಥೆಯಾದೆ...
ಅಮೆರಿಕ ಕನ್ನಡಿಗರು ಪ್ರತಿವರ್ಷ ನಡೆಸುವ ಕನ್ನಡ ಸಮ್ಮೇಳನಕ್ಕೆ ಹೋದಾಗಿನ ಒಂದು ಘಟನೆಯನ್ನು ಮಲ್ಲಿಕಾ ಘಂಟಿ ನೆನಪಿಸಿಕೊಂಡರು.
ಅಮೆರಿಕಕ್ಕೆ ಹೋದರೂ ಜಾತಿ ಬಿಡಲಿಲ್ಲ. ಕನ್ನಡ ಸಮ್ಮೇಳನವೆಂದು ಅಲ್ಲಿಗೆ ಹೋದರೆ ಸಮ್ಮೇಳನದ ನಂತರ ಆಯಾ ಜಾತಿಯವರು ಬಂದು ಇಲ್ಲಿಂದ ಹೋದ ಪ್ರಮುಖರನ್ನು ಕರೆದುಕೊಂಡು ಹೋದರು. ನಾನು ಮಾತ್ರ ಏಕಾಂಗಿಯಾಗಿದ್ದೆ. ವಿದೇಶದಲ್ಲಿ ಅನಾಥ ಪ್ರಜ್ಞೆ ಕಾಡುವಂತಾಗಿತ್ತು. ಜಾತಿ ವ್ಯವಸ್ಥೆ ವಿದೇಶದಲ್ಲೂ ಬೇರು ಬಿಟ್ಟದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

