ಶಿವಮೊಗ್ಗ

ಮಾದರಿಯಾದ ಜಿಲ್ಲೆಯ 'ಲೋಕ್ ಅದಾಲತ್‌'

Published On :

ಶಿವಮೊಗ್ಗ: ಕೋರ್ಟ್ ಎಂದರೆ ಅದರದ್ದೇ ಆದ ಗೌರವ, ಘನತೆ. ಹಾಗೆಯೇ ಅದರದ್ದೇ ಆದ ಕಟ್ಟಳೆಗಳು, ನಿಬಂಧನೆಗಳು, ಪ್ರತ್ಯೇಕ ವಾತಾವರಣ. ಈ ಮಧ್ಯೆ, ಶಿವಮೊಗ್ಗ ಜಿಲ್ಲಾ ನ್ಯಾಯಾಲಯವು ಬೇರೆ ಜಿಲ್ಲೆಯ ಕೋರ್ಟ್‌ಗಿಂತ ಭಿನ್ನವಾಗಿ ತನ್ನ ಚೌಕಟ್ಟಿನೊಳಗೆ ವಿಶಿಷ್ಟ ರೀತಿಯಲ್ಲಿ ಸಾರ್ವಜನಿಕರ ಉಪಯೋಗಿ ಉಪಕ್ರಮಗಳ ಮೂಲಕ ತನ್ನನ್ನು ಒಡ್ಡಿಕೊಳ್ಳುತ್ತಿದೆ.
ಲೋಕ ಅದಾಲತ್ ಮೂಲಕ ವಿಶಿಷ್ಟ ಪ್ರಯೋಗ ನಡೆಸಿದ ಜಿಲ್ಲಾ ಕೋರ್ಟ್‌ಗೆ ರಾಜ್ಯ ಹೈಕೋರ್ಟ್ ಪತ್ರ ಬರೆದು ಮೆಚ್ಚುಗೆ ಸೂಚಿಸಿದೆ. ರಾಷ್ಟ್ರೀಯ ಲೋಕ ಅದಾಲತ್ ಮೂಲಕ ಯಶಸ್ಸು ಸಾಧಿಸಿದ್ದು, ನ್ಯಾಯಾಂಗ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿ ಹೈಕೋರ್ಟ್ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರಲ್ಲದೆ, ಕಾರ್ಯವೈಖರಿಯನ್ನು ಕೊಂಡಾಡಿದ್ದಾರೆ.
ಹಣಕಾಸು ವ್ಯಾಜ್ಯ: ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ಪರ ಹಾಗೂ ವಿರುದ್ಧದ ವ್ಯಾಜ್ಯ ಹಾಗೂ ಪೂರ್ವ ಪ್ರಕರಣಗಳ ಶೀಘ್ರ ನ್ಯಾಯ ವಿತರಣೆಗೆ ವಿಶೇಷ ಕಾಳಜಿ ವಹಿಸಿರುವ ನ್ಯಾಯಾಲಯವು ದೊಡ್ಡ ಹೆಜ್ಜೆ ಇಟ್ಟಿದೆ. ಇದಕ್ಕೆ ಪೂರಕವಾಗಿ ಕೆನರಾ ಬ್ಯಾಂಕ್ ಹಿರಿಯ ಅಧಿಕಾರಿಗಳೂ ಸಾಥ್ ನೀಡಿದ್ದು, ಇದೇ ಮೊದಲು ಎಂಬಂತೆ ಅತಿ ದೊಡ್ಡ ಸಂಖ್ಯೆಯ ಹಣಕಾಸು ಸಂಸ್ಥೆಯೊಂದರ ವ್ಯಾಜ್ಯಗಳ ವಿಲೇವಾರಿಗೆ ಮುಂದಾಗಿದೆ.
ಒಂದು ದಶಕದ ಹಿಂದೆ ಶಿವಮೊಗ್ಗ ಜಿಲ್ಲೆಯ ಕೆನರಾ ಬ್ಯಾಂಕಿನ ಶಾಖೆಗಳಲ್ಲಿ ಸಾಲ ಪಡೆದು ಸುಸ್ತಿಯಾಗಿರುವ 11 ಸಾವಿರ ಸಾಲದ ಖಾತೆಗಳನ್ನು ಇತ್ಯರ್ಥಗೊಳಿಸುವ ಕಾರ್ಯ ಇನ್ನೊಂದು ವಾರ ಕಾಲ ನಡೆಯಲಿದೆ. ಪ್ರಮುಖವಾಗಿ ಕೃಷಿ, ಟ್ರ್ಯಾಕ್ಟರ್, ವಿದ್ಯಾಭ್ಯಾಸ, ವ್ಯಾಪಾರ- ವಹಿವಾಟು, ಗೃಹ ಸಾಲ ಪಡೆದು ಸುಸ್ತಿದಾರರಾದ ಅರ್ಹರನ್ನು ಗುರುತಿಸಿ ಅದಾಲತ್‌ಗೆ ಆಹ್ವಾನಿಸಿ ಪ್ರಕರಣ ಇತ್ಯರ್ಥಪಡಿಸಲಾಗುತ್ತಿದೆ.
ಅದೇ ರೀತಿ ಎಸ್‌ಬಿಐ ಸಹ ಮುಂದೆ ಬಂದಿದ್ದು, ತನ್ನ ವ್ಯಾಪ್ತಿಯ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಆಸಕ್ತಿ ತೋರಿದೆ. ಮಾರ್ಚ್ ಮೊದಲ ವಾರದ ತರುವಾಯ ಎಸ್‌ಬಿಐ ಪ್ರಕರಣಗಳು ಅದಾಲತ್‌ನಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಇದೇ ರೀತಿ ವಿವಿಧ ಬ್ಯಾಂಕುಗಳ ಸಹ ವಿಚಾರಣೆಯಲ್ಲಿವೆ.
ಮುಂದೆ ಏನು?: ಸದ್ಯ ಹಣಕಾಸು ಸಂಸ್ಥೆಗಳ ವ್ಯಾಜ್ಯ ಕೈಗೆತ್ತಿಕೊಂಡು ಬಗೆಹರಿಸಲಾಗುತ್ತದೆ. ಸದ್ಯವೇ ವಿವಿಧ ಮೊಬೈಲ್ ಸರ್ವಿಸ್‌ಗಳನ್ನು ನೀಡುತ್ತಿರುವ ವಿವಿಧ ಕಂಪನಿಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಪರಿಹರಿಸಲು ನಿರ್ಧರಿಸಲಾಗಿದೆ.
ಬಿಎಸ್‌ಎನ್‌ಎಲ್ ಆದಿಯಾಗಿ ಏರ್‌ಟೆಲ್, ಐಡಿಯಾ ಸೇರಿದಂತೆ ವಿವಿಧ ಮೊಬೈಲ್ ಸರ್ವಿಸ್ ಪ್ರೊವೈಡರ್‌ಗಳೊಂದಿಗೆ ವಿಶೇಷ ಅದಾಲತ್ ಕುರಿತಾಗಿ ಮಾತುಕತೆ ನಡೆಯುತ್ತಿದೆ. ಈ ಅದಾಲತ್‌ಗಳಲ್ಲಿ ಮೊಬೈಲ್ ಪ್ರೊವೈಡರ್, ಗ್ರಾಹಕರು ಮತ್ತು ಇತರೆ ಸಂಸ್ಥೆಗಳ ನಡುವಿನ ವ್ಯಾಜ್ಯಗಳನ್ನು ಪರಿಹರಿಸಲಾಗುತ್ತದೆ.
ಅದೇ ರೀತಿ ಇನ್ನೊಂದು ಪ್ರಮುಖವಾಗಿ ಸರ್ಕಾರದ ವಿವಿಧ ಏಜೆನ್ಸಿಗಳ ಪ್ರಕರಣಗಳನ್ನು ಅದಾಲತ್‌ನಲ್ಲಿ ಪರಿಹರಿಸುಲ ಚಿಂತನೆ ಇದ್ದು, ಸಂಬಂಧಪಟ್ಟವರನ್ನು ನ್ಯಾಯಾಲಯವೇ ಖುದ್ದಾಗಿ ಸಂಪರ್ಕಿಸುತ್ತಿದೆ.
ಸರ್ಕಾರದ ವಿವಿಧ ಇಲಾಖೆಗಳು ಹೂಡಿರುವ ವ್ಯಾಜ್ಯಗಳು ಹಾಗೂ ಸರ್ಕಾರದ ವಿರುದ್ಧ ಸಾರ್ವಜನಿಕರು ಅಥವಾ ಗ್ರಾಹಕರು ಹೂಡಿರುವ ವ್ಯಾಜ್ಯಗಳಿಗೆ ಪರಿಹಾರ ಕೊಡುವ ಪ್ರಯತ್ನ ಮಾಡಲಾಗುತ್ತಿದೆ.
ವಿಶೇಷ: ಈ ರೀತಿಯ ಪ್ರಯತ್ನವೇ ವಿಶೇಷ ಎಂದು ವಕೀಲರು ಅಭಿಪ್ರಾಯಪಡುತ್ತಾರೆ. ಬೇರೆ ಜಿಲ್ಲೆಗಳಲ್ಲಿ ಈ ರೀತಿ ಖುದ್ದು ಆಸಕ್ತಿ ತೆಗೆದುಕೊಂಡು ವ್ಯಾಜ್ಯಗಳನ್ನು ಮುಕ್ತಾಯಗೊಳಿಸುವ ಪ್ರಯತ್ನ ನಡೆದಿದ್ದಿಲ್ಲ ಎಂದು ವಿವರಿಸುತ್ತಾರೆ.
ಹಾಗೆಯೇ ಶಿವಮೊಗ್ಗದ ಅದಾಲತ್ ಪ್ರಯೋಗವನ್ನು ವಿವಿಧ ನೆರೆ ವಿವಿಧ ಜಿಲ್ಲೆಗಳ ನ್ಯಾಯಾಲಯಗಳೂ ಅನುಷ್ಠಾನಕ್ಕೆ ಆಸಕ್ತಿ ತೋರಿಸಿವೆ.

ಅದಾಲತ್‌ನಿಂದಾಗುವ ಪ್ರಯೋಜನ
1.  ಕಕ್ಷಿಗಾರರಿಗೆ ಅಲೆದಾಟ ತಪ್ಪುತ್ತದೆ, ಹೊರೆ ಕಡಿಮೆ, ಸಮಯ ಉಳಿತಾಯ
2.  ನ್ಯಾಯಾಲಯದ ಮೇಲಿನ ಒತ್ತಡ ಕಡಿಮೆಯಾಗುತ್ತದೆ
3.  ಅದಾಲತ್‌ನಲ್ಲಿ ವ್ಯಾಜ್ಯ ಬಗೆಹರಿಸಿಕೊಳ್ಳುವ ಕಾರಣ ಕೆಲವು ರಿಯಾಯಿತಿ ಸಿಗಲಿದೆ
4.  ಅದಾಲತ್‌ನಲ್ಲಿ ಬಗೆಹರಿದ ಪ್ರಕರಣ ಮತ್ತೆ ಮೇಲ್ಮನವಿಗೆ ಅವಕಾಶ ಇಲ್ಲದೇ ಇರುವುದು
5.  ಹಾವು ಸಾಯಲ್ಲ- ಕೋಲು ಮುರಿಯಲ್ಲ ಎಂಬಂತಹ ಸಾಕಷ್ಟು ಪ್ರಕರಣದ ಅಂತ್ಯ

ಕೋರ್ಟ್ ಮೂಲಕ ಜನನ, ವಿವಾಹ ಪ್ರಮಾಣ ಪತ್ರ: ಚಿಂತನೆ
ಜನ್ಮದಿನ ಪ್ರಮಾಣ ಪತ್ರ ಮತ್ತು ವಿವಾಹ ಪ್ರಮಾಣ ಪತ್ರ ಪಡೆಯುವುದು ಈಗಿನ ಸರ್ಕಾರಿ ವ್ಯವಸ್ಥೆಯಲ್ಲಿ ಸಾಕಷ್ಟು ಅಡೆತಡೆ ಇದೆ. ಸಾಕಷ್ಟು ಸಂದರ್ಭದಲ್ಲಿ ಜನಸಾಮಾನ್ಯರಿಗೆ ಈ ಪ್ರಮಾಣದ ಅವಶ್ಯಕತೆ ಹೆಚ್ಚಾಗಿದೆ. ಹೀಗಾಗಿ ಸಾಮಾಜಿಕ ಸಂಸ್ಥೆಗಳ ಸಹಯೋಗದಲ್ಲಿ ನ್ಯಾಯಾಲಯದ ಮುಖಾಂತರವೇ ಅಗತ್ಯ ಇರುವವರಿಗೆ ಸಾಮೂಹಿಕವಾಗಿ ಜನ್ಮದಿನ ಪ್ರಮಾಣಪತ್ರ ಮತ್ತು ಅರ್ಹರಿಗೆ ವಿವಾಹ ಪ್ರಮಾಣಪತ್ರ ಒದಗಿಸುವ ಆಲೋಚನೆ ಇದೆ. ಶೀಘ್ರವೇ ಅದನ್ನೂ ಕಾರ್ಯರೂಪಕ್ಕೆ ತರುತ್ತೇವೆ. ಇದರಿಂದ ಸಾಮಾನ್ಯ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಮೊದಲನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಚ್.ಎಂ.ನಂಜುಂಡಸ್ವಾಮಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.