ಶಿವಮೊಗ್ಗ

ಚುನಾವಣೆ ಹಿನ್ನೆಲೆ: ಅಧಿಕಾರಿಗಳ ವರ್ಗಾವಣೆಗೆ ತಯಾರಿ

Published On :

ಶಿವಮೊಗ್ಗ: ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಚುನಾವಣಾ ಪೂರ್ವ ಪ್ರಕ್ರಿಯೆಗಳು ಅಧಿಕೃತವಾಗಿ ಆರಂಭವಾಗಿದೆ. ಒಂದೆಡೆ ಮತಯಂತ್ರಗಳ ಸಿದ್ಧತೆ ನಡೆದರೆ, ಮತ್ತೊಂದೆಡೆ ಅಧಿಕಾರಿಗಳ ನಿಯೋಜನೆ ಸಂಬಂಧ ಸಿದ್ಧತೆ ನಡೆದಿದೆ.
ಪ್ರಮುಖವಾಗಿ ಚುನಾವಣೆ-ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೇಲ್‌ಸ್ಥರದ ಅಧಿಕಾರಿಗಳ ವಿವರಗಳನ್ನು ಕ್ರೋಡೀಕರಣ ಮಾಡಲಾಗಿದ್ದು, ಕೇಂದ್ರ ಚುನಾವಣಾಧಿಕಾರಿ ಕಚೇರಿಯ ನಿರ್ದೇಶನ ಪಾಲನೆ ಮಾಡುವ ನಿಟ್ಟಿನಲ್ಲಿ ತಯಾರಿ ನಡೆಸಲಾಗುತ್ತಿದೆ.
ವರ್ಗಾವಣೆ: ಚುನಾವಣೆ ಹಿನ್ನೆಲೆಯಲ್ಲಿ ಹಾಲಿ ಮೂರು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಹಾಗೂ ಸ್ವಂತ ಜಿಲ್ಲೆಗೆ ಸೇರಿದ ಅಧಿಕಾರಿಗಳನ್ನು ವರ್ಗಾಯಿಸುವುದು ಇತ್ತೀಚಿನ ಚುನಾವಣೆ ಮುಂಚೆ ನಡೆಯುವ ಒಂದು ಪ್ರಕ್ರಿಯೆ. ಪಾರದರ್ಶಕವಾಗಿ ಚುನಾವಣೆ ನಡೆಯಬೇಕೆಂಬುದು ಆಯೋಗದ ಉದ್ದೇಶ. ಅದರಂತೆ, ಮುಂದಿನ ಲೋಕಸಭಾ ಚುನಾವಣೆ ಕಾರಣದಿಂದ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೇಲ್‌ಸ್ತರದ ಅಧಿಕಾರಿಗಳ ಮಾಹಿತಿ ಪಟ್ಟಿ ಮಾಡಿದ್ದು, ಸದ್ಯವೇ ವರ್ಗಾವಣೆ ಸಹ ನಡೆಯಲಿದೆ.
ಈ ಸಂಬಂಧ ಜಿಲ್ಲಾ ಚುನಾವಣಾಧಿಕಾರಿಯಾದಂತಹ ವಿಪುಲ್ ಬನ್ಸಲ್ ಅವರ ಮಾರ್ಗದರ್ಶನದಲ್ಲಿ ಮೊದಲ ಸುತ್ತಿನಲ್ಲಿ ಅಧಿಕಾರಿಗಳ ಪಟ್ಟಿ ಸಿದ್ಧಪಡಿಸಿ ಕಳುಹಿಸಿಕೊಡಲಾಗಿತ್ತು. ಇದೀಗ ಎರಡನೇ ಬಾರಿ ಮತ್ತೆ ಮಾಹಿತಿ ಕೇಳಿದ್ದು, ಅದರ ಸಂಗ್ರಹ ಕಾರ್ಯ ನಡೆದಿದೆ. ಶುಕ್ರವಾರ ಅಥವಾ ಶನಿವಾರ ಪಟ್ಟಿ ಅಂತಿಮವಾಗಲಿದ್ದು, ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.
ಜಿಲ್ಲಾಧಿಕಾರಿ ಆದಿಯಾಗಿ, ಅಪರ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಸೀಲ್ದಾರ್, ವಲಯ ಐ.ಜಿ., ಡಿಐಜಿ, ಎಸ್ಪಿ, ಹೆಚ್ಚುವರಿ ಎಸ್‌ಸ್ಪಿ, ಡಿವೈಎಸ್‌ಪಿ, ಇನ್‌ಸ್ಪೆಕ್ಟರ್, ಪಿಎಸ್‌ಐ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಚುನಾವಣಾ ಆಯೋಗದ ಆದೇಶ ಅನ್ವಯವಾಗಲಿದೆ. ಈ ಅಧಿಕಾರಿಗಳು ಕಳೆದ ಮೂರು ವರ್ಷಕ್ಕೂ ಅಧಿಕ ಕಾಲ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಅದೇ ಜಿಲ್ಲೆಯವರಾಗಿದ್ದರೆ ಅವರ ವರ್ಗಾವಣೆ ನಿಶ್ಚಿತ. ಕೇಂದ್ರ ಚುನಾವಣಾಧಿಕಾರಿಯವರ ಆದೇಶದಂತೆ ಅಧಿಕಾರಿಗಳ ಪಟ್ಟಿ ಮಾಡಲಾಗಿದೆ.
ಯಾರೆಲ್ಲ ವರ್ಗಾವಣೆಯಾಗುತ್ತಾರೆ ಎಂಬುದನ್ನು ಸರ್ಕಾರ ತೀರ್ಮಾನಿಸುತ್ತದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಮತದಾನ: ಮತದಾನ ಪ್ರಮಾಣ ಹೆಚ್ಚಿಸುವ ವಿಚಾರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೈಗೊಂಡ ಪರಿಶ್ರಮದಿಂದ ಯಶಸ್ಸು ಕಂಡಿದ್ದೇವೆ. ಈ ಬಾರಿಯೂ ಮತದಾನ ಜಾಗೃತಿ ಅಭಿಯಾನ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಯಾವೆಲ್ಲಾ ಬೂತ್‌ಗಳಲ್ಲಿ ಕಡಿಮೆ ಮತದಾನವಾಗಿದೆ, ಯಾವ ಕಾರಣಕ್ಕಾಗಿ ಮತದಾನ ಕಡಿಮೆಯಾಗಿದೆ ಎಂಬುದನ್ನು ಪತ್ತೆ ಹಚ್ಚಿ, ಅಲ್ಲಿಗೆ ಹೆಚ್ಚಿನ ಒತ್ತುಕೊಡಲಾಗುತ್ತದೆ. ಮತದಾನ ಕಡಿಮೆಯಾದ ಸ್ಥಳಗಳಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮ ರೂಪಿಸುವ ಉದ್ದೇಶ ಹೊಂದಲಾಗಿದೆ ಎಂದು ವಿವರಿಸಿದರು.
ವಿದ್ಯಾರ್ಥಿ ರಾಯಭಾರಿ ನೇಮಕ: ಯುವ ಜನಾಂಗದಲ್ಲಿ ಮತದಾನದ ಮಹತ್ವದ ಕುರಿತಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹಾಗೂ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ಮಾಡಲು ಪ್ರತಿ ಕಾಲೇಜಿನಲ್ಲಿ ವಿದ್ಯಾರ್ಥಿ ರಾಯಭಾರಿ ನೇಮಿಸಲಾಗುತ್ತಿದೆ. ಜೊತೆಗೆ ಗುಂಪುಗಳನ್ನು ರಚಿಸಲಾಗುತ್ತದೆ. ಅವರು ಮತ ಜಾಗೃತಿ ಜೊತೆಗೆ ಮತದಾರರ ಪಟ್ಟಿಯಲ್ಲಿ ಹೊಸ ಮತದಾರರನ್ನು (ಅರ್ಹ ವಿದ್ಯಾರ್ಥಿಗಳನ್ನು) ಸೇರಿಸುವ ನಿಟ್ಟಿನಲ್ಲಿ ಈ ತಂಡ ಕಾರ್ಯನಿರ್ವಹಿಸಲಿದೆ.
ಚುನಾವಣಾ ದಿನಾಂಕ ಘೋಷಣೆಯಾದ ನಂತರ ಕಾಲೇಜು ರಾಯಭಾರಿಗಳ ಸಮಾವೇಶ ನಡೆಸಲಾಗುವುದು. ಇವರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡಲಾಗುವುದು. ಜೊತೆಗೆ ಚುನಾವಣಾ ಆಯೋಗ ಕೂಡ ಕಾಲೇಜುಗಳಲ್ಲಿ ಮತದಾನ ಸಂಬಂಧಿತ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.